Advertisement

ತವರು ಜನರಿಗಾಗಿ ಕೇರಳಿಗರ ಓಣಂ ತ್ಯಾಗ

12:26 PM Aug 26, 2018 | Team Udayavani |

ಬೆಂಗಳೂರು: ದೇವರನಾಡು ಕೇರಳದ ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ಓಣಂ ಹಬ್ಬದ ಸಂಭ್ರಮ ಈ ಬಾರಿ ರಾಜಧಾನಿ ಬೆಂಗಳೂರಿನಲ್ಲಿ ಕಳೆಗುಂದಿದೆ. ಭೀಕರ ಪ್ರವಾಹದ ಹಿನ್ನೆಲೆಯಲ್ಲಿ ತಮ್ಮ ತವರು ರಾಜ್ಯದ ಜನ ಸಂಕಷ್ಟ ಎದುರಿಸುತ್ತಿರುವಾಗ ತಾವು ಹಬ್ಬದ ಸಂಭ್ರಮ ಆಚರಿಸುವುದು ಮಾನವೀಯತೆ ಅಲ್ಲ ಎಂಬ ಕಾರಣಕ್ಕೆ ಬೆಂಗಳೂರಿನಲ್ಲಿ ವಾಸ ಮಾಡುತ್ತಿರುವ ಮಲೆಯಾಳಿ ಕುಟುಂಬಗಳು ಈ ಬಾರಿ ಓಣಂ ಹಬ್ಬ ಆಚರಿಸದಿರಲು ನಿರ್ಧರಿಸಿದ್ದಾರೆ.

Advertisement

ತವರು ರಾಜ್ಯ ಕೇರಳ ಮತ್ತು ತಾವು ವಾಸ ಮಾಡುತ್ತಿರುವ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತರಿಗೆ ನೆರವು ನೀಡಿ, ಆವರ ಸಂಕಷ್ಟದಲ್ಲಿ ಭಾಗಿಯಾಗುವ ಮೂಲಕ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲು ನಗರದ ವಿವಿಧ ಮಲೆಯಾಳಿ ಸಂಘ-ಸಂಸ್ಥೆಗಳು ತೀರ್ಮಾನಿಸಿವೆ.

ಕೇರಳದಲ್ಲಿ ಆಗಸ್ಟ್‌ ಕೊನೆ ವಾರದಲ್ಲಿ ಓಣಂ ಹಬ್ಬ ಆಚರಿಸಲಾಗುತ್ತದೆ. ಅಲ್ಲಿ ಹಬ್ಬ ಮುಗಿದ ಮೇಲೆ ಬೆಂಗಳೂರಿನ ಮಲೆಯಾಳಿ ಸಮುದಾಯವರು ಇಲ್ಲಿ ಹಬ್ಬ ಆಚರಿಸುತ್ತಾರೆ. ಅದರಂತೆ, ಈ ವರ್ಷ ಸೆ. 9 ಮತ್ತು 10ರಂದು ಓಣಂ ಹಬ್ಬ ಆಚರಣೆಗೆ ನಿರ್ಧರಿಸಲಾಗಿತ್ತು. ಅದಕ್ಕಾಗಿ ಕಳೆದ ಎರಡು ತಿಂಗಳಿಂದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಅವುಗಳೆಲ್ಲಾ ಈಗ ಸ್ಥಗಿತಗೊಂಡಿವೆ.

ನಾಲ್ಕು ದಶಕಗಳ ಇತಿಹಾಸ ಹೊಂದಿರುವ “ಕೇರಳ ಸಮಾಜಂ’ ಸಂಘ, ಸುವರ್ಣ ಕರ್ನಾಟಕ ಕೇರಳ ಸಮಾಜಂ ಸೇರಿದಂತೆ ಬೆಂಗಳೂರಿನಲ್ಲಿ 80ಕ್ಕೂ ಹೆಚ್ಚು ಮಲೆಯಾಳಿ ಸಮುದಾಯ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಗಳಿವೆ. ಒಂದೊಂದು ಸಂಘದಲ್ಲಿ 100ರಿಂದ ಸಾವಿರ ಕುಟುಂಬದವರೆಗೆ ಸದಸ್ಯರು ಇದ್ದಾರೆ.

