Advertisement

ವಿಶ್ವನಾಥನ್ ಆನಂದ್ ರನ್ನು ಬೆರಗುಗೊಳಿಸಿದ್ದ ಪೋರ, ತ್ರಿಶೂರಿನ ಚೆಸ್‌ ಶೂರ ನಿಹಾಲ್‌ ಸರಿನ್‌

05:58 PM Aug 07, 2020 | keerthan |

ಆರ್‌. ಪ್ರಗ್ನಾನಂದ, ನಿಹಾಲ್‌ ಸರಿನ್‌, ಡಿ.ಗುಕೇಶ್‌ ಕಳೆದ ಕೆಲವು ವರ್ಷಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ಭಾರತದ ಹದಿಹರೆಯದ ಚೆಸ್ ಗ್ರ್ಯಾಂಡ್‌ಮಾಸ್ಟರ್ಗಳು. ಪ್ರಗ್ಯಾನಂದ ಮತ್ತು ಗುಕೇಶ್‌, ಅತೀ ಹೆಚ್ಚಿನ ಸಂಖ್ಯೆಯ ಗ್ರ್ಯಾಂಡ್‌ಮಾಸ್ಟರ್ ಪ್ರಶಸ್ತಿ ಗೆದ್ದಿರುವ ತಮಿಳುನಾಡಿನ ಪ್ರತಿಭೆಗಳು. ನಿಹಾಲ್‌ ನೆರೆಯ ಕೇರಳದ ತ್ರಿಶೂರಿನವನು. ಚೆಸ್‌ ಆಟದಲ್ಲಿ ಅಂಥಹ ಬೇರು ಹೊಂದಿರದ ಜಿಲ್ಲೆ ಇದು.

Advertisement

ನಿಹಾಲ್‌ ದೇಶದ ಮೂರನೇ ಅತಿ ಕಿರಿಯ ಗ್ರ್ಯಾಂಡ್‌ಮಾಸ್ಟರ್‌. ಆದರೆ 2,600 ರೇಟಿಂಗ್‌ ದಾಟಿದ ದೇಶದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ ಪ್ರತಿಭಾನ್ವಿತ. 14ನೇ ವರ್ಷಕ್ಕೇ ಗ್ರ್ಯಾಂಡ್‌ ಮಾಸ್ಟರ್‌ ಪಟ್ಟ ಪಡೆದ ಚಾಣಾಕ್ಷ. ಪ್ರಸ್ತುತ ಈತನ ರೇಟಿಂಗ್‌ 2,610!

ಆಟದಲ್ಲಿ ನಿಹಾಲ್‌ ವಯಸ್ಸಿಗೆ ಮೀರಿದ ಪ್ರಬುದ್ಧತೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಗನೇ ರೇಟಿಂಗ್‌ ಅಂಕಗಳನ್ನು ಕಲೆ ಹಾಕಿದ ಛಲದಂಕ ಮಲ್ಲ. ಕಳೆದ ವರ್ಷ ರಷ್ಯದ ಖಾಂಟಿ ಮೊನ್ಸಿಕ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ಎರಡನೇ ಸುತ್ತಿಗೇರಿದ್ದ ಸಾಧನೆ ಇವನದ್ದಾಗಿದೆ.

ಎರಡು ವರ್ಷದ ಹಿಂದೆ ಪ್ರೋ ಚೆಸ್‌ ಲೀಗ್‌ನಲ್ಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್‌ ಕಾರ್ಲನ್ಸ್‌ ವಿರುದ್ಧ ಪಂದ್ಯವನ್ನು ಸೋತರು ಕೂಡ ಡ್ರಾ ಮಾಡುವ ಸ್ಥಿತಿಗೆ ತಂದು ಬೆರಗು ಮೂಡಿಸಿದ್ದ. ಟಾಟಾ ಸ್ಟೀಲ್‌ ರ್ಯಾಪಿಡ್‌ ಟೂರ್ನಿಯಲ್ಲಿ ಭಾರತದ ಚೆಸ್‌ ದಿಗ್ಗಜ ವಿಶ್ವನಾಥನ್‌ ಆನಂದ್‌ ಎದುರು ಡ್ರಾ ಸಾಧಿಸಿದ್ದ.

