ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಯೂಸುಫ್ ಶರೀಫ್ ಅಲಿಯಾಸ್ ಕೆಜಿಎಫ್ ಬಾಬು ಅವರನ್ನು ಕಾಂಗ್ರೆಸ್ ಪಕ್ಷವು ಅಮಾನತು ಮಾಡಿದೆ. ಪಕ್ಷ ವಿರೋಧಿ ಹೇಳಿಕೆ ನೀಡಿದ ಕಾರಣದಿಂದ ಶುಕ್ರವಾರ ಅಮಾನತು ಮಾಡಿದೆ.
ಶುಕ್ರವಾರ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ್ದ ಕೆಜಿಎಫ್ ಬಾಬು, ಕಾಂಗ್ರೆಸ್ ಗೆ ಈ ಬಾರಿ 80 ಸೀಟು ಬರೋದಿಲ್ಲ ಎಂದು ಹೇಳಿದ್ದರು. ಇದಕ್ಕೆ ಕಾಂಗ್ರೆಸ್ ಮುಖಂಡ ಮನೋಹರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಕಚೇರಿಯಲ್ಲಿ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಕೆಜಿಎಫ್ ಬಾಬು ವಿರುದ್ಧ ಗಲಾಟೆ ಮಾಡಿದ್ದರು.
ಇದಾದ ಬಳಿಕ ಡಿಕೆ ಶಿವಕುಮಾರ್ ಅವರು ಅಮಾನತಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ಕೆಜಿಎಫ್ ಬಾಬು ಅವರನ್ನು ಅಮಾನತುಗೊಳಿಸಿ ಕೆಪಿಸಿಸಿ ಶಿಸ್ತು ಸಮಿತಿ ಆದೇಶ ಹೊರಡಿಸಿದೆ. ಕೆಜಿಎಫ್ ಬಾಬು ನಡೆಯಿಂದ ಈ ಹಿಂದೆ ನೀಡಲಾಗಿದ್ದ ಮೂರು ಶೋಕಾಸ್ ನೋಟಿಸ್ಗೆ ಉತ್ತರ ನೀಡಿರಲಿಲ್ಲ. ಇದೀಗ ಅಂತಿಮವಾಗಿ ಪಕ್ಷದಿಂದ ಅಮಾನತು ಮಾಡಿ ಕೆಪಿಸಿಸಿ ಶಿಸ್ತು ಸಮಿತಿ ಮುಖ್ಯಸ್ಥ ರಹಮಾನ್ ಖಾನ್ ಆದೇಶಿಸಿದ್ದಾರೆ.
ಇದನ್ನೂ ಓದಿ:ಸುಲ್ತಾನ್ ಪುರಿ ಮಾದರಿ ಘಟನೆ: ಅಪ್ರಾಪ್ತೆಗೆ ಢಿಕ್ಕಿ ಹೊಡೆದು ಸುಮಾರು ದೂರ ಎಳೆದೊಯ್ದ ಕಾರು ಚಾಲಕ
ತನ್ನ ಐಶಾರಾಮಿ ಕಾರುಗಳ ಮೂಲಕ ಮುನ್ನೆಲೆಗೆ ಬಂದಿದ್ದ ಕೆಜೆಎಫ್ ಬಾಬು ಬಳಿಕ ಕಾಂಗ್ರೆಸ್ ಪಕ್ಷ ಸೇರಿ, ವಿಧಾನ ಪರಿಷತ್ ಚುನಾವಣೆ ಸ್ಪರ್ಧಿಸಿದ್ದರು. ಈ ವೇಳೆ ತನ್ನ ಆಸ್ತಿ 1741 ಕೋಟಿ ಎಂದು ಘೋಷಿಸಿದ್ದರು. ಪರಿಷತ್ ಚುನಾವಣೆ ಸೋಲಿನ ಬಳಿಕ ವಿಧಾನಸಭೆ ಚುನಾವಣೆಯತ್ತ ಕಣ್ಣಿಟ್ಟಿದ್ದ ಕೆಜಿಎಫ್ ಬಾಬು ಚಿಕ್ಕಪೇಟೆ ಕ್ಷೇತ್ರದಲ್ಲಿ ಕೆಲಸ ಆರಂಭಿಸಿದ್ದರು.