Advertisement

ಕೇಶವಮೂರ್ತಿಯವರ ಸಮಾಜಮುಖೀ ಸೇವೆ ಶ್ಲಾಘನೀಯ

07:08 AM Jan 28, 2019 | |

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯವು ಹಿರಿಯ ಪತ್ರಕರ್ತ ಸಿ. ಕೇಶವಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ನೀಡಬೇಕು ಎಂದು ಚಿತ್ರದುರ್ಗ ಶ್ರೀ ಬಸವ ಮಾದರ ಚನ್ನಯ್ಯ ಸ್ವಾಮೀಜಿ ಆಗ್ರಹಿಸಿದರು.

Advertisement

ನಗರದ ಸಿದ್ಧಗಂಗಾ ಶಾಲೆ ಆವರಣದಲ್ಲಿ ಭಾನುವಾರ ಜಿಲ್ಲಾ ಸಮಾಚಾರ ಪತ್ರಿಕೆ ಬಳಗದಿಂದ ಹಮ್ಮಿಕೊಂಡಿದ್ದ 2018ರ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ಸಿ. ಕೇಶವಮೂರ್ತಿ ಅವರು ಕೇವಲ ಪತ್ರಿಕೋದ್ಯಮ ಮಾತ್ರವಲ್ಲದೇ, ರಾಜಕೀಯ ಕ್ಷೇತ್ರದಲ್ಲಿ ಇದ್ದಾಗಲೂ ಸಾಕಷ್ಟು ಸಮಾಜಮುಖೀ ಕಾರ್ಯಗಳನ್ನು ಮಾಡಿದ್ದಾರೆ. ಅವರು ಮಾಡಿಸಿದ ಉತ್ತಮ ರಸ್ತೆಗಳು, ಕಾಮಗಾರಿಗಳು, ಬೆಳೆಸಿದ ಗಿಡಮರಗಳ ಸಾರ್ಥಕ ಕೆಲಸ ಇಂದಿಗೂ ಮಾದರಿಯಾಗಿವೆ. ಹಾಗಾಗಿ ಅವರಿಗೆ ಸ್ಥಳೀಯ ದಾವಣಗೆರೆ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿದ್ದಾದರೆ ನಿಜಕ್ಕೂ ಅದು ಅವರಿಗೆ ನೀಡಿದಂತ ಗೌರವವಾಗುತ್ತದೆ ಎಂದರು.

ಅಚ್ಚುಮೊಳೆಗಳ ಪ್ರಸರಣದಿಂದ ತಮ್ಮ ಪತ್ರಿಕೆ ಆರಂಭಿಸಿ ಇಂದಿನ ಆಫ್‌ಸೆಟ್ವರೆಗೆ ನಾಲ್ಕೂವರೆ ದಶಕಗಳ ಕಾಲ ಮುಂದುವರೆಸಿಕೊಂಡು ಬಂದಿರುವುದು ನಿಜಕ್ಕೂ ಸವಾಲಿನ ಕೆಲಸ. ಅದಕ್ಕೆ ಅವರಲ್ಲಿರುವ ಇಚ್ಛಾಶಕ್ತಿ, ಜನಪರ ಕಾಳಜಿ ಕಾರಣ ಎಂದು ಶ್ರೀಗಳು ಅಭಿಪ್ರಾಯಪಟ್ಟರು.

ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಮಾತನಾಡಿ, ಹೆಣ್ಣುಮಕ್ಕಳಿಗೆ ಪ್ರಜಾಪ್ರಭುತ್ವದಲ್ಲಿ ಸ್ವಾತಂತ್ರ್ಯ ನೀಡುವುದೇ ಕಡಿಮೆ. ಆದರೆ, ಮಾಜಿ ಶಿಕ್ಷಣ ಸಚಿವೆ ನಾಗಮ್ಮ ಕೇಶವಮೂರ್ತಿ ಅವರಿಗೆ ಸಿ. ಕೇಶವಮೂರ್ತಿ ಅವರು ರಾಜಕೀಯದಲ್ಲಿ ಉತ್ತಮ ಸ್ಥಾನ ಪಡೆಯಲು ಬೆನ್ನುಲುಬಾಗಿ ನಿಂತವರು. ಜೊತೆಗೆ ತಾವು ಅಧಿಕಾರದಲ್ಲಿದ್ದಾಗ ಉತ್ತಮ ಸಮಾಜಮುಖೀ ಸೇವೆ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

Advertisement

ಹಿರಿಯ ಪತ್ರಕರ್ತೆ ಡಾ| ವಿಜಯಾ ಮಾತನಾಡಿ, ಇಂದಿನ ಜಾಗತೀಕರಣದ ವ್ಯವಸ್ಥೆಯಲ್ಲಿ ಕೆಲವೇ ಜನರ ಕೈಲಿ ಪತ್ರಿಕೆ ಓಡೆತನ ಸಿಕ್ಕು ಜನರಿಗೆ ಬೇಕಾದ ಸಾಮಾಜಿಕ ನ್ಯಾಯ ಒದಗಿಸಲು ಆಗುತ್ತಿಲ್ಲ. ಎಲ್ಲಡೆ ವ್ಯಾಪಾರೀಕರಣದ ದೃಷ್ಟಿ ಹೆಚ್ಚಾಗಿದ್ದು, ಮಾಧ್ಯಮದ ಮೂಲ ಉದ್ದೇಶ ಮರೆಯಾಗುತ್ತಿದೆ. ಈ ಧೋರಣೆ ಬದಲಾಗಬೇಕು. ಹೊಸಬರಿಗೆ ಅವಕಾಶಗಳು ದೊರೆಯುವಂತಾಗಬೇಕು ಎಂದರು.

