ಮಲೆನಾಡು ಭಾಗದ ಬಹು ಜನಪ್ರಿಯ ಸಂಸ್ಕೃತಿಗಳಲ್ಲಿ “ಕೆರೆಬೇಟೆ’ ಕೂಡ ಒಂದು. ಈಗ ಇದೇ ಹೆಸರಿನಲ್ಲಿ ಇದೇ ಸಂಸ್ಕೃತಿಯನ್ನು ಹಿನ್ನೆಲೆಯಾಗಿಟ್ಟುಕೊಂಡು “ಕೆರೆಬೇಟೆ’ ಎಂಬ ಹೆಸರಿನಲ್ಲೇ ಸಿನಿಮಾವೊಂದು ತೆರೆಗೆ ಬರಲು ಸಿದ್ಧವಾಗುತ್ತಿದೆ.
ಈ ಹಿಂದೆ “ರಾಜಹಂಸ’ ಎಂಬ ಅಪ್ಪಟ ಪ್ರೇಮಕಥೆಯೊಂದರ ಮೂಲಕ ತೆರೆಯ ಮೇಲೆ ಹೀರೋ ಆಗಿ ಗುರುತಿಸಿಕೊಂಡಿದ್ದ ನಟ ಗೌರಿಶಂಕರ್, ಈಗ ಮಲೆನಾಡು ಭಾಗದಲ್ಲಿ ಜನಪ್ರಿಯವಾಗಿರುವ “ಕೆರೆಬೇಟೆ’ ಎನ್ನುವ ಸಂಸ್ಕೃತಿಯೊಂದನ್ನು ತೆರೆಮೇಲೆ ತರಲು ಹೊರಟಿದ್ದು, ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
“ಜನಮನ ಸಿನಿಮಾಸ್’ ಬ್ಯಾನರ್‌ನಲ್ಲಿ ಜೈ ಶಂಕರ್ ಪಟೇಲ್ ನಿರ್ಮಿಸುತ್ತಿರುವ “ಕೆರೆಬೇಟೆ’ ಸಿನಿಮಾದಲ್ಲಿ ಹಳ್ಳಿ ಸೊಗಡಿನಲ್ಲಿ ನಡೆಯುವ ನೈಜ ಪ್ರೇಮಕಥೆಯೊಂದನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಇದೊಂದು ಲವ್ ಸ್ಟೋರಿಯಾದರೂ, ಕೆರೆಬೇಟೆ ಚಿತ್ರಕಥೆಯ ಒಂದು ಮುಖ್ಯ ಭಾಗವಾಗಿ ಮೂಡಿಬರಲಿದೆ ಎನ್ನುವುದು ಚಿತ್ರತಂಡದ ಮಾತು. ಕಳೆದ 10 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪವನ್ ಒಡೆಯರ್ ಸೇರಿದಂತೆ ಹಲವು ನಿರ್ದೇಶಕರ ಜೊತೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಗುರುಶಿವ ಹಿತೈಷಿ “ಕೆರೆಬೇಟೆ’ ಚಿತ್ರಕ್ಕೆ ಕಥೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ “ಕೆರೆಬೇಟೆ’ ಸಿನಿಮಾದ ಮುಹೂರ್ತ ನಡೆಸಲಾಗಿದ್ದು, ಮೊದಲ ಹಂತದ ಚಿತ್ರೀಕರಣ ಸಿಗಂದೂರು, ಕೋರ್ಗಾ ಘಾಟ್ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲವು ಪ್ರಮುಖ ಭಾಗಗಳಲ್ಲಿ ನಡೆಯಲಿದೆ.
ಇನ್ನು “ಕೆರೆಬೇಟೆ’ ಸಿನಿಮಾದ ಮೂಲಕ ನಾಯಕಿಯಾಗಿ ಬಿಂದು ಶಿವರಾಮ್ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಗುರುಶಿವ ಹಿತೈಷಿ ಹಾಗೂ ಗೌರಿಶಂಕರ್ ಚಿತ್ರಕಥೆ ಸಿನಿಮಾದಲ್ಲಿದ್ದು, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್ ಅವರ ಸಂಕಲನವಿದೆ.
ಚಿತ್ರದ ಹಾಡುಗಳಿಗೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆಯಿದೆ. ಡಿಫರೆಂಟ್ ಡ್ಯಾನಿ ಸಾಹಸ ಹಾಗೂ ಕಂಬಿರಾಜು ನೃತ್ಯ ಸಂಯೋಜನೆ ಚಿತ್ರಕ್ಕಿದೆ. ಸದ್ಯ “ಕೆರೆಬೇಟೆ’ ಸಿನಿಮಾದ ಚಿತ್ರೀಕರಣ ಆರಂಭಿಸಿರುವ ಚಿತ್ರತಂಡ, ಮುಂದಿನ ವರ್ಷದ ಮಧ್ಯಭಾಗದಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