Advertisement

ಕೆರ್ವಾಶೆ: ಅಭಿವೃದ್ಧಿಗೊಳ್ಳದ ಬಂಗ್ಲೆಗುಡ್ಡೆ -ಶೆಟ್ಟಿಬೆಟ್ಟು ರಸ್ತೆ

10:01 AM Jul 04, 2019 | sudhir |

ಅಜೆಕಾರು: ಕೆರ್ವಾಶೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲೊಂದಾದ ಬಂಗ್ಲೆಗುಡ್ಡೆ ಶೆಟ್ಟಿಬೆಟ್ಟು ರಸ್ತೆ ಹೊಂಡ ಗುಂಡಿಗಳಿಂದ ಆವೃತವಾಗಿ ಸಂಚಾರ ನಡೆಸುವುದೇ ಅಸಾಧ್ಯವಾಗಿದೆ.

Advertisement

ದೊಡ್ಡ ಹೊಂಡಗಳು

ಸುಮಾರು 3 ಕಿ.ಮೀ ಯಷ್ಟು ಉದ್ದವಿರುವ ಈ ರಸ್ತೆಯ ಒಂದು ಕಿ.ಮೀ ಭಾಗಕ್ಕೆ ಸುಮಾರು 6 ವರ್ಷಗಳ ಹಿಂದೆ ಡಾಮರು ಹಾಕಲಾಗಿತ್ತು, ಉಳಿದ 2 ಕಿ.ಮೀ ರಸ್ತೆ ಮಣ್ಣಿನ ರಸ್ತೆಯಾಗಿಯೇ ಉಳಿದಿದ್ದು ಈ ವರೆಗೆ ಅಭಿವೃದ್ಧಿ ಕಂಡಿಲ್ಲ. ಡಾಮರು ಹಾಕಿದ ರಸ್ತೆಯ ಭಾಗವು ಸಹ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಉದ್ದಕ್ಕೂ ಬೃಹತ್‌ ಹೊಂಡಗಳು ನಿರ್ಮಾಣವಾಗಿ ಜಲ್ಲಿ ಕಲ್ಲಿನ ರಾಶಿ ರಸ್ತೆಯಲ್ಲಿಯೇ ಇದೆ. ಅಭಿವೃದ್ಧಿ ಕಾಣದ 2 ಕಿ.ಮೀ ರಸ್ತೆಯಲ್ಲಿ ಬೃಹತ್‌ ಹೊಂಡಗಳ ಜತೆಗೆ, ರಸ್ತೆ ಮಧ್ಯದಲ್ಲಿಯೇ ಮಳೆ ನೀರು ಹರಿದು ತೋಡಿನಂತಾಗಿದೆ.

ನಿವಾಸಿಗಳಿಗೆ ಸಮಸ್ಯೆ

ಈ ಭಾಗದಲ್ಲಿ ಸುಮಾರು 200ರಷ್ಟು ಮನೆಗಳಿದ್ದು, ಈ ರಸ್ತೆ ಮೂಲಕವೇ ನಿತ್ಯ ಸಂಚಾರ ನಡೆಸಬೇಕಾಗಿದೆ. ರಸ್ತೆಯಲ್ಲಿ ಯಾವುದೇ ವಾಹನ ಸಂಚರಿಸುವುದು ದುಸ್ತರವಾಗಿದ್ದು, ಸ್ಥಳೀಯರು ಕೆರ್ವಾಶೆ ಪೇಟೆ ಹಾಗೂ ಇತರ ಕಡೆಗಳಿಗೆ ಸಂಚರಿಸಬೇಕಾದರೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ. ಈ ಭಾಗದಲ್ಲಿ ಬರುವ ಹುರಿಕುಂಬ್ರಿ ಸೇರಿದಂತೆ ಬಹುತೇಕ ಭಾಗಗಳ ಜನತೆ ಕೃಷಿಯನ್ನೇ ಅವಲಂಬಿಸಿದ್ದು, ಬೆಳೆದ ಬೆಳೆ ಮಾರುಕಟ್ಟೆಗೆ ಸಾಗಾಟ ಮಾಡಲು ರಸ್ತೆ ಸೂಕ್ತವಾಗಿಲ್ಲದೆ ಪರದಾಡಬೇಕಾಗಿದೆ.

