Advertisement

ಕೆಎಫ್‌ಡಿ; ಬೇಕಿದೆ ಹೆಚ್ಚಿನ ಸಂಶೋಧನೆ

01:13 PM Jan 15, 2020 | Naveen |

ಸಾಗರ: ಮಂಗನ ಕಾಯಿಲೆ ವೈರಸ್‌ನಿಂದ ಸತ್ತ ಮಂಗಗಳ ಮೈ ಮೇಲಿನ ಉಣುಗುಗಳ ಕಾರಣ ಕ್ಯಾಸನೂರು ಅರಣ್ಯ ಕಾಯಿಲೆ ಬರುತ್ತದೆ ಎಂಬ ಹಲವು ವರ್ಷಗಳ ತಿಳುವಳಿಕೆಗೆ ವ್ಯತಿರಿಕ್ತವಾಗಿ ಈ ವರ್ಷ ಸಾವನ್ನಪ್ಪಿದ ಒಂದು ಮಂಗದಲ್ಲಿ ಕೆಎಫ್‌ಡಿ ವೈರಸ್‌ ಕಾಣದಿದ್ದರೂ ತಾಲೂಕಿನ ಹಲವು ಮನುಷ್ಯರಿಗೆ ಮಂಗನ ಕಾಯಿಲೆ ಬಂದಿರುವುದು ದೃಢಪಟ್ಟಿದೆ. ಅದರಿಂದ ಒಬ್ಬ ಮಹಿಳೆ ಸಾವನ್ನಪ್ಪಿರುವುದು ಮಂಗನ ಕಾಯಿಲೆ ಸಂಬಂಧ ಹೆಚ್ಚಿನ ಸಂಶೋಧನೆಗಳಾಗಬೇಕು ಎಂಬ ವಾದವನ್ನು ಪ್ರತಿಪಾದಿಸುತ್ತವೆ ಎಂಬುದನ್ನು ತಾಲೂಕಿನ ಆರೋಗ್ಯ ಇಲಾಖೆ ಮೂಲಗಳೇ ಅಭಿಪ್ರಾಯ ವ್ಯಕ್ತಪಡಿಸುತ್ತಿವೆ.

Advertisement

ಕಳೆದ ನಾಲ್ಕು ತಿಂಗಳ ಅಂಕಿ- ಅಂಶಗಳ ಪ್ರಕಾರ ತಾಲೂಕಿನಾದ್ಯಂತ 69 ಮಂಗಗಳು ಸಾವನ್ನಪ್ಪಿವೆ. ಆದರೆ ಅವುಗಳಲ್ಲಿ ಒಂದರಲ್ಲೂ ಕೆಎಫ್‌ಡಿ ವೈರಸ್‌
ಪಾಸಿಟಿವ್‌ ಬಂದಿಲ್ಲ. ಸೆ. 9ರಿಂದ ಪಶುಪಾಲನಾ ಇಲಾಖೆ 15 ಸತ್ತ ಮಂಗಗಳ ಪೋಸ್ಟ್‌ಮಾರ್ಟ್‌ಂ ನಡೆಸಿದ್ದು, ಬಂದಿರುವ 11 ವರದಿಗಳಲ್ಲಿ ಕೆಎಫ್‌ಡಿ ಇಲ್ಲ ಎಂಬುದು ದೃಢಪಟ್ಟಿದೆ. ಇನ್ನು ನಾಲ್ಕರ ವರದಿ ಇನ್ನಷ್ಟೇ ಬರಬೇಕಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಉಣುಗುಗಳು ನಾಶವಾಗುತ್ತವೆ. ಆ ನಂತರ ರೋಗ ಸಾಧ್ಯತೆ ಶೂನ್ಯವಾಗುತ್ತದೆ ಎಂದು ಆರೋಗ್ಯ ಇಲಾಖೆ ಕಳೆದ ವರ್ಷ ತಿಳಿಸಿತ್ತು. ಮಂಗ ಹಾಗೂ ಸತ್ತ ಮಂಗಗಳಲ್ಲಿ ಸಿಕ್ಕ ಉಣುಗುಗಳ ಪರೀಕ್ಷೆ ನಡೆದಿದ್ದು ಕೆಎಫ್‌ಡಿ ಕಾಣಿಸಿಲ್ಲ. ಮಳೆಗಾಲವೂ ದೊಡ್ಡ ಪ್ರಮಾಣದಲ್ಲಿಯೇ ಆಗಿದ್ದು, ಈಗ ಜನರಲ್ಲಿ ಮಾತ್ರ ಕೆಎಫ್‌ಡಿ ವೈರಸ್‌ ಕಾಣಿಸಿಕೊಂಡಿರುವುದು ಯಕ್ಷ ಪ್ರಶ್ನೆಯಾಗಿದೆ.

