Advertisement

ಗುಂಡ್ಲು ಪೇಟೆಯಲ್ಲಿ ಕೇರಳದ ತ್ಯಾಜ್ಯ

06:25 AM Oct 09, 2018 | |

ಗುಂಡ್ಲುಪೇಟೆ: ಕೇರಳ ರಾಜ್ಯದಿಂದ ಕರ್ನಾಟಕದ ಮೂಲೆ ಹೊಳೆ, ಮದ್ದೂರು ಅರಣ್ಯ ತನಿಖಾ ಠಾಣೆಯನ್ನು ದಾಟಿ ತರಲಾದ ಕೇರಳದ ತ್ಯಾಜ್ಯ ವಿಲೇವಾರಿ ಪ್ರಕರಣ ದಿನೇದಿನೇ ಹೆಚ್ಚುತ್ತಿದೆ. ಇದರ ಬಗ್ಗೆ  ಸರ್ಕಾರ ನಿಯಂತ್ರಣ ಕ್ರಮ ಕೈಗೊಳ್ಳದಿರುವ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ, ನಿಯಂತ್ರಣ ಮಾಡುವವರಾರು ಎಂಬ ಪ್ರಶ್ನೆ ಎದ್ದಿದೆ.

Advertisement

ಪಟ್ಟಣದ ಸಮೀಪದಲ್ಲಿ ಬರುವ ಪುರಸಭೆ ತ್ಯಾಜ್ಯ ವಿಲೇವಾರಿ ಘಟಕ, ಮಲ್ಲಯ್ಯನಪುರ, ಕೂತನೂರು ಹಾಗೂ ಭೀಮನ ಬೀಡು ಗ್ರಾಮಗಳ ಸಮೀಪದಲ್ಲಿ ಈ ಹಿಂದೆ ಲಾರಿಗಟ್ಟಲೆ ತ್ಯಾಜ್ಯವನ್ನು ಸುರಿಯಲಾಗುತ್ತಿತ್ತು. ಇದನ್ನು ಪ್ರಶ್ನಿಸಿದ ಗ್ರಾಮಸ್ಥರಿಗೆ ಬೆದರಿಕೆ ಹಾಕುತ್ತಿದ್ದರಿಂದ ಈ ಬಗ್ಗೆ ಯಾರೂ ಚಕಾರವೆತ್ತುತ್ತಿರಲಿಲ್ಲ. ಬಳಿಕ ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುವ ಘನತ್ಯಾಜ್ಯ ವಿಲೇವರಿ ಘಟಕವನ್ನು ಶ್ರೀರಾಮದೇವರ ಗುಡ್ಡದಲ್ಲಿರುವ ಕೊಳಕ್ಕೆ ತಂದು ಸುರಿಯುತ್ತಿದ್ದರು.

ಭಾನುವಾರ ರಾತ್ರಿ ಸುಮಾರಿನಲ್ಲಿ ಕೇರಳದಿಂದ ಬಂದ ಲಾರಿಯಲ್ಲಿ ಹಣ್ಣು, ತರಕಾರಿಯ ಮೂಟೆ ಗಟ್ಟಲೆ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗಿದೆ. ಈ ಕುರಿತು ಕನ್ನಡ ಪರ ಸಂಘಟನೆಗಳು ಪೊಲೀಸರಿಗೆ ದೂರು ನೀಡಿ ವಾಹನವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಮುಂಚೆಯೂ ಹಲವು ಬಾರಿ ತ್ಯಾಜ್ಯ ವಿಲೇವಾರಿಯಾಗಿದ್ದು, ಇತ್ತಿಚೆಗೆ ಅಧಿಕಾರಿಗಳ ತಂಡ ತ್ಯಾಜ್ಯ ವಿಲೇವಾರಿ ಸ್ಥಳಕ್ಕೆ ಭೇಟಿ ನೀಡಿ ಪರೀಕ್ಷಿಸಿದಾಗ ಕೇರಳದ ತ್ಯಾಜ್ಯವೆಂಬುದು ತಿಳಿದುಬಂದಿತ್ತು.

ಇವುಗಳಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯಿದೆ. ಹೀಗಾಗಿ ತಕ್ಷಣ ಕ್ರಮವಹಿಸಿ ಘನತ್ಯಾಜ್ಯ ವಸ್ತುಗಳು ಗಡಿದಾಟಿ ಬರದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಪುರಸಭೆ ಸೇರಿದಂತೆ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ಪತ್ರ ಬರೆದಿದ್ದರು. ಆದರೂ ಇಲ್ಲವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಅಕ್ರಮ ತ್ಯಾಜ್ಯ ವಿಲೇವಾರಿ ನಿರ್ಬಂಧಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕೇರಳ ರಾಜ್ಯದಲ್ಲಿ ತ್ಯಾಜ್ಯಗಳ ವಿಲೇವಾರಿಗೆ ಬಹಳ ನಿರ್ಬಂಧವಿದ್ದು, ಇದರಿಂದ ಅಲ್ಲಿನ ತ್ಯಾಜ್ಯಗಳನ್ನು ಕದ್ದು ಮುಚ್ಚಿ ಗಡಿದಾಟಿಸಲಾಗುತ್ತಿದೆ. ಇದರ ಹಿಂದೆ ದೊಡ್ಡ ಜಾಲವಿದ್ದು, ಗಡಿಗಳಲ್ಲಿನ ತನಿಖಾ ಠಾಣೆಯ ಸಿಬ್ಬಂದಿಗಳಿಗೆ ಪುಡಿಕಾಸು ನೀಡಿ ತಾಲೂಕನ್ನು ಪ್ರವೇಶಿಸಿ ಸಂಚಾರ ಕಡಿಮೆಯಿರುವ ಪ್ರದೇಶಗಳಲ್ಲಿ ವಿಲೇವಾರಿಯಾಗುತ್ತಿದೆ. ತನಿಖಾ ಠಾಣೆಗಳಲ್ಲಿ ಬಿಗಿಯಾದ ತಪಾಸಣೆ ನಡೆಯಬೇಕದಿದೆ.
– ರಘುರಾಂ, ಹಿಮಗಿರಿ ವನ್ಯ ಜೀವಿ  ಹಿತರಕ್ಷಣಾ ಸಂಸ್ಥೆ, ಗುಂಡ್ಲುಪೇಟೆ

Advertisement

ಗುಂಡ್ಲುಪೇಟೆ  ಸಮೀಪದಲ್ಲಿರುವ ಶ್ರೀರಾಮದೇವರ ಗುಡ್ಡದ ಬಳಿಯಲ್ಲಿರುವ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೇರಳ ತ್ಯಾಜ್ಯವನ್ನು ಸುರಿದಿರುವ ಬಗ್ಗೆ ಮಾಹಿತಿಯಿದೆ. ಈ ಸಂಬಂಧ ಆರೋಗ್ಯ ನಿರೀಕ್ಷಕರಿಗೆ ಮಾರ್ಗದರ್ಶನ ನೀಡಿ ಈ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ಘಟನೆ ಮರುಕಳಿಸದಂತೆ ಕ್ರಮ ವಹಿಸಲಾಗುವುದು.
– ಎ.ರಮೇಶ್‌, ಮುಖ್ಯಾಧಿಕಾರಿ, ಪುರಸಭೆ.
 

Advertisement

Udayavani is now on Telegram. Click here to join our channel and stay updated with the latest news.

Next