Advertisement

ಸಂಪರ್ಕ ರಸ್ತೆ

ಈ ರಸ್ತೆಯು ಕೊಲ್ಲೂರು ಹೆಬ್ರಿಯಾಗಿ ಬರುವ ಪ್ರಯಾಣಿಕರಿಗೆ ಧರ್ಮಸ್ಥಳ, ಶೃಂಗೇರಿ, ಕುದುರೆಮುಖ ಪ್ರದೇಶಗಳಿಗೆ ಸಂಚರಿಸಲು ಹತ್ತಿರದ ಕೂಡು ರಸ್ತೆಯಾಗಿದ್ದು, ರಸ್ತೆ ನಿರ್ಮಾಣವಾದಲ್ಲಿ ಬಂಗ್ಲೆಗುಡ್ಡೆ ಶೆಟ್ಟಿಬೆಟ್ಟು ಪ್ರದೇಶವು ಅಭಿವೃದ್ಧಿಗೊಳ್ಳಲಿದೆ.

ರಸ್ತೆಯಲ್ಲಿ ಹರಿಯುವ ಮಳೆ ನೀರು

ಮಣ್ಣಿನ ರಸ್ತೆಯ ಇಕ್ಕೆಲಗಳನ್ನೂ ನೀರು ಹರಿಯಲು ಸೂಕ್ತ ವ್ಯವಸ್ಥೆಯಿಲ್ಲ. ಇದರಿಂದ ನೀರು ರಸ್ತೆಯಲ್ಲೇ ಹರಿದು ಸಮಸ್ಯೆಯಾಗಿದೆ. ಜತೆಗೆ ರಸ್ತೆಯಲ್ಲಿರುವ ಹೊಂಡ ಬೃಹದಾಕಾರವಾಗುತ್ತಿದೆ.

ತುಂಬಿ ಹೋದ ಗಿಡ ಗಂಟಿಗಳು

ರಸ್ತೆ ಉದ್ದಕ್ಕೂ ಬೃಹತ್‌ ಗಾತ್ರದ ಮರಗಳ ಕೊಂಬೆಗಳು ಚಾಚಿದ್ದು, ಗಿಡಗಂಟಿ ತುಂಬಿದೆ. ಹಲವು ವರ್ಷಗಳಿಂದ ರಸ್ತೆ ನಿರ್ವಹಣೆ ಆಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ದಶಕಗಳಿಂದ ಮನವಿ ಮಾಡುತ್ತಾ ಬಂದಿದ್ದರೂ ರಸ್ತೆಯನ್ನು ಅಭಿವೃದ್ಧಿಪಡಿಸದೇ ಇರುವುದು ಸ್ಥಳೀಯರಲ್ಲಿ ನಿರಾಸೆ ಮೂಡಿಸಿದೆ.

ರಸ್ತೆ ಕಾಮಗಾರಿ ನಡೆಸಿ

ಬಂಗ್ಲೆಗುಡ್ಡೆ ಶೆಟ್ಟಿಬೆಟ್ಟು ಸಂಪರ್ಕ ರಸ್ತೆಯು ಪ್ರಮುಖ ರಸ್ತೆಯಾಗಿದ್ದು, ಹಲವು ವರ್ಷಗಳಿಂದ ಡಾಮರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯರ ಸಮಸ್ಯೆಯನ್ನು ಮನಗಂಡು ಶೀಘ್ರದಲ್ಲಿಯೇ ರಸ್ತೆ ಕಾಮಗಾರಿ ನಡೆಸಬೇಕಾಗಿದೆ.
– ಮಿಥುನ್‌ ಗುಡಿಗಾರ್‌ ಕೆರ್ವಾಶೆ, ಸ್ಥಳೀಯರು
ಪ್ರಸ್ತಾವನೆ ಸಲ್ಲಿಕೆ

ಕೆರ್ವಾಶೆ ಗ್ರಾಮದ ಬಂಗ್ಲೆಗುಡ್ಡೆ ಶೆಟ್ಟಿಬೆಟ್ಟು ಸಂಪರ್ಕ ರಸ್ತೆ ಅಭಿವೃದ್ಧಿಗೆ ಶಾಸಕ ಸುನಿಲ್ ಕುಮಾರ್‌ರವರು ಕೇಂದ್ರ ರಸ್ತೆ ನಿಧಿ ಯೋಜನೆಯಡಿ 1ಕೋಟಿ ರೂ. ಗೆ ಪ್ರಸ್ತಾವನೆ ಸಲ್ಲಿಸಿದ್ದು, ರಾಜ್ಯ ಸರಕಾರದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳದೆ ವಿಳಂಬವಾಗಿದೆ. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡ ತತ್‌ಕ್ಷಣ ರಸ್ತೆ ಅಭಿವೃದ್ಧಿಪಡಿಸಲಾಗುವುದು.
– ಉದಯ್‌ ಕೋಟ್ಯಾನ್‌, ಜಿ.ಪಂ. ಸದಸ್ಯರು
Advertisement

Udayavani is now on Telegram. Click here to join our channel and stay updated with the latest news.

Next