Advertisement

ಕೆಜಿಐಡಿಗೆ ಇನ್ನೂ ಸಿಗದ ಗಣಕೀಕರಣ ಭಾಗ್ಯ!

09:47 AM Sep 02, 2017 | |

ಬೆಂಗಳೂರು: ಸರ್ಕಾರ ಹಾಗೂ ತಮ್ಮ ವರ್ಚಸ್ಸು ವೃದ್ಧಿಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌, ಟ್ವಿಟರ್‌ ಬಳಕೆಯಲ್ಲಿ ಸಕ್ರಿಯರಾಗಿದ್ದಾರೆ. ಜತೆಗೆ ಸರ್ಕಾರಿ ಯೋಜನೆಗಳ ಪ್ರಚಾರಕ್ಕಾಗಿ ಆಧುನಿಕ ತಂತ್ರಜ್ಞಾನ ಬಳಕೆಗೂ ಆದ್ಯತೆ ನೀಡಿದ್ದಾರೆ. ಆದರೆ, ತಮ್ಮದೇ ಉಸ್ತುವಾರಿಯಲ್ಲಿರುವ ಇಲಾಖೆಗೆ ಗಣಕೀಕರಣ ಭಾಗ್ಯ ಸಿಗದಿರುವುದು ದುರದೃಷ್ಟಕರ!

Advertisement

ಮೈಸೂರು ಸಂಸ್ಥಾನದ ಹತ್ತನೇ ಚಾಮರಾಜ ಒಡೆಯರ್‌ ದೂರದೃಷ್ಟಿ ಫ‌ಲವಾಗಿ 1891ರಲ್ಲೇ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ಸ್ಥಾಪನೆಯಾಯಿತು. ಇಂತಹ ಐತಿಹಾಸಿಕ ಇಲಾಖೆಯ ಕೇಂದ್ರ ಕಚೇರಿ ವಿಧಾನಸೌಧದ ಕೂಗಳತೆ ದೂರದಲ್ಲಿರುವ ವಿಶ್ವೇಶ್ವರಯ್ಯ ಗೋಪುರದಲ್ಲಿದ್ದರೂ ಇದುವರೆಗೆ ಗಣಕೀಕರಣಗೊಂಡಿಲ್ಲವೆನ್ನುವುದು  ನಂಬಲಸಾಧ್ಯವಾದರೂ ನಂಬಲೇಬೇಕಾದ ಸಂಗತಿ. ರಾಜ್ಯ ಸರ್ಕಾರದ ಬಹುತೇಕ ಇಲಾಖೆಗಳು ಗಣಕೀಕರಣಗೊಂಡು ದಶಕಗಳೇ ಕಳೆದಿವೆ.

ಗ್ರಾಮ ಪಂಚಾಯಿತಿಯಿಂದ ಹಿಡಿದು ಶಕ್ತಿ ಕೇಂದ್ರ ವಿಧಾನಸೌಧದವರೆಗಿನ ಎಲ್ಲ ಹಂತಗಳ ಕಚೇರಿಗಳೂ ಕಂಪ್ಯೂಟರೀಕರಣಗೊಂಡಿವೆ, ಹೈಟೆಕ್‌ ಸ್ಪರ್ಶ ಪಡೆದಿವೆ. ಅಷ್ಟೇ ಅಲ್ಲದೆ ಹಲವು ಇಲಾಖೆಗಳ ಆಡಳಿತ ಡಿಜಿಟಲೀಕರಣದತ್ತ ಮುಂದಾಗಿವೆ. ಆದರೆ ಹಣಕಾಸು ಇಲಾಖೆಯ ಅಧೀನದ ಹಾಗೂ ರಾಜ್ಯ ಸರ್ಕಾರಿ ನೌಕರರ ವಿಮಾ ಸೇವೆ ನಿರ್ವಹಣೆ ಹೊಣೆ ಹೊತ್ತ ಇಲಾಖೆಗೆ ಈ ಆಧುನಿಕ ತಂತ್ರಜ್ಞಾನದ ಯುಗದಲ್ಲೂ ಓಬಿರಾಯನ ಕಾಲದ ಪದ್ಧತಿಯಲ್ಲೇ ಉಳಿದಿರುವುದು ಸರ್ಕಾರದ ಇ-ಆಡಳಿತದ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ರಾಜ್ಯ ಸರ್ಕಾರಿ ಹುದ್ದೆಗೆ ಸೇರಿದವರಿಗೆ ಮರುಕ್ಷಣದಲ್ಲೇ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯಡಿ (ಕೆಜಿಐಡಿ) ವಿಮಾ ಸೌಲಭ್ಯ ಸಿಗಲಿದೆ. ಇದು ಕಡ್ಡಾಯವಾಗಿದ್ದು, ಪ್ರತಿ ನೌಕರರ ವೇತನದಲ್ಲಿ ನಿರ್ದಿಷ್ಟ ಮೊತ್ತ ಕಡಿತ ಮಾಡಿಕೊಂಡು ವಿಮಾ ಸೌಲಭ್ಯ ಕಲ್ಪಿಸುತ್ತದೆ. ನಿರ್ದಿಷ್ಟ ಅವಧಿ ಪೂರೈಸಿದ ಬಳಿಕ ತಮ್ಮ ವಿಮಾ ಮೊತ್ತದ ಮೇಲೆ ಸಾಲ ಸೌಲಭ್ಯವನ್ನೂ ಒದಗಿಸುತ್ತದೆ. ಸುಮಾರು 6.50 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದು, ಇದರಲ್ಲಿ ವಿವಿಧ ನಿಗಮ, ಮಂಡಳಿಗಳ ನೌಕರರನ್ನು ಹೊರತುಪಡಿಸಿ ಉಳಿದವರೆಲ್ಲಾ ವಿಮಾ ಸೌಲಭ್ಯಕ್ಕೆ ಒಳಪಟ್ಟಿರುತ್ತಾರೆ.

