Advertisement

ಕೆರೂರ: ಹೆದ್ದಾರಿ ಮೇಲೂ ಬಿಡಾಡಿ ದನಗಳ ಹಾವಳಿ

05:46 PM Aug 26, 2024 | Team Udayavani |

ಉದಯವಾಣಿ ಸಮಾಚಾರ
ಕೆರೂರ: ರಾಷ್ಟ್ರೀಯ ಹೆದ್ದಾರಿ ಮೇಲೆ ಬಿಡಾಡಿ ದನಗಳು ಗುಂಪು ಹಾವಳಿ ಹೆಚ್ಚಾಗಿದ್ದು ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗಿ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ನಗರದ ಹಿರೇಮಠ ಹೈಸ್ಕೂಲ್‌ ಮುಂಭಾಗ ಸರ್ಕಾರ ಆಸ್ಪತ್ರೆ ಹತ್ತಿರ, ಪೊಲೀಸ್‌ ಠಾಣೆ ಬಳಿ ಹೆದ್ದಾರಿ ರಸ್ತೆ ಮೇಲೆ ಮತ್ತಿತರೆ ಕಡೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಳವಾಗಿದೆ.

Advertisement

ರಾಸುಗಳು ಎಲ್ಲೆಂದರಲ್ಲಿ ರಸ್ತೆಗೆ ಅಡ್ಡಲಾಗಿ ನಿಂತು ಬಿಡುತ್ತಿದ್ದು, ವಾಹನಗಳ ಸವಾರರು ಹಾರ್ನ್ ಮಾಡಿದರೂ ಅವು ಜಗ್ಗಲ್ಲ. ಇದರಿಂದ ಸವಾರರು ಮುಂದೆ ಸಾಗಲು ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದಲ್ಲಿ ಹಾದು ಹೋಗಿರುವ ಹುಬ್ಬಳ್ಳಿ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ-218 ಸದಾ ವಾಹನ ದಟ್ಟಣೆಯಿಂದ ಕೂಡಿದೆ. ಇಲ್ಲಿ ನಿತ್ಯ ಸರ್ಕಾರಿ ಬಸ್‌ ಗಳು ಭಾರಿ ಖಾಸಗಿ ವಾಹನಗಳು ಸೇರಿದಂತೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಹೆದ್ದಾರಿಯಾದ್ದರಿಂದ ವಾಹನಗಳು ತುಸು ವೇಗವಾಗಿಯೇ ಚಲಿಸುತ್ತಿರುತ್ತವೆ. ಹೆದ್ದಾರಿಯಲ್ಲಿ ಹಗಲು-ರಾತ್ರಿ ಬಿಡಾಡಿ ದನಗಳು ಹಿಂಡು ಹಿಂಡಾಗಿ ಠಿಕಾಣಿ ಹೂಡುತ್ತಿವೆ. ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ಸಂಭವಿಸುವುದು ನಿಶ್ಚಿತ.

ವಾರ ಸಂತೆಯಲ್ಲೂ ಹಾವಳಿ:
ಹೊಸಪೇಟೆಯ ಪತ್ತಾರ್‌ ಕಟ್ಟಿ ಬಳಿ ಪ್ರತಿ ಮಂಗಳವಾರ ನಡೆವ ವಾರದ ಕಾಯಿಪಲ್ಲೆ ಸಂತೆಯಲ್ಲಿ ಜಾನುವಾರು ಓಡಾಡಿ
ವ್ಯಾಪಾರಸ್ಥರ ಅಕ್ಕಡಿ ಕಾಳು, ತರಕಾರಿಗಳಿಗೆ ಬಾಯಿ ಹಾಕುತ್ತ ಮುಂದೆ ಬಂದವರನ್ನು ಕೊಂಬಿನಿಂದ ತಿವಿಯುತ್ತವೆ. ಬನಶಂಕರಿ ದೇವಸ್ಥಾನ ಆವರಣದಲ್ಲಿ ಶುಕ್ರವಾರ ಸಂತೆಯಲ್ಲೂ ಇದೇ ಗೋಳು. ಬಿಡಾಡಿ ಜಾನುವಾರುಗಳಿಂದ ಮುಕ್ತಿ ನೀಡುವಂತೆ ಪಟ್ಟಣ ಪಂಚಾಯಿತಿ ಅಧಿಕಾರಿಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ದನ ಗೋಶಾಲೆಗೆ ಬಿಡುವುದು ಸೂಕ್ತ ಕ್ರಮ:
ಬಿಡಾಡಿ ದನಗಳ ಹಾವಳಿ ಹೆಚ್ಚಿರುವುದು ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ಬಂದ ಬಳಿಕ ಸಾಕಷ್ಟು ಬಾರಿ ಜಾನುವಾರು ಮಾಲೀಕರಿಗೆ ಹೊರಗಡೆ ಬಿಡದಂತೆ ಸೂಚಿಸಲಾಗಿದೆ. ಆದರೂ ದನಗಳ ಮಾಲೀಕರು ಅವುಗಳನ್ನು ಮನೆಯಲ್ಲಿ ಸುರಕ್ಷಿತವಾಗಿ ಕಟ್ಟದೆ. ಬೇಜವಾಬ್ದಾರಿಯಿಂದ ರಸ್ತೆಗೆ ಬಿಡುತ್ತಿರುವುದು ಸರಿಯಲ್ಲ. ಹಾಗೆ ಹೊರಗಡೆ ಬಿಡುವ ದನಗಳ ಮಾಲೀಕರಿಗೆ ದಂಡ ಹಾಕುವುದು ಅಥವಾ ಅಂತಹ ಜಾನುವಾರುಗಳನ್ನು ಗೋಶಾಲೆಗೆ ಹಸ್ತಾಂತರಿಸುವ ಕ್ರಮ ಸೂಕ್ತ, ಸಂಬಂಧಿಸಿದ ಅಧಿಕಾರಿಗಳು ಅಂತಹ ಕ್ರಮ ಕೈಗೊಂಡಿದ್ದೇ ಆದಲ್ಲಿ ಬಿಡಾಡಿ ದನಗಳ ಹಾವಳಿ ತಡೆಗಟ್ಟಲು ಸಾಧ್ಯ.

Advertisement

ರಾಷ್ಟ್ರೀಯ ಹೆದ್ದಾರಿ ಮೇಲೆ ದನಗಳು ನಿಲ್ಲುತ್ತಿದು, ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ರಾತ್ರಿ ವೇಳೆ
ಅವುಗಳಿಂದ ಅಪಘಾತಗಳು ಸಂಭವಿಸಬಹುದು. ಹೆದ್ದಾರಿ ಮೇಲೆ ಮತ್ತು ಸಂತೆಗಳಲ್ಲಿ ದನಗಳ ಹಾವಳಿ ತಪ್ಪಿಸಬೇಕು.
●ರಾಚೋಟೇಶ್ವರ ಕುದುರಿ, ಸಾಮಾಜಿಕ ಕಾರ್ಯಕರ್ತ

ಕೆರೂರ ಪಟ್ಟಣ ಪಂಚಾಯಿತಿಗೆ ವರ್ಗಾವಣೆಗೊಂಡು ಇದೀಗ ಬಂದಿದ್ದೇನೆ. ಈ ಕುರಿತು ಸಮಗ್ರ ಮಾಹಿತಿ ಪಡೆದು ಬಿಡಾಡಿ ದನಗಳ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ.
●ರಮೇಶ ಮಾಡಬಾಳ, ಪಪಂ ಮುಖ್ಯಾಧಿಕಾರಿ

ಶ್ರೀಧರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next