Advertisement

Bantwal: ಆರೇ ತಿಂಗಳಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣ

12:46 PM Oct 30, 2024 | Team Udayavani |

ಬಂಟ್ವಾಳ: ಕರಾವಳಿಯಿಂದ ರಾಜಧಾನಿ ಸಂಪರ್ಕದ ಕೊಂಡಿಯಾಗಿರುವ ಮಂಗಳೂರು- ಬೆಂಗಳೂರು ರಾ. ಹೆ.-75ರ ಬಿ.ಸಿ.ರೋಡು- ಅಡ್ಡಹೊಳೆ ಮಧ್ಯೆ ನಡೆಯು ತ್ತಿರುವ 64 ಕಿ.ಮೀ. ಉದ್ದದ ಚತುಷ್ಪಥ ಕಾಂಕ್ರೀಟ್‌ ಕಾಮಗಾರಿಯನ್ನು 2025ರ ಎಪ್ರಿಲ್‌ ಅಂತ್ಯಕ್ಕೆ ಮುಗಿಸಿಕೊಡುವುದಾಗಿ ಗುತ್ತಿಗೆದಾರ ಕಂಪೆನಿಗಳು ಭರವಸೆ ನೀಡಿವೆ.

Advertisement

ಏಳು ವರ್ಷದಿಂದ ನಡೆಯುತ್ತಿರುವ ಕಾಮಗಾರಿಯ ನಿಧಾನಗತಿ ಯಿಂದಾಗಿ ಜನರಿಗೆ, ವಾಹನಿಗರಿಗೆ ಮತ್ತು ಕರಾವಳಿಯ ಆರ್ಥಿ ಕತೆಯ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಉದಯವಾಣಿ ಸುದಿನ ‘ರಾ. ಹೆದ್ದಾರಿ ಕಾಮಗಾರಿ ಯಾವಾಗ ಮುಗಿಸ್ತೀರಿ’ ಎಂಬ ಶೀರ್ಷಿಕೆಯ ಸರಣಿಯಡಿ ಎಳೆ ಎಳೆಯಾಗಿ ವಿವರಣೆ ನೀಡಿತ್ತು. ಇದಕ್ಕೆ ಈ ಕಾಮಗಾರಿಯನ್ನು ವಹಿಸಿಕೊಂಡಿರುವ ಹೈದರಾಬಾದ್‌ ಮೂಲದ ಕೆಎನ್‌ಆರ್‌ ಕನ್‌ಸ್ಟ್ರಕ್ಷನ್ಸ್‌ ಕಂಪೆನಿ ಮತ್ತು ಎಂ.ಔತಡೆ ಪ್ರೈ.ಲಿ.ಸಂಸ್ಥೆಯ ಅಧಿಕಾರಿಗಳು ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ವಿಳಂಬದ ಬಗ್ಗೆ ವಿವರಣೆ ನೀಡಿರುವ ಅಧಿಕಾರಿಗಳು, ಈ ಕಾಮಗಾರಿಗೆ ವೇಗ ನೀಡುವ ಮೂಲಕ ಆರು ತಿಂಗಳಲ್ಲಿ ಕಾಮಗಾರಿ ಮುಗಿಸುವ ಭರವಸೆ ನೀಡಿದ್ದಾರೆ. ಜತೆಗೆ ಯಾವ ಹಂತದಲ್ಲಿ ಯಾವ ಕಾಮಗಾರಿ ಮುಗಿಯಲಿದೆ ಎಂಬ ಹೊಸ ಡೆಡ್‌ಲೈನ್‌ ಕೂಡಾ ನೀಡಿದ್ದಾರೆ.

ಬಿ.ಸಿ.ರೋಡಿನಿಂದ ಪೆರಿಯಶಾಂತಿವರೆಗಿನ 49 ಕಿ.ಮೀ. ಉದ್ದದ ಹೆದ್ದಾರಿಯನ್ನು ಕೆಎನ್‌ಆರ್‌ ಕನ್‌ಸ್ಟ್ರಕ್ಷನ್ಸ್‌ ಕಂಪನಿ ಅಭಿವೃದ್ಧಿಪಡಿಸುತ್ತಿದ್ದರೆ, ಪೆರಿಯಶಾಂತಿಯಿಂದ ಅಡ್ಡಹೊಳೆ ಮಧ್ಯದ 15 ಕಿ.ಮೀ. ಉದ್ದದ ಹೆದ್ದಾರಿಯನ್ನು ಮಹಾರಾಷ್ಟ್ರ ಮೂಲದ ಎಂ.ಔತಡೆ ಪ್ರೈ.ಲಿ. ಅಭಿವೃದ್ಧಿಪಡಿಸುತ್ತಿದೆ.