ಕೇಂದ್ರ ಕಚೇರಿ ಮಾತ್ರವಲ್ಲದೇ ಪ್ರತಿ ಜಿಲ್ಲೆಯಲ್ಲೂ ಇಲಾಖೆ ಕಚೇರಿಗಳಿದ್ದು, ಆಯಾ ವ್ಯಾಪ್ತಿಯಲ್ಲೇ ವಿಮಾ ಮೊತ್ತ ಕಡಿತ, ಇತರೆ ಸೇವೆ ಒದಗಿಸುತ್ತಿದೆ. ನೌಕರರ ಪ್ರತಿ ತಿಂಗಳ ವಿಮಾ ಕಂತಿನ ಮೊತ್ತ ಕಡಿತದ ಜತೆಗೆ ವಿಮಾ ಮೊತ್ತ ಆಧರಿಸಿ ಪಡೆದಿರುವ ಸಾಲದ ಕಂತಿನ ಮೊತ್ತವನ್ನು ಕಡಿತಗೊಳಿಸುವ ಜವಾಬ್ದಾರಿ ಇಲಾಖೆ ಮೇಲಿರುತ್ತದೆ. ವಿಳಂಬ ಪಾವತಿ, ದಾಖಲೆಗಳಲ್ಲಿ ಲೋಪ ಇತರ ಕಾರಣಗಳಿಗೆ ವ್ಯತ್ಯಾಸವಾದಾಗ ಅದನ್ನು ಸರಿಪಡಿಸಿ ಸಮರ್ಪಕವಾಗಿ ನಿರ್ವಹಿಸುತ್ತದೆ. 55 ವರ್ಷ ಪೂರೈಸಿದ ನೌಕರರ ದಾಖಲೆಗಳನ್ನು ಇನ್ನೂ 10 ವರ್ಷ ನಿರ್ವಹಣೆ ಮಾಡಲಿದೆ.

ಕೆಜಿಐಡಿ ಕೇಂದ್ರ ಕಚೇರಿಯಲ್ಲಿ ಸುಮಾರು 186 ಅಧಿಕಾರಿ, ನೌಕರ, ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರು ವ್ಯಾಪ್ತಿಯಲ್ಲಿ ಸರ್ಕಾರದ ಎಲ್ಲ ಇಲಾಖೆಗಳ ನೌಕರರು, ಸರ್ಕಾರಿ ವಾಹನಗಳ ವಿಮಾಗೆ ಸಂಬಂಧಪಟ್ಟಂತೆ ದಾಖಲೆಗಳ ನಿರ್ವಹಣೆ ಇಲ್ಲಿ ನಡೆಯುತ್ತದೆ. ಆದರೆ, ವಾಹನ ವಿಭಾಗ ಹಾಗೂ ಎಕ್ಸ್‌ಟ್ರಾಕ್ಷನ್‌ ವಿಭಾಗ (ಸುಮಾರು 35 ಮಂದಿ ಕಾರ್ಯ ನಿರ್ವಹಣೆ) ಹೊರತುಪಡಿಸಿದರೆ ಉಳಿದ ಯಾವ ವಿಭಾಗದಲ್ಲೂ
ಕಂಪ್ಯೂಟರ್‌ಗಳಾಗಲಿ, ಸೂಕ್ತ ಸಾಫ್ಟ್ವೇರ್‌ ಮೂಲಕ ದಾಖಲೆಗಳ ನಿರ್ವಹಣೆಯಾಗಲಿ ಇಲ್ಲ.