ಈ ನಡುವೆ ಮಂಗಗಳ ಸಾವಿನ ಪ್ರಕರಣಗಳು ಕೂಡ ಮುಂದುವರಿದಿವೆ. ಕಾರ್ಗಲ್‌ನಲ್ಲಿ ಒಂದು ಹಾಗೂ ಇಡುವಾಣಿಯಲ್ಲಿ ಒಂದು ಮಂಗ ಸಾವು ಕಂಡಿದ್ದು ಎರಡೂ ಮಂಗಗಳ ಪೋಸ್ಟ್‌ಮಾರ್ಟ್‌ಂ ಮಂಗಳವಾರ ನಡೆದಿದೆ. ಅಂಗಾಂಶಗಳನ್ನು ಪುಣೆಯ ವೈರಸ್‌ ಪ್ರಯೋಗಾಲಯ ಹಾಗೂ ಕೆಎಫ್‌ಡಿ ಅಲ್ಲದ ಕಾರಣಗಳನ್ನು ಪತ್ತೆ ಮಾಡುವ ಶಿವಮೊಗ್ಗದ ಪಶು ಶಿಕ್ಷಣ ಕಾಲೇಜಿಗೆ ರವಾನಿಸಲಾಗಿದೆ.

ಆಯುಷ್ಮಾನ್‌ ಭರವಸೆ ಸಾಕೇ?: ಕಳೆದ ವರ್ಷ ನಿಗದಿತ ದಿನದ ನಂತರ ಚಿಕಿತ್ಸೆ ಕೊಡಲಾಗಿದೆ ಎಂಬ ಕಾರಣಕ್ಕೆ ಮಣಿಪಾಲದ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಗೆ ಚಿಕಿತ್ಸೆ ಪಡೆದ 23 ಜನರಿಗೆ ಸಂಬಂಧಿಸಿದಂತೆ 8 ಲಕ್ಷ ರೂ.ಗಳ ಬಿಲ್‌ನ್ನು ರಾಜ್ಯ ಸರ್ಕಾರ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ವೆಂಟಿಲೇಟರ್‌ ಇರುವ ಆ್ಯಂಬುಲೆನ್ಸ್‌ ಮೂಲಕ ಮಣಿಪಾಲ್‌ಗೆ ಶಂಕಿತ ಪ್ರಕರಣಗಳನ್ನು ಒಯ್ದರೂ ಚಿಕಿತ್ಸೆ ಒದಗಿಸುವುದು ಅನುಮಾನ ಎಂಬ ಬಗ್ಗೆ ಶಾಸಕ ಎಚ್‌. ಹಾಲಪ್ಪ ಅವರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಜೇಶ್‌ ಸುರಗಿಹಳ್ಳಿ, ಆಯುಷ್ಮಾನ್‌ ಕಾರ್ಡ್‌ ಹೊಂದಿರುವವರಿಗೆ ವಿಶೇಷ ಎಮರ್ಜೆನ್ಸಿ ಕೋಡ್‌ ನೀಡುವ ಮೂಲಕ ಅವರಿಗೆ ತಕ್ಷಣ ಮಣಿಪಾಲ್‌ಗೆ ತೆರಳಲು ಅವಕಾಶ ಕಲಿಸಲಾಗುತ್ತದೆ ಎಂಬ ಸಮಜಾಯಿಷಿ ನೀಡುತ್ತಾರೆ.

