ತೃಶ್ಶೂರು : ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರನ್ನು ಕೊಲ್ಲಲಾಗುವುದು ಎಂದು ಪೊಲೀಸ್ ಕಂಟ್ರೋಲ್ ರೂಮಿಗೆ ಹುಸಿ ಫೋನ್ ಕರೆ ಮಾಡಿದ್ದ ಕೇರಳದ ತೃಶ್ಶೂರಿನ ಚಿರಕ್ಕಲ್ ಭಗವತಿ ದೇವಸ್ಥಾನದ ಅರ್ಚಕ ಜಯರಾಮನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರಪತಿ ಕೋವಿಂದ್ ಅವರು ಆ.4ರಿಂದ 7ರ ವರೆಗೆ ತೆಲಂಗಾಣ, ತಮಿಳು ನಾಡು ಮತ್ತು ಕೇರಳ ಭೇಟಿಯಲ್ಲಿದ್ದಾರೆ. ಆ.6ರಂದು ಅವರು ತಿರುವನಂತಪುರದಲ್ಲಿ “ಪ್ರಜಾಸತ್ತೆ ಉತ್ಸವ’ವನ್ನು ಉದ್ಘಾಟಿಸುತ್ತಾರೆ. ಕೇರಳ ವಿಧಾನಸಭೆಯ ವಜ್ರ ಮಹೋತ್ಸವದ ಪ್ರಯುಕ್ತ ಈ ಉತ್ಸವವನ್ನು ಏರ್ಪಡಿಸಲಾಗಿದೆ.
ಪ್ರಜಾಸತ್ತೆ ಉತ್ಸವವನ್ನು ಅನುಸರಿಸಿ ಎರಡು ದಿನಗಳ ಶಾಸಕರ ರಾಷ್ಟ್ರೀಯ ಸಮಾವೇಶ ನಡೆಯಲಿದೆ. ಸ್ವತಂತ್ರ ಭಾರತದಲ್ಲಿ ಎಸ್‌ಸಿ/ಎಸ್‌ಟಿ ಜನರ ಸಶಕ್ತೀಕರಣದ ಸವಾಲು’ಗಳು ಎನ್ನುವುದು ಈ ಸಮಾವೇಶದ ವಿಷಯವಾಗಿದೆ.
ಆ.7ರಂದು ರಾಷ್ಟ್ರಪತಿಗಳು ತೃಶ್ಶೂರಿನಲ್ಲಿ ಸೈಂಟ್ ಥಾಮಸ್ ಕಾಲೇಜಿನ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸುತ್ತಾರೆ; ಬಳಿಕ ದಿಲ್ಲಿಗೆ ಮರಳುತ್ತಾರೆ.
ರಾಷ್ಟ್ರಪತಿಗಳು ಬುಧವಾರ ಗುರುವಾಯೂರಿನ ಶ್ರೀ ಕೃಷ್ಣ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸುತ್ತಾರೆ.