ಕೆರೂರ: ಹಸಿ ಮೆಣಸಿನಕಾಯಿ (ಗಿಡ್ಡ) ದರ ದುಪ್ಪಟ್ಟಾಗಿದ್ದು, ಖಡಕ್ ಖಾರಕ್ಕೆ ಹೆಸರಾದ ಗ್ರೀನ್ ಚಿಲ್ಲಿ ಗ್ರಾಹಕರ ಜೇಬಿಗೆ ಭಾರವಾಗಿ ಪರಿಣಮಿಸಿದೆ. ಹೌದು. ಪಟ್ಟಣದ ತರಕಾರಿ ಸಂತೆಯಲ್ಲಿ ಹಸಿ ಮೆಣಸಿನಕಾಯಿ ಕೆಜಿಯ ದರ 240 ರೂ ರಂತೆ ಮಾರಾಟವಾಗಿದೆ. ಬಹುತೇಕರು ದರದ ಚೌಕಾಸಿ ನಡೆಸಿ, ಕೊನೆಗೆ ಉದ್ದ ಮೆಣಸಿನಕಾಯಿ (ಕೆ.ಜಿಗೆ ದರ 100) ಖರೀದಿಸಿದರು. ಆದರೆ ಈ ಉದ್ದಕಾಯಿ ಖಾರ ಸೇರಿ ರುಚಿಯೂ ಕಡಿಮೆ ಎನ್ನುತ್ತಾರೆ ವರ್ತಕ ರಾಚಣ್ಣ ಶೆಟ್ಟರ.
ರುಚಿ, ಖಾರವೇ ಇಲ್ಲ: ಮನೆಗಳಲ್ಲಿ ಹಿಂದಿನಿಂದಲೂ ಹಲವು ಬಗೆಯ ಪಲ್ಲೆ ಮತ್ತು ಚಟ್ನಿಗೆ ಹಸಿ ಮೆಣಸಿನಕಾಯಿ ಬಳಕೆ ವ್ಯಾಪಕವಾಗಿದೆ. ಆದರೆ, ಸಂತೆಯಲ್ಲಿ ದರ ಕೇಳಿ ಬೆಚ್ಚಿ ಬೀಳುವಂತಾಯಿತು. ಹಸಿ ಮೆಣಸಿನಕಾಯಿ ಇಲ್ಲದಿದ್ದರೆ ಪಲ್ಲೆ, ಚಟ್ನಿಗಳಲ್ಲಿ ರುಚಿಯೇ ಇರದು. ಖಾರವೂ ನಾಲಿಗೆಗೆ ಹತ್ತುವುದಿಲ್ಲ ಎನ್ನುತ್ತಾರೆ ಗ್ರಾಹಕ ಪರಶುರಾಮ ಹಾದಿಮನಿ.
ಬೇಡಿಕೆಯಷ್ಟು ಸಿಗುತ್ತಿಲ್ಲ: ಹಿಂಗಾರಿನಲ್ಲಿ ರೈತರು, ಕೃಷಿಕರೇ ಈ ಗಿಡ್ಡ ಮೆಣಸಿನಕಾಯಿ ಬೆಳೆಯುತ್ತಿದ್ದರು. ಈಗ ಬೆಳೆದ ಬ್ಯಾಡಗಿ ತಳಿಯ ಕಾಯಿ ಒಣಗಿಸಿ (ಕೆಂಪಾಗಿಸಿ) ಮಾರ್ಕೆಟ್‌ನಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುವ ಇರಾದೆಯಲ್ಲಿ ಬಹುತೇಕ ರೈತರಿದ್ದಾರೆ.
ಈ ಭಾಗದಲ್ಲಿ ಏತ ನೀರಾವರಿ ಯೋಜನೆಯಲ್ಲಿ ಕಾಲುವೆಗಳಿಂದ ನೀರು ದೊರೆಯುತ್ತಿದ್ದು ಬಹುಪಾಲು ಕೃಷಿಕರು ವಾಣಿಜ್ಯ ಬೆಳೆ ಕಬ್ಬು ಬೆಳೆಗೆ ಒತ್ತು ನೀಡಿದ್ದಾರೆ. ಇವೆಲ್ಲ ಕಾರಣಗಳಿಂದ ಜವಾರಿ ಕಾಯಿಯ ಆವಕ ಕ್ಷೀಣಿಸಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಆಗುತ್ತಿಲ್ಲ. ಬೇಸಿಗೆಯಲ್ಲಿ ಬೆಲೆ ಹೆಚ್ಚುತ್ತಲೇ ಹೋಗುತ್ತಿದೆ ಎನ್ನುತ್ತಾರೆ ಕೃಷಿಕ ಎಂ.ಡಿ. ಪೂಜಾರ.
ಬೆಳಗಾವಿವೇ ಗತಿ: ಕೆರೂರಲ್ಲಿ ಸವಾಲು ಮಾಡಲು ಕಳೆದ ತಿಂಗಳಿಂದ ಜವಾರಿ ಕಾಯಿ ಬೇಡಿಕೆಗೆ ತಕ್ಕಂತೆ ಸಿಗುತ್ತಿಲ್ಲ. ಬೆಳಗಾವಿಯಿಂದ ಹಸಿ ಕಾಯಿ ತರಿಸುತ್ತಿದ್ದೇವೆ. ಸದ್ಯ ಜವಾರಿ ಕಾಯಿ ಸಗಟು ದರವೇ, ಕೆ.ಜಿಗೆ 200 ರೂ. ದಾಟಿದೆ ಎಂದು ಸವಾಲ್ ವ್ಯಾಪಾರಿ ರಿಯಾಜ್ ಚೌದ್ರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಜೆ.ವಿ. ಕೆರೂರ