ಪ್ರತಿ ವರ್ಷ ಎಲ್ಲ ಸಂಘಟನೆಗಳು ಓಣಂ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತವೆ. ಒಂದೊಂದು ಸಂಘದಲ್ಲಿ 10 ಲಕ್ಷದಿಂದ 50 ಲಕ್ಷ ರೂ.ವರೆಗೆ ಹಣ ಖರ್ಚಾಗುತ್ತದೆ. ಆದರೆ, ಈ ಬಾರಿ ಹಬ್ಬದ ಸಂಭ್ರಮ ಸ್ಥಗಿತಗೊಳಿಸಿ, ಹಬ್ಬಕ್ಕೆ ಖರ್ಚಾಗುತ್ತಿದ್ದ ಎಲ್ಲ ಹಣವನ್ನು ಕೇರಳ ರಾಜ್ಯದ ನೆರೆ ಸಂತ್ರಸ್ತರ ಪುನರ್ವಸತಿ ಮತ್ತು ಪರಿಹಾರಕ್ಕೆ ಕಳಿಸಿಕೊಡಲಾಗುತ್ತಿದೆ. 

Advertisement

ಸಂತ್ರಸ್ತರಿಗೆ ಓಣಂ ಅರ್ಪಣೆ: ನಮ್ಮ ತವರು ರಾಜ್ಯದಲ್ಲಿ ನೆರೆ ಉಂಟಾಗಿ ನಮ್ಮವನ್ನು ಕಷ್ಟದಲ್ಲಿರುವಾಗ ನಾವು ಇಲ್ಲಿ ಸಂಭ್ರಮಿಸುವುದು ಸರಿಯಲ್ಲ. ಹಾಗಾಗಿ, ಈ ಬಾರಿ ಓಣಂ ಆಚರಿಸದಿರಲು ತೀರ್ಮಾನಿಸಿದ್ದೇವೆ. ಹಬ್ಬಕ್ಕೆ ಕೂಡಿಟ್ಟ ಹಣವನ್ನು ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕಳಿಸಿಕೊಡಲಾಗಿದೆ.

ಜತೆಗೆ ಎರಡು ಟ್ರಕ್‌ ಪರಿಹಾರ ಸಾಮಾಗ್ರಿಗಳನ್ನು ಕೇರಳಕ್ಕೆ ಮತ್ತು ಒಂದು ಟ್ರಕ್‌ ಪರಿಹಾರ ಸಾಮಾಗ್ರಿ ಕೊಡಗು ಜಿಲ್ಲೆಗೆ ಕಳಿಸಿಕೊಡಲಾಗಿದೆ. ಈ ನೆರವು ಹೀಗೇ ಮುಂದುವರಿಯಲಿದೆ ಎಂದು ಮಲೆಯಾಳೀಸ್‌ ಅಸೋಸಿಯೇಷನ್‌ ಆಫ್ ಎಚ್‌ಎಎಲ್‌ (ಮಹಲ್‌) ಸಾರ್ವಜನಿಕ ಸಂಪರ್ಕಾಧಿಕಾರಿ ಅಖೀಲ್‌ ಟಿ. ರಮಣ್‌ “ಉದಯವಾಣಿ’ಗೆ ತಿಳಿಸಿದ್ದಾರೆ.

ಕೇರಳದಲ್ಲಿ ಪ್ರವಾಹ ಉಂಟಾಗಿ ನಮ್ಮವರು ಕಷ್ಟದಲ್ಲಿರುವ ಕಾರಣಕ್ಕೆ ಅವರ ನೋವಿಗೆ ಸ್ಪಂದಿಸಲು ಬೆಂಗಳೂರಿನ ಬಹುತೇಕ ಮಲೆಯಾಳಿ ಸಂಘಟನೆಗಳು ಈ ಬಾರಿ ಓಣಂ ಹಬ್ಬ ಆಚರಿಸದಿರಲು ತೀರ್ಮಾನಿಸಿದ್ದಾರೆ. ಅಲ್ಲದೇ ಆ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿ ಮೂಲಕ ನೆರೆ ಸಂತ್ರಸ್ತರಿಗೆ ನೀಡಲು ತೀರ್ಮಾನಿಸಲಾಗಿದೆ
-ಎನ್‌. ಸತೀಶ್‌, ನನ್ಮಾ ಮಲೆಯಾಳಿ ಕಲ್ಚರರ್‌ ಅಸೋಸಿಯೇಷನ್‌

Advertisement

Udayavani is now on Telegram. Click here to join our channel and stay updated with the latest news.

Next