Advertisement

ಸೋಂಕಿತ ವ್ಯಕ್ತಿಗಳೊಂದಿಗೆ ನಿಮ್ಮ ಸಂಪರ್ಕದ ಮಾಹಿತಿ ನೀಡುವ ‘ಆರೋಗ್ಯ ಸೇತು’ ಆ್ಯಪ್

09:03 AM Apr 03, 2020 | Hari Prasad |

ನವದೆಹಲಿ: ಕೋವಿಡ್ 19 ವೈರಸ್ ನ ಜಾಡನ್ನು ಪತ್ತೆ ಮಾಡುವ ಹೊಸ ಆ್ಯಪ್ ಒಂದನ್ನು ಭಾರತ ಸರಕಾರವು ಇಂದು ಬಿಡುಗಡೆ ಮಾಡಿದೆ. ‘ಆರೋಗ್ಯ ಸೇತು’ ಎಂಬ ಹೆಸರಿನ ಈ ಮೊಬೈಲ್ ಅಪ್ಲಿಕೇಶನ್ ಸಹಾಯದಿಂದ ಸ್ಮಾರ್ಟ್ ಫೋನ್ ಬಳಕೆದಾರರು ತಮ್ಮ ವ್ಯಾಪ್ತಿಯಲ್ಲಿರುವ ಕೋವಿಡ್ 19 ಸೋಂಕಿತರ ಮಾಹಿತಿಯನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

Advertisement

ನೀವು ಯಾರಾದರೂ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದೀರೋ ಎಂಬ ಮಾಹಿತಿಯನ್ನೂ ಸಹ ಈ ಆ್ಯಪ್ ಮೂಲಕ ಪಡೆದುಕೊಳ್ಳಬಹುದಾಗಿರುತ್ತದೆ. ಸ್ಮಾರ್ಟ್ ಫೋನಿನಲ್ಲಿರುವ ಲೊಕೇಶನ್ ಮಾಹಿತಿ ಮತ್ತು ಬ್ಲೂ ಟೂತ್ ಸಹಾಯದಿಂದ ಈ ಆ್ಯಪ್ ಕಾರ್ಯ ನಿರ್ವಹಿಸುತ್ತದೆ. 11 ಭಾಷೆಗಳಲ್ಲಿ ಲಭ್ಯವಿರುವ ಈ ಆ್ಯಪ್ ಇದೀಗ ದೇಶಾದ್ಯಂತ ಮೊಬೈಲ್ ಬಳಕೆದಾರರಿಗೆ ಲಭ್ಯವಿದೆ.


ಈ ಆ್ಯಪ್ ಕುರಿತಾದ ಪ್ರಮುಖ ಅಂಶಗಳು:

– ಈ ಆ್ಯಪ್ ಆ್ಯಂಡ್ರಾಯ್ಡ್ ಹಾಗೂ ಆ್ಯಪಲ್ ಸ್ಮಾರ್ಟ್ ಫೋನ್ ಗಳಲ್ಲಿ ಡೌನ್ ಲೋಡ್ ಗೆ ಲಭ್ಯವಿದೆ.

– ಪ್ಲೇ ಸ್ಟೋರ್ ಹಾಗೂ ಆ್ಯಪಲ್ ಸ್ಟೋರ್ ಗಳಲ್ಲಿ ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿರುತ್ತದೆ ಮತ್ತು ಬಳಿಕ ನಿಮ್ಮ ಫೋನ್ ನಂಬರನ್ನು ನೋಂದಾಯಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.

– ನಿಮ್ಮ ಪ್ರಸ್ತುತ ಆರೋಗ್ಯ ಸ್ಥಿತಿಗತಿಗಳನ್ಹು ಹಾಗೂ ಇನ್ನಿತರ ವಿವರಗಳನ್ನು ಇದರಲ್ಲಿ ಹಂಚಿಕೊಳ್ಳಲು ನಿಮಗೆ ಅವಕಾಶವಿರುತ್ತದೆ.

Advertisement

– ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಶನ್ ಟೆಕ್ನಾಲಜಿ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ ಈ ಮೊಬೈಲ್ ಅಪ್ಲಿಕೇಶನನ್ನು ಅಭಿವೃದ್ಧಿಗೊಳಿಸಿದೆ.

– ದೇಶದಲ್ಲಿ ಈಗಾಗಲೇ ಪತ್ತೆಯಾಗಿರುವ ಕೋವಿಡ್ 19 ಪ್ರಕರಣಗಳ ಸರಕಾರಿ ಅಂಕಿ-ಅಂಶ ಮಾಹಿತಿಗಳನ್ನು ಈ ಆ್ಯಪ್ ಒಳಗೊಂಡಿದೆ.

– ನೀವು ಯಾವ ಸ್ಥಳದಲ್ಲಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ಈ ಆ್ಯಪ್ ನಿಮ್ಮ ಫೋನಿನ ಲೊಕೇಶನ್ ಮಾಹಿತಿಯನ್ನು ಬಳಸಿಕೊಳ್ಳುತ್ತದೆ. ಮತ್ತು ನೀವು ಕೋವಿಡ್ 19 ಸೋಂಕಿತ ವ್ಯಕ್ತಿಯ ಆರು ಅಡಿ ಅಂತರದಲ್ಲಿದ್ದೀರಾ ಎಂಬುದನ್ನು ತಿಳಿದುಕೊಳ್ಳಲು ಬ್ಲೂ ಟೂತ್ ಸಂಪರ್ಕವನ್ನು ಪಡೆದುಕೊಳ್ಳುತ್ತದೆ.

