ವಿಟ್ಲ: ಇಂದು ಮಾನವನಿಗೆ ಸದಾ ಅನಾರೋಗ್ಯ ಕಾಡುತ್ತದೆ. ಹಿಂದಿನ ಕಾಲ ಶ್ರಮ ಜೀವನವಾಗಿತ್ತು ಮತ್ತು ಆರೋಗ್ಯದಾಯಕವಾಗಿತ್ತು. ಗದ್ದೆಯಲ್ಲಿ ಕೆಸರು ಮೆತ್ತಿದ ಶರೀರಕ್ಕೆ ಅನಾರೋಗ್ಯ ಕಾಡುವುದಿಲ್ಲ. ಇಂದು ಆಧುನಿಕ ಯುಗದಲ್ಲಿ ಶರೀರ ಬೆವರುವುದಿಲ್ಲ. ಎಲ್ಲವೂ ಕುಳಿತಲ್ಲೇ ಕರ್ತವ್ಯ ನಿರ್ವಹಿಸುವುದು ಕಂಡು ಬರುತ್ತದೆ. ಇಂದು ಇಡೀ ದಿನ ವಿದ್ಯಾರ್ಥಿಗಳು ಗದ್ದೆಯಲ್ಲಿ ಸಂತಸ, ಸಂಭ್ರಮ ಪಟ್ಟಿದ್ದು, ಕೃಷಿಯ ಅನುಭವವನ್ನು ಅರ್ಥ ಮಾಡಿಕೊಳ್ಳುವಂತಾಗಿದೆ ಎಂದು ಕುರ್ನಾಡು ತಾ.ಪಂ. ಸದಸ್ಯ ನವೀನ್ ಪಾದಲ್ಪಾಡಿ ಹೇಳಿದರು.
ಅವರು ಶನಿವಾರ ಮಂಗಳೂರು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು, ರಾಷ್ಟ್ರೀಯ ಸೇವಾ ಯೋಜನಾ ಘಟಕ, ಕ್ರೀಡಾ ಸಂಘಗಳ ಆಶ್ರಯದಲ್ಲಿ ಕುರ್ನಾಡು ಅಂಗಣೆಮಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಳಿ ಇರುವ ಗದ್ದೆಯಲ್ಲಿ ಶ್ರೀ ಭಾರತೀ ಪದವಿ, ಪದವಿಪೂರ್ವ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಕಂಡಡೊಂಜಿ ದಿನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅವರು ಅಧ್ಯಕ್ಷತೆ ವಹಿಸಿ, ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಪಡೆಯುವುದು ಮುಖ್ಯ. ಈ ಸಂಸ್ಥೆಯು ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಶ್ರಮಿಸುತ್ತಿದೆ. ಮುಂದಿನ ವರ್ಷ ಮಕ್ಕಳ ಜತೆ ಉಪನ್ಯಾಸಕರು, ಸಮಿತಿ ಪದಾಧಿಕಾರಿಗಳು ಗದ್ದೆಯಲ್ಲಿಳಿದು ಜತೆಗೂಡಲಿದ್ದಾರೆ ಎಂದರು.
ಕುರ್ನಾಡು ಗ್ರಾ.ಪಂ.ಉಪಾಧ್ಯಕ್ಷ ನಿತಿನ್ ಕುಮಾರ್ ಗಟ್ಟಿ, ಗ್ರಾ.ಪಂ.ಸದಸ್ಯ ಶಿವಶಂಕರ ಭಟ್, ಕುರ್ನಾಡು ಶ್ರೀ ದತ್ತಾತ್ರೇಯ ಅ.ಹಿ.ಪ್ರಾ.ಶಾಲೆ ಸಂಚಾಲಕ ಗಣೇಶ ನಾಯ್ಕ, ಪ್ರಗತಿಪರ ಕೃಷಿಕ ಕೊಣಾಜೆ ಶಂಕರ ಭಟ್, ಪ್ರಗತಿಪರ ಕೃಷಿಕ ಸುಂದರ ದೇವಾಡಿಗ, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎ.ಜೀವನ್‌ದಾಸ್, ಪ.ಪೂ.ಕಾಲೇಜಿನ ಪ್ರಾಂಶುಪಾಲೆ ವಿದ್ಯಾ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿತೇಶ್ ದೇವಾಂಗ ಶುಭಹಾರೈಸಿದರು.
ಇದೇ ಸಂದರ್ಭ ಗದ್ದೆ ಮತ್ತು ನೀರು ಪೂರೈಸಿದ ಭೋಜ ಅವರನ್ನು ಗೌರವಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನಿಧಿ ಶೋಧದಲ್ಲಿ ಪಲ್ಲವಿ ಪ್ರಥಮ ಮತ್ತು ವೆಂಕಿತಾ ದ್ವಿತೀಯ ಬಹುಮಾನ ಪಡೆದರು.
ಹಿರಿಯ ಉಪನ್ಯಾಸಕಿ ಸುಭದ್ರಾ ಭಟ್ ಸ್ವಾಗತಿಸಿ, ದೈಹಿಕ ಶಿಕ್ಷಣ ನಿರ್ದೇಶಕ ಪ್ರತಿಮ್ ಕುಮಾರ್ ವಂದಿಸಿದರು. ಉಪಪ್ರಾಂಶುಪಾಲರಾದ ಗಂಗಾರತ್ನ ಮುಗುಳಿ ನಿರ್ವಹಿಸಿದರು. ಎನ್ನೆಸ್ಸೆಸ್ ಯೋಜನಾಧಿಕಾರಿ ಅಶೋಕ್ ಎಸ್. ಮತ್ತು ಉಪನ್ಯಾಸಕ ಪ್ರವೀಣ್ ಪಿ.ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ವಾಚಿಸಿದರು. ಗ್ರಂಥಪಾಲಕಿ ಜಯಂತಿ, ತೀರ್ಪುಗಾರರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಪ್ರತಿಮ್ ಕುಮಾರ್ ಮತ್ತು ಜಯಪ್ರಕಾಶ್ ಸಹಕರಿಸಿದರು.