ಪ್ರಶಸ್ತಿ ಸ್ವೀಕರಿಸಿ ಹಿರಿಯ ಪತ್ರಕರ್ತ ಸಿ. ಕೇಶವಮೂರ್ತಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪೇಪರ್‌ ದರ ಹೆಚ್ಚಾಗಿದೆ. ಪತ್ರಿಕೆಗಳನ್ನು ನಡೆಸುವುದು ಸುಲಭದ ಮಾತಲ್ಲ. ಪ್ರಸರಣ, ಜಾಹೀರಾತು ಹೆಚ್ಚು ಮಾಡೋದು ಸವಾಲಿನ ಕೆಲಸವಾಗಿದೆ. ಇದಕ್ಕೆ ಸಾಕಷ್ಟು ಸಲಾಮ್‌ ಹೊಡೆಯಬೇಕು. ಇಲ್ಲ ಅಂದ್ರೆ ಬೈದು ಬರೆದು ಪ್ರಸರಣ ಹೆಚ್ಚು ಮಾಡಬೇಕು. ಆದರೆ. ಇವ್ಯಾವುದರ ಗೋಜಿಗೆ ಹೋಗದೇ ನಮ್ಮ ಪತ್ರಿಕೆಯನ್ನು ಉತ್ತಮವಾಗಿಯೇ ನಡೆಸಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.

ವಿಧಾನಪರಿಷತ್‌ ಮಾಜಿ ಸದಸ್ಯ ಡಾ| ಎ.ಎಚ್. ಶಿವಯೋಗಿಸ್ವಾಮಿ ಯೋಗಕ್ಷೇಮ ಕೃತಿ ಕುರಿತು ಮಾತನಾಡಿದರು. ಇದೇ ವೇಳೆ ಹಿರಿಯ ಪತ್ರಕರ್ತ ಸಿ. ಕೇಶವಮೂರ್ತಿ ಅವರಿಗೆ 2018ರ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಪತ್ರಕರ್ತ ವಿ. ಹನುಮಂತಪ್ಪ ಅವರ ಯೋಗಕ್ಷೇಮ ಕೃತಿ ಬಿಡುಗಡೆ ಮಾಡಲಾಯಿತು.

ಲೀಡ್‌ ಬ್ಯಾಂಕ್‌ನ ವಿಭಾಗೀಯ ವ್ಯವಸ್ಥಾಪಕ ಎನ್‌.ಟಿ. ಎರ್ರಿಸ್ವಾಮಿ, ಎಚ್.ಎನ್‌. ಪ್ರದೀಪ್‌, ಪ್ರಗತಿ ಕೃಷ್ಣಾ ಬ್ಯಾಂಕ್‌ ಮ್ಯಾನೇಜರ್‌ ಬಿ.ಎನ್‌. ಭಾಸ್ಕರ್‌, ಪತ್ರಕರ್ತ ವಿ. ಹನುಮಂತಪ್ಪ ಉಪಸ್ಥಿತರಿದ್ದರು. ಅನಂದತೀರ್ಥಾಚಾರ್‌ ಸ್ವಾಗತಿಸಿದರು. ಸಾಲಿಗ್ರಾಮ ಗಣೇಶ್‌ ಶೆಣೈ ನಿರೂಪಿಸಿದರು.

ಪತ್ರಿಕಾ ವೃತ್ತಿಯ ಮೂಲಕ ಸಮಾಜದಲ್ಲಿ ಉತ್ತಮ ಸೇವೆ ಮಾಡಬಹುದು. 80ರ ದಶಕದಲ್ಲಿ ಉದಯವಾಣಿ ದಿನಪತ್ರಿಕೆ ಮೂಲಕ ಹೊಸ ಪ್ರಯೋಗ ಪ್ರಾರಂಭಿಸಲಾಗಿತ್ತು. ಮೂಲಭೂತ ಸೌಲಭ್ಯಗಳ ಕೊರತೆ ಇರುವ ಗ್ರಾಮ ಗುರುತಿಸಿ ಅಲ್ಲಿನ ಬೇಕು, ಬೇಡಗಳ ಬಗ್ಗೆ ಜನರಿಂದ ತಿಳಿದುಕೊಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆ ಮುಟ್ಟಿಸುವ ಕೆಲಸ ಮಾಡಲಾಯಿತು. ಈ ಪ್ರಯೋಗದಿಂದಾಗಿ ಸಾಕಷ್ಟು ಗ್ರಾಮಗಳಿಗೆ ಉತ್ತಮ ರಸ್ತೆ, ದೀಪ ದೊರೆಯುವಂತಾಯಿತು. ಅದಕ್ಕೆ ಕೆಲ ಗ್ರಾಮದ ತರುಣರ ಶ್ರಮವೂ ಕಾರಣವಾಯಿತು.
•ಡಾ| ವಿಜಯಾ, ಹಿರಿಯ ಪತ್ರಕರ್ತೆ

Advertisement

Udayavani is now on Telegram. Click here to join our channel and stay updated with the latest news.

Next