ಮೂರು ವರ್ಷಗಳಿಂದ ಸಮಸ್ಯೆ
ಬಿ.ಸಿ.ರೋಡು-ಅಡ್ಡಹೊಳೆ ರಸ್ತೆ ಅಭಿವೃದ್ಧಿ ಹೊಣೆಯನ್ನು 2017ರಲ್ಲಿ ಪ್ರತಿಷ್ಠಿತ ಮೆ| ಎಲ್‌ ಆ್ಯಂಡ್‌ ಟಿ ಕಂಪೆನಿಗೆ 821 ಕೋ.ರೂ.ಗೆ ವಹಿಸಲಾಗಿತ್ತು. ಹಲವು ಕಾರಣಕ್ಕೆ ಎಲ್‌ ಆ್ಯಂಡ್‌ ಟಿ ಕಂಪೆನಿಯ ಗುತ್ತಿಗೆ ರದ್ದುಗೊಂಡು ಕಳೆದ 3 ವರ್ಷಗಳ ಹಿಂದೆ ಹೊಸ ಕಂಪನಿಗಳಿಗೆ ಹಸ್ತಾಂತರವಾಗಿತ್ತು. ಹೊಸ ಕಂಪೆನಿಗಳು ಗುತ್ತಿಗೆ ಪಡೆದು ಮೂರು ವರ್ಷವಾಗಿದ್ದು, ಅರೆಬರೆ ಕಾಮಗಾರಿಯಿಂದಾಗಿ ಜನರು ರೋಸಿ ಹೋಗಿದ್ದರು. ಈ ಕಾಮಗಾರಿಯನ್ನು ಯಾವಾಗ ಮುಗಿಸ್ತೀರಿ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದರು. ಅವರ ಪ್ರಶ್ನೆಗಳಿಗೆ ಈ ಕಂಪೆನಿಗಳು ಉತ್ತರ ನೀಡಿವೆ.

ಎಲಿವೇಟೆಡ್‌ ರೋಡ್‌ನ‌ಲ್ಲಿ ಸಂಚಾರ
ಪಾಣೆಮಂಗಳೂರು ಹಾಗೂ ಮೆಲ್ಕಾರಿನಲ್ಲಿ ಅಂಡರ್‌ಪಾಸ್‌ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಪಾಣೆಮಂಗಳೂರಿನಲ್ಲಿ ಅಂಡರ್‌ಪಾಸ್‌ ಮೇಲಿಂದ (ಎಲಿವೇಟೆಡ್‌ ರೋಡ್‌) ಪ್ರಾಯೋಗಿಕ ಚಾಲ ನೆಯೂ ನಡೆಯುತ್ತಿದೆ. ಈ ಎರಡೂ ಅಂಡರ್‌ಪಾಸ್‌ಗಳನ್ನು ಒಂದು ತಿಂಗಳೊಳಗೆ ಅಂದರೆ ನವೆಂಬರ್‌ ಅಂತ್ಯಕ್ಕೆ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುವ ಭರವಸೆಯನ್ನು ಕಂಪೆನಿ ನೀಡಿದೆ. ಬಳಿಕ ಇಲ್ಲಿನ ಸರ್ವೀಸ್‌ ರಸ್ತೆಯ ಕಾಮಗಾರಿಗೆ ವೇಗ ಸಿಗಲಿದೆ.

