Advertisement

ಕೆಜಿಎಫ್ ಡಿಸೆಂಬರ್‌ 21ಕ್ಕೆ ಬಿಡುಗಡೆ

03:46 PM Oct 11, 2018 | Team Udayavani |

ಯಶ್‌ ಅಭಿನಯದ “ಕೆಜಿಎಫ್’ ಚಿತ್ರದ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿದೆ. ಚಿತ್ರದ ಬಿಡುಗಡೆಯಷ್ಟೇ ಅಲ್ಲ, ಆ ಚಿತ್ರದ ಟ್ರೇಲರ್‌ ಬಿಡುಗಡೆ ಕೂಡ ಮುಂದೆ ಸಾಗಿದೆ. ಹೌದು, ಈ ಹಿಂದೆ ನವೆಂಬರ್‌ 16 ರಂದು “ಕೆಜಿಎಫ್’ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಈಗ “ಕೆಜಿಎಫ್’ ಡಿಸೆಂಬರ್‌ 21 ಕ್ಕೆ ಬಿಡುಗಡೆಯಾಗುವುದು ಪಕ್ಕಾ ಆಗಿದೆ. ಇದಕ್ಕೆ ಕಾರಣ, ಹಿಂದಿ ವಿತರಕರು ಮಾಡಿದ ಮನವಿ. ಅಷ್ಟಕ್ಕೂ “ಕೆಜಿಎಫ್’ ಮುಂದಕ್ಕೆ ಹೋಗಲು ಕಾರಣವೇನು? ಈ ಪ್ರಶ್ನೆಗೆ ಉತ್ತರವಿದು.

Advertisement

“ಕೆಜಿಎಫ್’ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರ. ಹಿಂದಿಯಲ್ಲಿ ಈ ಚಿತ್ರವನ್ನು ಅಲ್ಲಿನ ಹಿರಿಯ ವಿತರಕ ಅನಿಲ್‌ ದಾದಾನಿ ಅವರು ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರ ವೀಕ್ಷಿಸಿದ ಅವರು, “ಒಳ್ಳೆಯ ಚಿತ್ರಕ್ಕೆ ಪ್ರಚಾರ ಅಗತ್ಯ. ಹಾಗಾಗಿ, ಪ್ರಚಾರಕ್ಕೆ ಸಮಯವಿಲ್ಲದಂತಾಗುತ್ತದೆ. ಈ ಚಿತ್ರವನ್ನು ಚಿಕ್ಕದ್ದಾಗಿ ಬಿಡುಗಡೆ ಮಾಡುವುದು ಸರಿಯಲ್ಲ. ಭಾರತೀಯ ಮಟ್ಟದಲ್ಲಿ ಚಿತ್ರವನ್ನು ಪ್ರಚಾರ ಮಾಡಿ ಬಿಡುಗಡೆ ಮಾಡಬೇಕು. ಅದಕ್ಕೆ ಇನ್ನೂ ಸಮಯ ಬೇಕಿದೆ. ಹಾಗಾಗಿ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿ’ ಎಂಬ ಮನವಿ ಇಟ್ಟಿದ್ದಾರೆ. ಅವರ ಮನವಿಗೆ ಸ್ಪಂದಿಸಿದ ನಿರ್ಮಾಪಕ ವಿಜಯ್‌ಕಿರಗಂದೂರು, ಕನ್ನಡದ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರಚಾರ ಸಿಗುತ್ತಿದ್ದು, ಅದರಲ್ಲೂ ಹಿಂದಿಯಲ್ಲಿ ದೊಡ್ಡ ವಿತರಕರು ವಿತರಣೆ ಮಾಡುವಾಗ, ನಾವೇಕೆ ಒಂದು ತಿಂಗಳ ಕಾಲ ಮುಂದೆ ಹೋಗಬಾರದು ಅಂದುಕೊಂಡು, ಡಿಸೆಂಬರ್‌ 21ಕ್ಕೆ “ಕೆಜಿಎಫ್’ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಇದರೊಂದಿಗೆ ಚಿತ್ರದ ಟ್ರೇಲರ್‌ ಬಿಡುಗಡೆಯೂ ಮುಂದಕ್ಕೆ ಹೋದಂತಾಗಿದೆ.