ಕಾರ್ಗಲ್‌ ಭಾಗದ ಕಾನೂರಿನ ಭರತ್‌ ಎಪಿಎಲ್‌ ಕಾರ್ಡ್‌ ಹೊಂದಿದವರಾಗಿದ್ದ ಕಾರಣಕ್ಕಾಗಿಯೇ ಅವರನ್ನು ಮಣಿಪಾಲ್‌ಗೆ ರವಾನಿಸಲು ಆರೋಗ್ಯ ಇಲಾಖೆ ಹಿಂಜರಿದಿತ್ತು ಎಂಬ ಹಿನ್ನೆಲೆಯಲ್ಲಿ ಆಯುಷ್ಮಾನ್‌ ಕಾರ್ಡ್‌ ಸಮಸ್ಯೆಗೆ ಪರಿಹಾರವಾಗಲಾರದು ಎಂಬ ಅನಿಸಿಕೆ ವ್ಯಕ್ತವಾಗಿದೆ.

Advertisement

ಕಳೆದ ವರ್ಷದಿಂದ ಆರೋಗ್ಯ ಇಲಾಖೆ ಕೆಎಫ್‌ಡಿ ಲಸಿಕೆ ಹಾಗೂ ಡಿಎಂಪಿ ಆಯಿಲ್‌ಗ‌ಳ ಮೇಲೆಯೇ ಸಂಪೂರ್ಣ ರೋಗ ನಿಯಂತ್ರಣದ ಭಾರ ಹಾಕಿದೆ. ಈ ವರ್ಷ ಕೂಡ ಈ ಸಮಯದಲ್ಲಿ 15 ಸಾವಿರ ಡಿಎಂಪಿ ಬಾಟಲಿಗಳನ್ನು ಸಾಗರಕ್ಕೆ ಪೂರೈಸಲಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಒಂದು ಮನೆಗೆ 5 ಬಾಟಲಿಗಳನ್ನು ಒದಗಿಸಬಹುದು ಎಂಬ ಅಂದಾಜು ವ್ಯಕ್ತಪಡಿಸಲಾಗಿದ್ದು, ಹೆಚ್ಚುವರಿಯಾಗಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಮೂರು ಸಾವಿರ ಬಾಟಲ್‌ ಸಂಗ್ರಹವಿದೆ. ಒಟ್ಟು ಆರು ಸಾವಿರ ಲಸಿಕೆಗಳನ್ನು ತಾಲೂಕಿಗೆ ಸರಬರಾಜು ಮಾಡಲಾಗಿದೆ. ಆರೋಗ್ಯ ಇಲಾಖೆ 140 ಲಸಿಕೆ ಶಿಬಿರಗಳನ್ನು ಆಯೋಜಿಸಿದ್ದು, ಅರಳಗೋಡು ಭಾಗದಲ್ಲಿ ಲಸಿಕೆ ನೀಡುವಿಕೆಯ ಪ್ರಮಾಣ ತೃಪ್ತಿಕರವಾಗಿದೆ.

ಆದರೆ ಎರಡು ಬಾರಿ ಲಸಿಕೆ ತೆಗೆದುಕೊಂಡ ಭರತ್‌ ರಲ್ಲಿ ಕೆಎಫ್‌ಡಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಲಸಿಕೆ ತೆಗೆದುಕೊಂಡವರ ದೇಹದ ಪ್ರತಿರೋಧಕ ಶಕ್ತಿಯ ಪ್ರಮಾಣವನ್ನು ಈ ಹಂತದಲ್ಲಿ ಅಂದಾಜಿಸಬೇಕು.
ಈ ಸಂಬಂಧ ಇರುವ ವೈಜ್ಞಾನಿಕ ರಕ್ತ ಪರೀಕ್ಷೆ ಹಾಗೂ ಉಳಿದ ಕ್ರಮಗಳನ್ನು ಮೂರನೇ ಬೂಸ್ಟರ್‌ ಡೋಸ್‌ ಪಡೆದವರಲ್ಲಿ ಪರೀಕ್ಷಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ಈಗಿರುವ ಲಸಿಕೆ 1962ರಷ್ಟು ಹಿಂದೆ ಸಂಶೋ ಸಿರುವಂತದು. ಆನಂತರದ ದಿನಗಳಲ್ಲಿ ವೈರಸ್‌ ಪ್ರಬಲವಾಗಿರಬಹುದು. ಅವುಗಳು ಲಸಿಕೆಯ ಪ್ರಭಾವ ದಾಟಿ ಆಕ್ರಮಣ ಮಾಡುವ ಶಕ್ತಿ ಬೆಳೆಸಿಕೊಂಡಿರುವ ಸಾಧ್ಯತೆಯನ್ನೂ ಚಿಂತಿಸಬೇಕಾಗಿದೆ.