Advertisement

ಮಾಣಿ ಹಾಗೂ ಉಪ್ಪಿನಂಗಡಿ ಸಮೀಪದ ನೆಕ್ಕಿಲಾಡಿಯಲ್ಲಿ ಅಂಡರ್‌ಪಾಸ್‌ ನಿರ್ಮಿಸಿ ಎಲಿವೇಟೆಡ್‌ ರೋಡ್‌ ನಿರ್ಮಾಣವಾಗಲಿದ್ದು, ಈ ವರ್ಷಾಂತ್ಯಕ್ಕೆ ಅಂದರೆ ಡಿಸೆಂಬರ್‌ ಅಂತ್ಯಕ್ಕೆ ಇದನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಇದರ ಬೆನ್ನಿಗೇ ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್‌, ನೆಲ್ಯಾಡಿಯ ಎಲಿವೇಟೆಡ್‌ ರೋಡ್‌ ಕೂಡ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಪೆರಿಯಶಾಂತಿ-ಅಡ್ಡಹೊಳೆ 2 ತಿಂಗಳಲ್ಲಿ ಪೂರ್ಣ
ಪೆರಿಯಶಾಂತಿಯಿಂದ ಅಡ್ಡಹೊಳೆ ಮಧ್ಯದ 15 ಕಿ.ಮೀ. ಉದ್ದದ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯು ಈಗಾಗಲೇ ಬಹುತೇಕ ಪೂರ್ಣಗೊಂಡಿದೆ. ಇಲ್ಲಿ ಕಾಂಕ್ರೀಟ್‌ ಕಾಮಗಾರಿಗಳು ಬಹುತೇಕ ಪೂರ್ಣ ಗೊಂಡಿದ್ದು, ಎಲಿವೇಟೆಡ್‌ ಹಾಗೂ ಸೇತುವೆ ಸಂಪರ್ಕ ರಸ್ತೆಗಳು ಮಾತ್ರ ಬಾಕಿ ಇದೆ. ಮಳೆ ಬಿಟ್ಟರೆ ಇನ್ನು 2 ತಿಂಗಳಲ್ಲಿ ಅಲ್ಲಿನ ಕಾಮಗಾರಿ ಪೂರ್ಣಗೊಳ್ಳುತ್ತದೆ. ಉಳಿದಂತೆ ಈ ಮಧ್ಯೆ ನಿರ್ಮಾಣಗೊಳ್ಳುವ ಆನೆ ಕಾರಿಡಾರ್‌ಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ಇರುವುದರಿಂದ ಅದು ತೆರವಾಗುವವರೆಗೆ ಅದರ ಕಾಮಗಾರಿಯನ್ನು ಮುಟ್ಟುವಂತಿಲ್ಲ ಎಂದು ಎಂ.ಔತಡೆ ಪ್ರೈ.ಲಿ.ಸಂಸ್ಥೆಯ ಅಧಿಕಾರಿ ವಿವರಿಸಿದ್ದಾರೆ.

ಡೆಡ್‌ಲೈನ್‌ ಒಳಗೆ ಕಾಮಗಾರಿ
ಮಳೆಯಿಂದಾಗಿ ಕಾಮಗಾರಿ ವೇಗವನ್ನು ಪಡೆಯದೆ ಜನತೆಗೆ ಒಂದಷ್ಟು ತೊಂದರೆಯಾಗಿರುವುದು ನಿಜ. ಪ್ರಸ್ತುತ ಮಳೆ ದೂರವಾಗುವ ಲಕ್ಷಣ ಕಂಡುಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಕಾಮಗಾರಿ ನಿರೀಕ್ಷಿತವಾಗಿ ಸಾಗಿದರೆ ಡೆಡ್‌ಲೈನ್‌ಗಳಿಗೆ ಒಳಗಾಗಿ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದು ಪ್ರೊಜೆಕ್ಟ್ ಮ್ಯಾನೇಜರ್‌ ಭರವಸೆ ನೀಡಿದ್ದಾರೆ.
-ನಂದಕುಮಾರ್‌, ಸಾರ್ವಜನಿಕ ಸಂಪರ್ಕಾಧಿಕಾರಿ

ಎಪ್ರಿಲ್‌ನಲ್ಲಿ ಕಲ್ಲಡ್ಕ ಫ್ಲೈ ಓವರ್‌ ಮುಕ್ತ
ಇಡೀ ಕಾಮಗಾರಿಯಲ್ಲಿ ಬಹಳ ಮುಖ್ಯ ಕಾಮಗಾ ರಿಯ ಜತೆಗೆ ಹೆಚ್ಚಿನ ತೊಂದರೆ ಅನುಭವಿಸಿದ ಪ್ರದೇಶವೆಂದರೆ ಅದು 2.1 ಕಿ.ಮೀ. ಉದ್ದದ  ಫ್ಲೈ ಓವರ್‌ ನಿರ್ಮಾಣಗೊಳ್ಳುತ್ತಿರುವ ಕಲ್ಲಡ್ಕ ಪ್ರದೇಶ. ಸದ್ಯಕ್ಕೆ ಇಲ್ಲಿನ ಸರ್ವೀಸ್‌ ರಸ್ತೆಯಲ್ಲಿ ಹೊಂಡ ಗುಂಡಿಗಳು ತುಂಬಿರುವ ಜತೆಗೆ ಕೆಸರು-ಧೂಳಿನಿಂದ ಸಂಚಾರ ಅಯೋಮಯವಾಗಿದೆ. 2025ರ ಮಾರ್ಚ್‌ ಅಥವಾ ಎಪ್ರಿಲ್‌ನಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕಂಪೆನಿ ಹೇಳಿದೆ.

-ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next