“ಆರಂಭದಲ್ಲಿ ಚಿತ್ರ ಮಾಡುವಾಗ, ಇದು ಇಷ್ಟೊಂದು ದೊಡ್ಡ ಚಿತ್ರ ಆಗುತ್ತೆ ಅಂದುಕೊಂಡಿರಲಿಲ್ಲ. ಮಾಡುತ್ತಲೇ ದೊಡ್ಡ ಮಟ್ಟಕ್ಕೆ ಹೋಗಿದೆ. ಸಾಮಾನ್ಯವಾಗಿ ನನ್ನ ಚಿತ್ರಗಳು ಡೇಟ್‌ ಅನೌನ್ಸ್‌ ಮಾಡಿದಾಗ, ಮುಂದಕ್ಕೆ ಹೋದ ಉದಾಹರಣೆ ಇಲ್ಲ. ಈಗ “ಕೆಜಿಎಫ್’ ಹೋಗಿದೆ. ಐದು ಭಾಷೆಯಲ್ಲೂ ಬಿಡುಗಡೆಯಾಗುತ್ತಿರುವುದರಿಂದ ಪ್ರಚಾರಕ್ಕೆ ಸಮಯ ಬೇಕೆಂಬ ಮನವಿಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ಯಾನ್‌ ಇಂಡಿಯಾ ಕನಸು ಈ ಮೂಲಕ ಈಡೇರುತ್ತಿದೆ. ಇಷ್ಟು ದಿನ ಕಾದ ಅಭಿಮಾನಿಗಳು ಇನ್ನು ಒಂದು ತಿಂಗಳು ಹೆಚ್ಚು ಕಾಯಬೇಕಷ್ಟೇ. ಇದೊಂದು ಯೂನಿರ್ವಸಲ್‌ ಸಬೆjಕ್ಟ್ ಆಗಿರುವುದರಿಂದ ಎಲ್ಲರಿಗೂ ಸಲ್ಲಬೇಕು. ಎಲ್ಲಾ ಭಾಷೆಗೂ ಇದು ಹೇಗೆ ಕನೆಕ್ಟ್ ಆಗುತ್ತೆ ಎಂಬ ಪ್ರಶ್ನೆ ಎದುರಾಗಬಹುದು. ಇದನ್ನು ಮ್ಯೂಟ್‌ ಮಾಡಿ ನೋಡಿದರೆ, ಕಥೆ ಎಲ್ಲರಿಗೂ ಕನೆಕ್ಟ್ ಆಗುತ್ತೆ’ ಎನ್ನುವ ಯಶ್‌, ಇಲ್ಲಿ ಬಹುತೇಕ ಹೊಸ ಪ್ರತಿಭಾವಂತರಿದ್ದಾರೆ. ಅವರ ಮಧ್ಯೆ ನಾನೇ ಕಳೆದುಹೋಗಬಹುದೇನೋ? ಇದು ಎಪ್ಪತ್ತರ ದಶಕದ ಕಥೆಯಾದ್ದರಿಂದ ಆಗೆಲ್ಲಾ ಗಡ್ಡ, ಕೂದಲು ಟ್ರೆಂಡ್‌ ಇತ್ತು. ಪಾತ್ರಕ್ಕಾಗಿ ಗಡ್ಡ, ಕೂದಲು ಬಿಟ್ಟಿದ್ದು ನಿಜ. ಅದು ಸಖತ್‌ ಆಗಿ ವಕೌìಟ್‌ ಆಗಿದೆ’ ಎಂಬುದು ಅವರ ಮಾತು.

ನಿರ್ದೇಶಕ ಪ್ರಶಾಂತ್‌ ನೀಲ್‌ ಅವರು ಸಿನಿಮಾ ಎರಡನೇ ಭಾಗ ಆಗುತ್ತೆ ಆಂದುಕೊಂಡಿರಲಿಲ್ಲವಂತೆ. ಸಿನಿಮಾ ಚಿತ್ರೀಕರಣ ಆಗುತ್ತಲೇ ಹೊಸ ಯೋಚನೆ ಹುಟ್ಟಿಕೊಂಡು, ದೊಡ್ಡದ್ದಾಗಿದೆ. ಇದು ಎಲ್ಲಾ ಭಾಷೆಗೂ ಸಲ್ಲುವ ಕಥೆ. ಮುಖ್ಯವಾಗಿ ಇಲ್ಲೂ ತಾಯಿ, ಮಗನ ಸೆಂಟಿಮೆಂಟ್‌ ಇದೆ. ಟ್ರೇಲರ್‌ ನೋಡಿದಾಗ ಆ ಫೀಲಿಂಗ್ಸ್‌ ಗೊತ್ತಾಗುತ್ತೆ. ಚಿತ್ರೀಕರಣ ವೇಳೆ ಗಾಳಿ, ಮಳೆ ಆ ಧೂಳಿಗೆ ಜೂನಿಯರ್ ಬರೋಕೂ ಹಿಂದೆ ಮುಂದೆ ನೋಡಿದರು. ಪರಭಾಷೆಯಿಂದಲೂ ಜೂನಿಯರ್ ಕರೆಸಿ ಚಿತ್ರೀಕರಿಸಲಾಗಿದೆ.

ಕನ್ನಡಕ್ಕಷ್ಟೇ ಅಲ್ಲ, ಎಲ್ಲಾ ಭಾಷೆಗೂ “ಕೆಜಿಎಫ್’ ಹೊಸ ಬಗೆಯ ಚಿತ್ರ ಎನ್ನುವ ಪ್ರಶಾಂತ್‌ ನೀಲ್‌, ಇಂಥದ್ದೊಂದು ಚಿತ್ರ ಮಾಡೋಕೆ ಕಾರಣ ಅಮಿತಾಬ್‌ ಬಚ್ಚನ್‌. ನಾನು ಚಿಕ್ಕಂದಿನಿಂದಲೂ ಅಮಿತಾಬ್‌ ಬಚ್ಚನ್‌ ಚಿತ್ರ ನೋಡುತ್ತಿದ್ದೆ. ಆಗಲೇ, ನನಗೆ ಕನ್ನಡದಲ್ಲಿ ಹೊಸಬಗೆಯ ಚಿತ್ರ ಮಾಡುವ ಆಸೆ ಹುಟ್ಟುಕೊಂಡಿತ್ತು. ಅದು “ಕೆಜಿಎಫ್’ ಮೂಲಕ ಈಡೇರಿದೆ’ ಎನ್ನುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next