ಬೇರೆಲ್ಲ ರೋಗಗಳಿಗೆ ಒಂದು ಲಸಿಕೆ ತೆಗೆದುಕೊಂಡರೆ ಜೀವನಪೂರ್ತಿ ಸುರಕ್ಷತೆ ಸಿಗುವಾಗ, ಅಂತಹ ಲಸಿಕೆಯ ಸಂಶೋಧನೆ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಆದ್ಯತೆಯ ಮೇಲೆ ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಮುನಿ ವೆಂಕಟರಾಜು ಅಭಿಮತ ವ್ಯಕ್ತಪಡಿಸುತ್ತಾರೆ.

ಸಾಗರಕ್ಕೇ ಬೇಕು ವೈರಸ್‌ ಪ್ರಯೋಗಾಲಯ: ತೀರ್ಥಹಳ್ಳಿ ಬಿಟ್ಟರೆ ಸಾಗರದಲ್ಲಿಯೇ ಹೆಚ್ಚಿನ ಮಂಗನ ಕಾಯಿಲೆ ಪ್ರಕರಣಗಳು ಕಂಡು ಬರುತ್ತದೆ. ತೀರ್ಥಹಳ್ಳಿಯವರು ನೇರವಾಗಿ ಮಣಿಪಾಲ್‌ಗೆ ಹೋಗುತ್ತಾರೆ. ರಕ್ತ ಪರೀಕ್ಷೆಗಾಗಿ ಸಾಗರದಿಂದ ಶಿವಮೊಗ್ಗಕ್ಕೆ ಸ್ಯಾಂಪಲ್‌ ಕಳುಹಿಸಿ ವರದಿ ಬರಲು ಆಗುವ ವಿಳಂಬ ಇಲ್ಲಿನ ಜೀವಗಳಿಗೆ ಕಂಟಕವಾಗಿದೆ. ಈ ನಿಟ್ಟಿನಲ್ಲಿ ಕೆಎಫ್‌ಡಿ ವೈರಸ್‌ ಪರಿಶೋಧನಾ ಘಟಕ ಸಾಗರದಲ್ಲಿ ಸ್ಥಾಪನೆಯಾಗುವುದೇ ಹೆಚ್ಚು ಸೂಕ್ತ. ಈ ಸಂಬಂಧ ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ
ತೀವ್ರ ಒತ್ತಡ ಹೇರುತ್ತೇನೆ ಎಂದು ಮಂಗಳವಾರ ಕೆಎಫ್‌ಡಿಗೆ ಬಲಿಯಾದ ತುಮರಿ ಭಾಗದ ಶೀಗೆಮಕ್ಕಿಯ ಹೂವಮ್ಮ ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಶಾಸಕ ಹಾಲಪ್ಪ ತಿಳಿಸಿದರು.