Advertisement

ಹುಟ್ಟು ಪ್ರತಿಭಾವಂತ

ನಿಹಾಲ್‌ ಜನಿಸಿದ್ದು ಜುಲೈ 13, 2004ರಂದು. ಇವರದು ವೈದ್ಯ ಕುಟುಂಬ. ಅಪ್ಪ ಅಬ್ದುಲ್‌ ಸಲಾಂ ಸರಿನ್‌ ಚರ್ಮರೋಗ ತಜ್ಞ. ಅಮ್ಮ ಶಿಜಿನ್‌ ಮನಃಶಾಸ್ತ್ರಜ್ಞೆ. ನಿಹಾಲ್‌ ಮೂರೂವರೆ ವರ್ಷದವನಿರುವಾಗಲೇ 190 ರಾಷ್ಟ್ರಗಳ ಧ್ವಜಗಳ ಗುರುತು ಹಿಡಿಯುತ್ತಿದ್ದ ಪ್ರತಿಭಾಶಾಲಿಯಾಗಿದ್ದ. ಆಗಲೇ ಪೋಷಕರು ಗ್ರಹಿಕೆ, ಸ್ಮರಣ ಶಕ್ತಿ ಗುರುತಿಸಿದ್ದರು. ನಿಹಾಲ್‌ ನಿಗೆ ಅಜ್ಜನೇ ಚೆಸ್‌ ಗುರು. ಆರಂಭದ ಪಾಠಗಳನ್ನು ಕಲಿಸಿಕೊಟ್ಟದ್ದು ನನ್ನ ಅಜ್ಜ ಅವರು ಹೇಳಿಕೊಟ್ಟ ನಿಯಮಗಳನ್ನು ನಾನು ಶ್ರದ್ಧೆಯಿಂದ ಅಭ್ಯಾಸ ಮಾಡಿದೆ. ಈಗಲೂ ಕೆಲವೊಮ್ಮೆ ಅವರು ಹೇಳಿಕೊಟ್ಟ ಕೆಲ ಚಾಣಕ್ಯ ನಡೆಯನ್ನು ಪಂದ್ಯದಲ್ಲಿ ನಾನು ಬಳಸಿಕೊಳ್ಳುತ್ತೇನೆ ಎಂದು ಸಂದರ್ಶನವೊಂದರಲ್ಲಿ ನಿಹಾಲ್ ಹೇಳಿದ್ದರು.

ಸಾಧಿಸುವುದು ಬಹಳಷ್ಟಿದೆ

ನಾನಿನ್ನು ಚೆಸ್‌ ಕಲಿಯುತ್ತಿದ್ದೇನೆ. ವಿಶ್ವಕಪ್‌ ಟೂರ್ನಿಯಲ್ಲಿ ಹಲವಾರು ದಿಗ್ಗಜರ ಮುಂದೆ ಪಂದ್ಯ ಆಡಿದ್ದರೂ ಚೆಸ್‌ ನಲ್ಲಿ ನಾನು ಎಲ್ಲಾ ಸಾಧಿಸಿದೆ ಎಂದರ್ಥವಲ್ಲ. ಯಾವುದೇ ಒಂದು ಕೆಲಸದಲ್ಲಿಯೂ ಮನುಷ್ಯ ಪರಿಪೂರ್ಣವಾಗುವುದಿಲ್ಲ. ಪ್ರತಿ ಕ್ಷಣವು ಹೊಸತನವನ್ನು ಕಲಿಯುತ್ತಲೇ ಇರಬೇಕಾಗುತ್ತದೆ. ಒಂದು ಟೂರ್ನಿಯನ್ನು ಗೆದ್ದು ಎಲ್ಲವನ್ನು ಸಾಧಿಸಿದೆ ಎನ್ನುವ ಅಹಃ ನಮ್ಮಲಿ ಬೇರೂರಿದರೆ ಮುಂದೆ ಏನನ್ನು ಸಾಧಿಸಲಾಗದು. ನಾನಿನ್ನು ಬೆಳೆಯುತ್ತಿರುವ ಗಿಡ. ಇನ್ನೂ ಈ ಕ್ಷೇತ್ರದಲ್ಲಿ ಬೆಳೆದು ದೊಡ್ಡ ಹೆಮ್ಮರವಾಗಬೇಕಿದೆ. ಆದ್ದರಿಂದ ಸಾಧಿಸುವುದು ಇನ್ನೂ ಇದೆ ಎನ್ನುತ್ತಾರೆ ನಿಹಾಲ್‌.

ಲಾಕ್‌ಡೌನ್‌ನಲ್ಲಿ ಹೆಚ್ಚಿನ ಅಭ್ಯಾಸ

ಹಿಂದೆ ಓದು ಮತ್ತು ಆಡದ ಕಡೆ ಎರಡಕ್ಕೂ ಸಮಯವನ್ನು ಮೀಸಲಿಡಬೇಕಿತ್ತು ಹಾಗಾಗಿ ಹೆಚ್ಚಿನ ಸಮಯವನ್ನು ಚೆಸ್‌ ಕಡೆ ನೀಡಲಾಗುತಿರಲಿಲ್ಲ. ಆದರೆ ಇದೀಗ ಲಾಕ್‌ ಡೌನ್‌ನಲ್ಲಿ ಸಿಕ್ಕ ಸಮಯವನ್ನು ಹೆಚ್ಚಾಗಿ ಚೆಸ್‌ ಆಡುವುದರಲ್ಲಿ ಕಳೆಯುತ್ತಿದ್ದೇನೆ. ಚೆಸ್‌ ದಿಗ್ಗಜರ ಆಟದ ವಿಡಿಯೋಗಳನ್ನು ನೋಡುತ್ತ ಹಾಗೂ ಸ್ನೇಹಿತರ ಜತೆ ಆನ್‌ಲೈನ್‌ ಚೆಸ್‌ ಟೂರ್ನಿಗಳನ್ನು ಆಡುತ್ತ ಸಮಯ ಕಳೆಯುತ್ತಿದ್ದೇನೆ ಎಂದು ನಿಹಾಲ್‌ ತಮ್ಮ ಅಭಿಪ್ರಾಯವನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.

ಅಭಿ

Advertisement

Udayavani is now on Telegram. Click here to join our channel and stay updated with the latest news.

Next