ಹೊನ್ನಾವರ: ಪ್ರಖ್ಯಾತ ಹಿರಿಯ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದರಾದ ಅನಂತ ನಾಗ್ ಇವರಿಗೆ 2023ರ ಪ್ರತಿಷ್ಠಿತ “ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿ’ ಮತ್ತು ಪ್ರಸಿದ್ಧ ಸ್ತ್ರೀವೇಷಧಾರಿಗಳಾಗಿದ್ದ “ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿ’ ಯಕ್ಷಗಾನದ ಕಲಾವಿದರಾದ ತಿಮ್ಮಪ್ಪ ಹೆಗಡೆ ಶಿರಳಗಿ ಇವರಿಗೆ ಎಂದು ನಾಟ್ಯೋತ್ಸವ ಸಲಹಾ ಸಮಿತಿ ಮತ್ತು ಪ್ರಶಸ್ತಿ ಆಯ್ಕೆ ಸಮಿತಿ ನಿರ್ಧರಿಸಿದೆ.
ಶಿವರಾಮ ಹೆಗಡೆ ಪ್ರಶಸ್ತಿಯು ರೂ.25 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಮತ್ತು ಇತರ ಗೌರವಗಳನ್ನು ಒಳಗೊಂಡಿದೆ. ಗಜಾನನ ಹೆಗಡೆ ಪ್ರಶಸ್ತಿಯು ರೂ.15 ಸಾವಿರ ನಗದು, ಪ್ರಶಸ್ತಿ ಪತ್ರ, ಶಾಲು ಇತ್ಯಾದಿ ಗೌರವಗಳನ್ನು ಹೊಂದಿದೆ.
ಫೆಬ್ರವರಿ 3ರಿಂದ ಫೆಬ್ರುವರಿ 7ರವರೆಗೆ ಗುಣವಂತೆ ಯಕ್ಷಾಂಗಣದಲ್ಲಿ ನಡೆಯಲಿರುವ ಐದು ದಿನಗಳ “ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ’ದ ಸಂದರ್ಭದಲ್ಲಿ ಫೆಬ್ರವರಿ 3ರಂದು ಆಗಮಿಸುವ ಗಣ್ಯರ ಸಮ್ಮುಖದಲ್ಲಿ ಶಿವರಾಮ ಹೆಗಡೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಫೆಬ್ರವರಿ 4ರಂದು ಆಗಮಿಸುವ ಗಣ್ಯರ ಸಮ್ಮುಖದಲ್ಲಿ ಪ್ರದಾನ ಮಾಡಲಾಗುವುದು.