ಕೆಎಫ್‌ಡಿ ಸಹಾಯವಾಣಿ 104
ಮಂಗನ ಕಾಯಿಲೆಗೆ ಸಂಬಂಧಿಸಿದಂತೆಆರೋಗ್ಯವಾಣಿ 104ಕ್ಕೇ ಕರೆ ಮಾಡಿದರೆ ಸಾಕು ಎಂದು ಡಿಎಚ್‌ಒ ಡಾ| ರಾಜೇಶ್‌ ಮಾಹಿತಿ ನೀಡಿದ್ದಾರೆ. ಪದೇ ಪದೇ ಜ್ವರ ಬರುತ್ತಿರುವವರು ಖಾಸಗಿ ಆಸ್ಪತ್ರೆಗೆ ತೆರಳುವ ಮುನ್ನ ಸರ್ಕಾರಿ ಆಸ್ಪತ್ರೆಯ ಮೂಲಕ ಕೆಎಫ್‌ಡಿ ರಕ್ತಪರೀಕ್ಷೆಗೆ ಸ್ಯಾಂಪಲ್‌ ಕೊಡುವುದು ಅಗತ್ಯ. ರೋಗಪೀಡಿತ ಪ್ರದೇಶದ ಮಕ್ಕಳಿಗೆ ಶೂ, ಸಾಕ್ಸ್‌ ಕಡ್ಡಾಯ ಮಾಡಬೇಕು. ಪಿಡಿಒ, ಅರಣ್ಯ, ಆರೋಗ್ಯ ಹಾಗೂ ಪಶು ಇಲಾಖೆ ಅಧಿಕಾರಿಗಳನ್ನೊಳಗೊಂಡ ಗ್ರಾಪಂ ಮಟ್ಟದ ಸಮಿತಿ ಮಾಡಿ ಮಂಗ ಸತ್ತ ಪ್ರಕರಣಗಳಲ್ಲಿ ಕ್ಷಿಪ್ರವಾಗಿ ಅದನ್ನು ನಾಶ ಮಾಡುವ ಕೆಲಸಕ್ಕೆ ಆದ್ಯತೆ ನೀಡಬೇಕು. ಈ ಬಾರಿ ಜಿಲ್ಲಾ ಆರೋಗ್ಯ ಇಲಾಖೆ ಮೆಲಾಥಿಯಾನ್‌ ಪುಡಿ ಸಿಂಪಡನೆಗೆ ಆರು ಬ್ಲೋವರ್‌ಗಳನ್ನು ತರಿಸಿದೆ ಎಂದು ತಿಳಿಸಿದ್ದಾರೆ.

ಮಾರಲಗೋಡು ಭಾಗದಲ್ಲಿ 17ರಂದು ಕೆಎಫ್‌ಡಿ ಲಸಿಕೆ
ಸಾಗರ: ಕೆಎಫ್‌ಡಿ ಪ್ರತಿರೋಧಕ ಲಸಿಕೆ ಹಾಕಿಸಿಕೊಳ್ಳಲು ಜನರ ಮನವೊಲಿಸಲಾಗಿದೆ. ಈ ಸಂಬಂಧ ಜ. 17ರಂದು ಮಾರಲಗೋಡು ಭಾಗದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಸಲಾಗುವುದು ಎಂದು ತುಮರಿ ಗ್ರಾಪಂ ಅಧ್ಯಕ್ಷ ಜಿ.ಟಿ. ಸತ್ಯನಾರಾಯಣ ಕರೂರು ತಿಳಿಸಿದ್ದಾರೆ. ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿದ ಅವರು, ಈ ಭಾಗದಲ್ಲಿ ಜನರಿಗೆ ಕೆಎಫ್‌ಡಿ ಲಸಿಕೆ ಬಗ್ಗೆ ತಪ್ಪು ತಿಳುವಳಿಕೆಗಳಿವೆ.

ಈ ಹಿನ್ನೆಲೆಯಲ್ಲಿ ಸೋಮವಾರ ಗ್ರಾಪಂನಲ್ಲಿ ಟಿಎಚ್‌ಒ ಮುನಿವೆಂಕಟರಾಜು, ಆರೋಗ್ಯ ಇಲಾಖೆಯ ಸುರೇಶ್‌ ಮುಂತಾದವರ ಜೊತೆ ಸಭೆ ನಡೆಸಲಾಗಿದೆ. 7ರಂದು ಮಾರಲಗೋಡು ಭಾಗದ 100 ಮನೆಗಳಿಗೆ ಐದು ಜನರ ತಂಡದ ಮೂಲಕ ವ್ಯಾಫಕವಾಗಿ ಲಸಿಕೆ ನೀಡಿಕೆ ಕಾರ್ಯ ರೂಪಿಸಲಾಗಿದೆ. ಆಶಾ ಕಾರ್ಯಕರ್ತೆಯರು, ಧರ್ಮಸ್ಥಳ, ಸ್ತ್ರೀಶಕ್ತಿ ಸಂಘಟನೆಗಳು ಮುಂತಾದವರ ಸಹಕಾರದಲ್ಲಿ ಮನೆ ಮನೆಗೆ ತೆರೆಳಿ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

„ಮಾ.ವೆಂ.ಸ. ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next