– ಈ ಎರಡು ಮಾಹಿತಿಗಳ ಆಧಾರದಲ್ಲಿ ಈ ಆ್ಯಪ್ ನೀವು ‘ಹೈ ರಿಸ್ಕ್’ ಪ್ರದೇಶದಲ್ಲಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನಿಮಗೆ ತಿಳಿಸಿಕೊಡುತ್ತದೆ.

– ಈ ಆ್ಯಪ್ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ನಿಮ್ಮ ಮೊಬೈಲ್ ನ ಲೊಕೇಶನ್ ಅನುಮತಿ ನೀಡುವುದು ಹಾಗೂ ಬ್ಲೂಟೂತ್ ಆನ್ ಇರಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.

– ಒಂದು ವೇಳೆ ನೀವೇ ‘ಹೈ ರಿಸ್ಕ್’ನಲ್ಲಿದ್ದರೆ ಅಥವಾ ನೀವು ‘ಹೈ ರಿಸ್ಕ್’ ಪ್ರದೇಶದಲ್ಲಿದ್ದರೆ ಈ ಆ್ಯಪ್ ನಿಮಗೆ ಸೋಂಕು ಪತ್ತೆ ಪರೀಕ್ಷೆಗೆ ಹೋಗುವಂತೆ ಹಾಗೂ ಟೋಲ್ – ಫ್ರೀ- ಸಂಖ್ಯೆ 1075ಕ್ಕೆ ಕರೆ ಮಾಡುವಂತೆ ಸೂಚಿಸುತ್ತದೆ.

– ಕೋವಿಡ್ 19 ವೈರಸ್ ಸೋಂಕಿಗೆ ಒಳಗಾಗುವದರಿಂದ ನೀವು ಹೇಗೆ ದೂರವಿರಬಹುದು ಎಂಬ ವಿಚಾರದಲ್ಲಿ ಆರೋಗ್ಯ ಸೇತು ಕೆಲವೊಂದು ಸಲಹೆಗಳನ್ನೂ ಸಹ ನೀಡುತ್ತದೆ.

– ಒಂದು ವೇಳೆ ನಿಮ್ಮಲ್ಲಿ ಕೋವಿಡ್ 19 ಸೋಂಕು ಪಾಸಿಟಿವ್ ಕಂಡುಬಂದಲ್ಲಿ ಅಥವಾ ಸೋಂಕಿತರ ಸಂಪರ್ಕಕ್ಕೆ ನೀವು ಬಂದಿದ್ದಲ್ಲಿ ಈ ಆ್ಯಪ್ ನಿಮ್ಮ ಮಾಹಿತಿಗಳನ್ನು ಸರಕಾರದೊಂದಿಗೆ ಹಂಚಿಕೊಳ್ಳುತ್ತದೆ.

– ಈ ಆ್ಯಪ್ ನ ಪ್ರೈವಸಿ ಪಾಲಿಸಿಯಲ್ಲಿ ಹೇಳಲಾಗಿರುವಂತೆ ಇಲ್ಲಿ ನಿಮ್ಮಿಂದ ಸಂಗ್ರಹಿಸಲಾಗುವ ಖಾಸಗಿ ಮಾಹಿತಿಗಳನ್ನು ಯಾವುದೇ ಮೂರನೇ ವ್ಯಕ್ತಿ/ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುವುದಿಲ್ಲ.

– ಮಾತ್ರವಲ್ಲದೇ ನಿಮ್ಮಿಂದ ಸಂಗ್ರಹಿಸಲಾಗುವ ಮಾಹಿತಿಗಳನ್ನು ಸರಕಾರ ಮಾತ್ರವೇ ಪಡೆದುಕೊಳ್ಳುತ್ತದೆ ಹಾಗೂ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಗಳನ್ನು ಯಾವುದೇ ಸಂದರ್ಭಲದಲ್ಲಿ ಬಹಿರಂಗಗೊಳಿಸಲಾಗುವುದಿಲ್ಲ.

– ಇನ್ನು ಈ ಆ್ಯಪ್ ನಲ್ಲಿರುವ ಚಾಟ್ ಬೋಟ್ ನಿಮ್ಮ ಪ್ರಾಥಮಿಕ ಪ್ರಶ್ನೆಗಳಿಗೆ ಉತ್ತರವನ್ನೂ ನೀಡುತ್ತದೆ ಮತ್ತು ನಿಮಗೆ ಇನ್ನಷ್ಟು ಮಾಹಿತಿಯ ಅಗತ್ಯವಿದ್ದಲ್ಲಿ ನಿಮ್ಮ ರಾಜ್ಯದ ಸಹಾಯವಾಣಿ ಸಂಖ್ಯೆಗಳನ್ನು ಇದು ನೀಡುವ ಕೆಲಸವನ್ನು ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next