ಕಲ್ಲಿಕೋಟೆ: ಮೆಹೆಂದಿ ಕಲಾವಿದ ಒಂದು ಗಂಟೆಯಲ್ಲಿ ಎಷ್ಟು ಮಂದಿಗೆ ಅದನ್ನು ಹಾಕಬಹುದು? ಬರೋಬ್ಬರಿ 910. ಇದು ಹೇಗೆ ಸಾಧ್ಯವೆಂದು ಪ್ರಶ್ನೆ ಮಾಡಬೇಡಿ.
ಕಲ್ಲಿಕೋಟೆಯ ಕಡಲುಂಡಿ ಎಂಬಲ್ಲಿನ ಆದಿತ್ಯಾ ನಿಧಿನ್ (25) ಎಂಬುವರು ಒಂದು ಗಂಟೆಯಲ್ಲಿ 910 ಮಂದಿಗೆ ಕೈಯ ಮೇಲೆ ಮೆಹೆಂದಿ ಹಾಕಿ ಗಿನ್ನೆಸ್ ದಾಖಲೆ ಸ್ಥಾಪಿಸಿದ್ದಾರೆ. ಇದರ ಜತೆಗೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಹಿಂದೊಮ್ಮೆ ಸಮೀನಾ ಹುಸೈನ್ ಎಂಬುವರು 600 ಮಂದಿಗೆ ಹಾಕಿದ್ದ ದಾಖಲೆಯನ್ನೂ ಕೇರಳದ ಯುವತಿ ಮುರಿದಿದ್ದಾರೆ.
ಹೊಸ ವರ್ಷ ಪ್ರಯುಕ್ತ ಜ.1ರಂದು ಕಡಲುಂಡಿಯ ಶಾಲೆಯಲ್ಲಿ ಅವರಿಗಾಗಿಯೇ ವಿಶೇಷವಾಗಿ ಬೆಳಗ್ಗೆ 10 ಗಂಟೆಯಿಂದ 11 ಗಂಟೆಯ ವರೆಗೆ ಮೆಹೆಂದಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯು.ಕೆ.ಯ ಸಮೀನಾ ಅವರು ಒಂದು ಗಂಟೆಯ ಅವಧಿಯಲ್ಲಿ 600 ಮಂದಿಗೆ ಹಾಕಿದ್ದರೆ, ಆದಿತ್ಯಾ ಅವರು 37ನೇ ನಿಮಿಷದಲ್ಲಿಯೇ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.
ಇದನ್ನೂ ಓದಿ:ಸಂವಿಧಾನವನ್ನೇ ಗೌರವಿಸದ ಕಾಂಗ್ರೆಸ್ಸಿಗರದು ಗೂಂಡಾಗಳ ಪಕ್ಷ: ನಳಿನ್‍ಕುಮಾರ್ ಕಟೀಲ್ ಖಂಡನೆ
ಈ ಬಗ್ಗೆ ಖುಷಿಯಿಂದ ಪ್ರತಿಕ್ರಿಯೆ ನೀಡಿದ ಅವರು “ಸಣ್ಣ ವಯಸ್ಸಿನಿಂದಲೂ ಈ ಕಲೆ ಬಗ್ಗೆ ಆಕರ್ಷಿತಳಾಗಿದ್ದೆ. ಇಂಟರ್‌ನೆಟ್‌ನಲ್ಲಿ ಹಿಂದಿನ ಸಾಧನೆಯ ಬಗ್ಗೆ ಹುಡುಕಿದಾಗ ಹಿಂದಿನ ಸಾಧನೆಗಳ ವಿವರ ಲಭ್ಯವಾಯಿತು. ಅದಕ್ಕಾಗಿ ಶ್ರಮ ವಹಿಸಿದೆ’ ಎಂದು ಹೇಳಿದ್ದಾರೆ. ಅವರ ಮೆಹೆಂದಿ ಸಾಧನೆಯನ್ನು ವಿಡಿಯೋ ಚಿತ್ರೀಕರಿಸಲಾಗಿದೆ.
ಆದಿತ್ಯ ಅವರು ಈ ಹಿಂದೆ 12 ನಿಮಿಷಗಳಲ್ಲಿ ಜಗತ್ತಿನ ಏಳು ಅದ್ಭುತಗಳನ್ನು ಚಿತ್ರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ದಾಖಲಿಸಿಕೊಂಡಿದ್ದಾರೆ.