ವಿಟ್ಲ : ಕೆಸರ್‌ಡೊಂಜಿ ದಿನ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಅಧ್ಯಯನದ ಒಂದು ಭಾಗವಾಗಿದೆ. ನಗರದ ವಿದ್ಯಾರ್ಥಿಗಳಿಗೆ ಹೊಸ ಅನುಭವ ನೀಡಿದ್ದು, ಕೃಷಿ ಸಂಸ್ಕೃತಿಯನ್ನು ಅರ್ಥೈಸುವಂತಾಗಿದೆ. ಶಾರೀರಿಕ, ಮಾನಸಿಕ ಹಾಗೂ ಸಾಮಾಜಿಕ ಚಿಂತನೆ ವ್ಯಕ್ತಪಡಿಸುವುದಕ್ಕೆ ಇದು ಉತ್ತಮ ಮಾರ್ಗವಾಗಿದೆ. ಸಂಸ್ಥೆಯು ಇಂತಹ ಅನೇಕ ಯೋಜನೆಗಳನ್ನು ರೂಪಿಸಿಕೊಂಡಿದೆ. ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಭವಿಷ್ಯವನ್ನು ಸದೃಢಗೊಳಿಸಬೇಕು ಎಂದು ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಸೇವಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಹೇಳಿದರು.
ಅವರು ಶನಿವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಕ್ರೀಡಾ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿಟ್ಲ ರೋಟರಿ ಕ್ಲಬ್ ಸಹಯೋಗದಲ್ಲಿ ವಿಟ್ಲ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಬಳಿಯಿರುವ ಅರಮನೆ ಗದ್ದೆಯಲ್ಲಿ ಕೆಸರ್‌ಡೊಂಜಿ ದಿನ ಕಾರ್ಯಕ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ವಿಟ್ಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಮಾತನಾಡಿ, ಆಟಿ ತಿಂಗಳು ಕಷ್ಟ ಅನುಭವಿಸುವ ದಿನಗಳೆಂದು ರೂಢಿಯಾಗಿತ್ತು. ಇಂದು ಕಷ್ಟದ ಬದಲಾಗಿ ಸಂತೋಷದ ದಿನಗಳಾಗಿ ಮಾರ್ಪಾಡಾಗಿದೆ. ಗದ್ದೆಯಲ್ಲೊಂದು ದಿನವನ್ನು ಕಳೆಯುವ ವಿದ್ಯಾರ್ಥಿಗಳಿಗೆ ಕೃಷಿ ಜೀವನದ ಪಾಠ ಸಿಗಬೇಕು. ಈ ನಿಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿ ಉತ್ತಮ ಕಾರ್ಯನಿರ್ವಹಿಸಿದೆ ಎಂದರು.
ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್, ವಿಟ್ಲ ಅರಮನೆಯ ಜಯರಾಮ ಕೆ. ವಿಟ್ಲ, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನಿರ್ದೇಶಕ ಎಂ. ಹರೀಶ್ ನಾಯಕ್, ವಿಟ್ಲ ಹವ್ಯಕ ವಲಯ ಅಧ್ಯಕ್ಷ ಚಂದ್ರಶೇಖರ ಭಟ್ ಪಡಾರು, ಇಟ್ಟೆಲ್ ತುಳು ಕೂಟದ ಅಧ್ಯಕ್ಷ ಹರೀಶ್ ಪೂಜಾರಿ, ನಿವೃತ್ತ ಶಿಕ್ಷಕ ಶ್ಯಾಮ ಭಟ್, ವಿಟ್ಲ ಸಪ್ತ ಜುವೆಲರ್ಸ್ ಪಾಲುದಾರ ಶಿವಪ್ರಕಾಶ್, ಇನ್ನೋರ್ವ ಪಾಲುದಾರ ಶ್ಯಾಮ ಭಟ್, ಭಾರತೀ ಸಮೂಹ ಸಂಸ್ಥೆಗಳ ಸೇವಾ ಸಮಿತಿ ಉಪಾಧ್ಯಕ್ಷ ಪ್ರೊ| ಟಿ. ಶ್ರೀಕೃಷ್ಣ ಭಟ್, ಸಹ ಕಾರ್ಯದರ್ಶಿ ಪ್ರೊ| ವಿ.ಜಿ. ಭಟ್, ಪದವಿ ಕಾಲೇಜು ಪ್ರಾಂಶುಪಾಲ ಡಾ| ಎ. ಈಶ್ವರಪ್ರಸಾದ ಉಪಸ್ಥಿತರಿದ್ದರು.
ವಿಟ್ಲದ ವಿಠ್ಠಲ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸುಚೇತನ್ ಜೈನ್, ಕಬಡ್ಡಿ ಕೋಚ್ ವಿಶ್ವನಾಥ ಅಳಿಕೆ ಆಟೋಟಗಳ ತೀರ್ಪುಗಾರರಾಗಿ ಸಹಕರಿಸಿದರು. ಶ್ರೀಭಾರತೀ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ವಿದ್ಯಾ ಭಟ್ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಅಶೋಕ್, ವಿದ್ಯಾರ್ಥಿಗಳಾದ ವೆಂಕಟೇಶ್, ಜಾಹ್ನವಿ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು.
ಅಂಕಿತಾ ನೀರ್ಪಾಜೆ, ಶ್ರೇಯಾ ಆಶಯಗೀತೆ ಹಾಡಿದರು. ಕನ್ನಡ ಉಪನ್ಯಾಸಕಿ ಗಂಗಾರತ್ನ ಮುಗುಳಿ ವಂದಿಸಿದರು. ಉಪನ್ಯಾಸಕಿ ಸ್ವಾತಿ ನಿರೂಪಿಸಿದರು. ಉಪನ್ಯಾಸಕರಾದ ಪ್ರವೀಣ್, ಅನಂತನಾರಾಯಣ ಪದಕಣ್ಣಾಯ, ಸೂರ್ಯನಾರಾಯಣ, ಅಕ್ಷತಾ, ಶರ್ಮಿಳಾ, ಅನುಷಾ, ಕಾವ್ಯಾ, ರಮ್ಯಾ, ಸತ್ಯನಾರಾಯಣಪ್ರಸಾದ್ ಮತ್ತಿತರರು ಸಹಕರಿಸಿದರು.