ಬೆಳ್ತಂಗಡಿ: ಉಜಿರೆ ಗ್ರಾಮದ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ರಸ್ತೆಯ ಕೆರೆಕಟ್ಟೆ ಬಳಿ ಹಲವು ವರ್ಷಗಳ ಹಿಂದೆ ಒತ್ತುವರಿಯಾಗಿದ್ದ ಪ್ರಮುಖ ಕೆರೆಯೊಂದು ಲೋಕಾಯುಕ್ತರ ಮೂಲಕ ಮತ್ತೆ ಗ್ರಾ.ಪಂ.ಸುಪರ್ದಿಗೆ ಒಳಪಟ್ಟಿರುವ ಕುರಿತು ವರದಿಯಾಗಿದೆ. ಹಲವು ವರ್ಷಗಳ ಹಿಂದೆ ಕೆರೆಯನ್ನು ಒತ್ತುವರಿ ಮಾಡಲಾಗಿದೆ ಎಂದು ಸ್ಥಳೀಯರೊಬ್ಬರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಸುಮಾರು ಆರು ತಿಂಗಳ ಹಿಂದೆ ಕಾರ್ಯಾಚರಣೆ ಆರಂಭಿಸಿದ ಲೋಕಾಯುಕ್ತರ ತಂಡ ಪರಿಶೀಲನೆ ನಡೆಸಿ ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿ ಈ ಜಾಗದಲ್ಲಿ ಮತ್ತೆ ಕೆರೆ ನಿರ್ಮಿಸುವಂತೆ ಉಜಿರೆ ಗ್ರಾ.ಪಂ.ಗೆ ಸೂಚಿಸಿತ್ತು.
ಲೋಕಾಯುಕ್ತರ ಸೂಚನೆಯಂತೆ ಉಜಿರೆ ಗ್ರಾ.ಪಂ. ಈಗಾಗಲೇ ಈ ಸ್ಥಳಕ್ಕೆ ಬೇಲಿ ನಿರ್ಮಿಸಿ ಸುಸಜ್ಜಿತ ಕೆರೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು ಕಾಮಗಾರಿ ಆರಂಭವಾಗಿದೆ. ಒತ್ತುವರಿಯಾದ ಜಾಗದಲ್ಲಿ ರಸ್ತೆ ಇರುವುದರಿಂದ ರಸ್ತೆ ಪಕ್ಕದ ಉಳಿದ ಜಾಗದಲ್ಲಿ ಉದ್ಯಾನವನವನ್ನು ನಿರ್ಮಿಸಲಾಗುತ್ತದೆ ಎಂಬ ಮಾಹಿತಿ ಇದೆ. ಎ. 13ರಂದು ಲೋಕಾಯುಕ್ತ ಅಧಿಕಾರಿಗಳು, ತಾ.ಪಂ. ಇಒ ಬಿ.ಕುಸುಮಾಧರ, ಉಜಿರೆ ಗ್ರಾ.ಪಂ. ಪಿಡಿಒ ಪ್ರಕಾಶ್ ಶೆಟ್ಟಿ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದ್ದಾಕರೆ. ಬೇಲಿ ನಿರ್ಮಾಣ ಲೋಕಾಯುಕ್ತರು ಸ್ಥಳ ಪರಿಶೀಲನೆ ನಡೆಸಿ ಮತ್ತೆ ಕೆರೆ ನಿರ್ಮಾಣಕ್ಕೆ ಸೂಚಿಸಿದ್ದಾರೆ.
ಆ ಪ್ರಕಾರ ಕೆರೆ, ಉದ್ಯಾನವನ, ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸ್ಥಳವನ್ನು ಗ್ರಾ.ಪಂ. ಸುಪರ್ದಿಗೆ ಪಡೆದಿದೆ ಎಂದು ಪ್ರಕಾಶ್ ಶೆಟ್ಟಿ ನೊಚ್ಚ ತಿಳಿಸಿದ್ದಾರೆ.