ಚಿಕ್ಕಮಗಳೂರು: ನೆರೆಯ ಶಿವಮೊಗ್ಗಜಿಲ್ಲೆಯ ಸಾಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡ ಬೆನ್ನಲ್ಲೇ ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಮೂವರು ತೋಟದ ಕಾರ್ಮಿಕರಲ್ಲಿ ಮಂಗನ ಕಾಯಿಲೆ ವೈರಣು ಕಾಣಿಸಿಕೊಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ದೃಢಪಡಿಸಿದೆ.
ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮಡಬೂರು ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಆಸ್ಸಾಂ ಮೂಲದ ಒಬ್ಬರು ಮತ್ತು ಮಧ್ಯಪ್ರದೇಶ ಮೂಲದ ಇಬ್ಬರಲ್ಲಿ ಮಂಗನ ಕಾಯಿಲೆ ಲಕ್ಷಣ ಕಂಡು ಬಂದಿದ್ದು, ಚಿಕಿತ್ಸೆ ನೀಡಿದ್ದು, ಗುಣಮುಖರಾಗಿದ್ದು ಪರಿವೀಕ್ಷಣೆಯಲ್ಲಿಇರಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಪ್ರಭು ತಿಳಿಸಿದ್ದಾರೆ.
ಕಳೆದ ವಾರ ಕೂಲಿ ಲೈನ್‌ನಲ್ಲಿಕೆಲಸ ಮಾಡುವವರಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡಿದ್ದು, ಅವರ ರಕ್ತ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೂರು ಜನರಲ್ಲಿ ವೈರಸ್ ಕಂಡು ಬಂದಿದ್ದು, ತಕ್ಷಣ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಡಾ| ಸುಭಾಷ್ ವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಮಡಬೂರು ಎಸ್ಟೇಟ್ ಕೂಲಿಲೈನ್‌ನಲ್ಲಿ ವಾಸವಾಗಿರುವಕಾರ್ಮಿಕರಿಗೆ ಹಾಗೂ ತೋಟದ ಮಾಲೀಕರು ಸೇರಿದಂತೆ 39 ಜನರಿಗೆ ಲಸಿಕೆ ಹಾಕಲಾಗಿದೆ. ಮಂಗನ ಕಾಯಿಲೆ ಕಂಡು ಬಂದ ಸ್ಥಳವನ್ನು ಹಾಟ್‌ಸ್ಪಾಟ್ ಎಂದು ಪರಿಗಣಿಸಿದ್ದು, ಸುತ್ತಮುತ್ತಲ 5 ಕಿಮೀ ವ್ಯಾಪ್ತಿಯಲ್ಲಿ 6 ರಿಂದ 65 ವರ್ಷದ ವಯೋಮಾನದವರಿಗೆ ಲಸಿಕೆ ಹಾಕಲಾಗುತ್ತಿದೆ. ಕೆಲಸಕ್ಕೆ ತರಳುವ ಕಾರ್ಮಿಕರಿಗೆ ಡಿಎಂಪಿ ಆಯಿಲ್ ವಿತರಿಸಲಾಗಿದೆ. ಉಣ್ಣೆಗಳು ಸಾಯಿಸಲು ಮೆಲಕ್ಸಿಯನ್ ಪೌಂಡರ್ ಸಿಂಪಡಣೆ ಮಾಡಲಾಗುತ್ತಿದೆ ಎಂದರು.
ಈ ಭಾಗದ ಸುತ್ತಮುತ್ತಲ 37 ಬೇರೆ ಬೇರೆ ಪ್ರದೇಶದ ಉಣ್ಣೆಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಕೊಪ್ಪ ತಾಲೂಕಿನ ಶಾಂತಿ ಗ್ರಾಮದ ಸುತ್ತಮುತ್ತ ಸಂಗ್ರಹಿಸಿ ಒಂದು ಉಣ್ಣೆಯಲ್ಲಿ ವೈರಸ್ ಕಂಡು ಬಂದಿದೆ. ರೋಗ ಹಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ ಮತ್ತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಜನರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.