Advertisement

ವಿವಿಧ ಸವಾಲು: ಇಲಾಖೆ ಕೇಂದ್ರ ಕಚೇರಿಯಲ್ಲಿ ಕಂಪ್ಯೂಟರ್‌ಗಳಿಲ್ಲದ ಕಾರಣ ನೌಕರರು ಪ್ರತಿ ದಾಖಲೆಗಳನ್ನು ಪರಿಶೀಲಿಸಿ ಕೈಬರಹದಲ್ಲೇ
ವಿವರಗಳನ್ನು ನಮೂದಿಸಿ ಸಂರಕ್ಷಿಸಿಡಬೇಕಾಗುತ್ತದೆ. ನೌಕರರು ವರ್ಗಾವಣೆಯಾದಾಗ ಅವರ ದಾಖಲೆಗಳನ್ನೆಲ್ಲ ಪತ್ರ ಮುಖೇನ ಪಡೆದು ದಾಖಲಿಸುವ ಹೊತ್ತಿಗೆ ಎರಡು-ಮೂರು ತಿಂಗಳು ವಿಳಂಬವಾಗುವ ಸಾಧ್ಯತೆ ಇರುತ್ತದೆ. ಕಾಗದ ದಾಖಲೆಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಬೇಕಾದ ಕಾರಣ ಧೂಳಿನ ಸಮಸ್ಯೆ ಕಾಡುತ್ತದೆ. ಅಲ್ಲದೆ, ಕಾಗದದ ದಾಖಲೆಗಳನ್ನು ಸುದೀರ್ಘ‌ ಕಾಲ ಸಂರಕ್ಷಿಸುವುದು ಸವಾಲಿನ ಕೆಲಸ ಎನ್ನಲಾಗಿದೆ.

ಗಣಕೀಕೃತ ವ್ಯವಸ್ಥೆಯಿಂದ ತ್ವರಿತ ಸೇವೆ ನಿರೀಕ್ಷೆ: ಗಣಕೀಕೃತ ವ್ಯವಸ್ಥೆಯಿಂದ ಇಲಾಖೆಯ ಎಲ್ಲ ಸೇವೆಗಳನ್ನು ತ್ವರಿತವಾಗಿ ಕಲ್ಪಿಸಲು ಅನುಕೂಲವಾಗಲಿದೆ. ಅಲ್ಲದೇ ನೌಕರರು ತಮ್ಮ ವಿಮಾ, ಸಾಲ ಮೊತ್ತದ ಕಂತಿನ ಮೊತ್ತ, ಬಾಕಿ ಕಂತುಗಳ ವಿವರ ಸೇರಿ ಇತರ ಮಾಹಿತಿಯನ್ನು 
ತ್ವರಿತವಾಗಿ ಪಡೆಯಬಹುದಾಗಿದೆ. ಅಲ್ಲದೆ, ವರ್ಗಾವಣೆಗೊಂಡ ನೌಕರರಿಗೆ ಸಂಬಂಧಪಟ್ಟ ದಾಖಲೆ ನಿರ್ವಹಣೆಯು ಆನ್‌ಲೈನ್‌ ಮೂಲಕ
ತ್ವರಿತವಾಗಿ ನಡೆಯಲಿದೆ. ಅವಧಿ ಪೂರೈಕೆ, ನೌಕರರ ಮರಣ, ಸ್ವಯಂ ನಿವೃತ್ತಿ ಪ್ರಕರಣದಲ್ಲಿ ಅಂತಿಮ ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳಲು ತಿಂಗಳುಗಳೇ ಬೇಕಾಗಲಿದೆ. ಗಣಕೀಕೃತ ವ್ಯವಸ್ಥೆ ತ್ವರಿತವಾಗಿ ಸೇವೆ ಒದಗಿಸಬಹುದು ಎಂದು ಮೂಲಗಳು ತಿಳಿಸಿವೆ.

ಮೂರು ವರ್ಷದ ಹಿಂದೆಯೇ ಪ್ರಸ್ತಾವ
ಇಲಾಖೆಯ ಕೇಂದ್ರ ಕಚೇರಿಗೆ ಕಂಪ್ಯೂಟರ್‌ಗಳ ಪೂರೈಕೆಗೆ ಸಂಬಂಧಪಟ್ಟಂತೆ ಮೂರು ವರ್ಷದ ಹಿಂದೆಯೇ ಇಲಾಖೆಯ ನಿರ್ದೇಶಕರು ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಈವರೆಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಹಣಕಾಸು ಇಲಾಖೆ ಅಧೀನದಲ್ಲೇ ಇರುವ ಇಲಾಖೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಗಮನ ನೀಡುತ್ತಿಲ್ಲ ಎಂಬ ಬೇಸರ ವ್ಯಕ್ತವಾಗಿದೆ. ಸರ್ಕಾರ ಹಾಗೂ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಅಗತ್ಯವಿರುವ ಎಲ್ಲ ಕಸರತ್ತು ನಡೆಸುತ್ತಿರುವ ಮುಖ್ಯಮಂತ್ರಿಗಳು ತಮ್ಮದೇ ಉಸ್ತುವಾರಿಯಲ್ಲಿರುವ ಇಲಾಖೆಯ ಗಣಕೀಕರಣಕ್ಕೆ ಆದ್ಯತೆ ನೀಡದಿರುವುದು ಚರ್ಚೆಗೆ ಗ್ರಾಸವಾಗಿದೆ.

ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next