ಕೆಲವರು ಅನಿರೀಕ್ಷಿತವಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡುತ್ತಾರೆ. ನಮ್ಮ ಒಂದು ದಿನದ ಅನಿರೀಕ್ಷಿತ ಸೇವೆ ನಮ್ಮನ್ನು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ಮಾಡುತ್ತದೆ. ಅಂತಹ ಕೊಡುಗೆಗೆ ಸಾಕ್ಷಿ ಎಂಬಂತೆ ಪಾಠದೊಂದಿಗೆ ಪರಿಸರ ಪ್ರೇಮವನ್ನು ವಿದ್ಯಾರ್ಥಿಗಳಲ್ಲಿ ಬೆಸೆದ ಶಿಕ್ಷಕರೊಬ್ಬರ ಸ್ಟೋರಿಯಿದು.
ಕೇರಳದ ಆಲಪ್ಪುಳದ ವಿಜ್ಞಾನ ವಿಲಾಸಿನಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜೀವಶಾಸ್ತ್ರ ವಿಷಯದ ಶಿಕ್ಷಕರಾಗಿದ್ದ ರಾಪಿ ರಾಮನಾಥ್ ಅವರನ್ನು ಶಾಲೆಯ ಇಕೋ ಕ್ಲಬ್ ನ್ನು ನೋಡಿಕೊಳ್ಳಲು , ಇಕೋ ಕ್ಲಬ್ ನ ಸಂಯೋಜಕರಾಗಿ ಮಾಡಲಾಗುತ್ತದೆ.
ಇಷ್ಟುದಿನ ತರಗತಿಯ ಒಳಗೆ ಪರಿಸರದ ಬಗ್ಗೆ ಮಾತನಾಡುತ್ತಿದ್ದ ರಾಪಿ ರಾಮನಾಥ್ ಮಕ್ಕಳೊಂದಿಗೆ ಬೆರೆತು ಪರಿಸರದ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ. ಅವರೊಳಗೆ ಪರಿಸರ ಪ್ರೇಮದ ಬೇರು ಚಿಗುರೊಡೆಯಲು ಶುರುವಾಗುತ್ತದೆ.
ಶಾಲಾ ಮಕ್ಕಳಿಗೆ ಪರಿಸರದ ಕುರಿತಾದ ಚಟುವಟಿಕೆಯ ಅರಿವನ್ನು ಮೂಡಿಸುತ್ತಾ, ಶಾಲಾ ವಠಾರದಲ್ಲಿ ಗಿಡಗಳನ್ನು ನೆಡುತ್ತಾರೆ. ಶಾಲಾ ಪರಿಸರ ಪ್ರೇಮವನ್ನು ನೋಡಿ ಅರಣ್ಯ ಇಲಾಖೆ ಮೊದಲು ಶಾಲೆಗೆ 50 ಗಿಡಗಳನ್ನು ನೀಡುತ್ತದೆ. ಮಕ್ಕಳ ಕೈಯಿಂದ ರಾಪಿ ರಾಮನಾಥ್ ಇದನ್ನು ನೆಟ್ಟು ಬೆಳೆಸುತ್ತಾರೆ. ಗಿಡಮೂಲಿಕೆಗಳ ಉದ್ಯಾನವನ್ನೇ ಶಾಲಾ ಕ್ಯಾಂಪಸ್ ನಲ್ಲಿ ನೆಡುತ್ತಾರೆ. ಎಲ್ಲಿಯವರೆಗೆ ಅಂದರೆ ಗಿಡಗಳಾಗಿ ನೆಟ್ಟ ಸಸ್ಯಗಳು ಇಂದು ಬಾನೆತ್ತರಕ್ಕೆ ಬೆಳೆದು ಕಾಡಿನಂತೆ ಬೆಳೆದು ಹಸಿರಿನ ವನದಂತೆ ಕಾಣುತ್ತಿದೆ.
ಕಳೆದ ಹಲವರು ವರ್ಷಗಳಿಂದ ಶಾಲೆಯ ವಿವಿಧ ಬ್ಯಾಚ್ ನ ವಿದ್ಯಾರ್ಥಿಗಳನ್ನು ಬಳಸಿಕೊಂಡು ʼಮಿಯವಾಕಿʼ ಮಾದರಿಯ ಸಣ್ಣ ಅರಣ್ಯವನ್ನು ಕ್ಯಾಂಪಸ್ ನಲ್ಲೇ ಬೆಳೆದಿದ್ದಾರೆ. ಇದುವರೆಗೆ 112 ಜಾತಿಯ 450 ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟಿದ್ದಾರೆ. ಈ ಗಿಡಗಳು ಇಂದು ಮರವಾಗಿ ಬೆಳದು ನಿಂತಿದೆ. ಈ ಸಣ್ಣ ಕಾಡಿಗೆ ಅವರು ʼ ವಿದ್ಯಾವನಂʼ ಎಂದು ಹೆಸರಿಟ್ಟಿದ್ದಾರೆ.
ಮಾವು ಮತ್ತು ಹಲಸು, ಹಾಗೆಯೇ ಹಳದಿ ಬೌಹಿನಿಯಾದಂತಹ ಕೆಲವು ವಿಶಿಷ್ಟ ಸಸ್ಯಗಳು ಈ ಕಾಡಿನಲ್ಲಿದೆ. ಪಕ್ಷಿ ಚಿಟ್ಟೆಗಳನ್ನು ಇವು ಆಕರ್ಷಿಸುತ್ತವೆ ಎಂದು ಅವರು ಹೇಳುತ್ತಾರೆ.
ಇದರೊಂದಿಗೆ ರಾಪಿ ಅವರು ಎನ್ ಜಿಒವೊಂದರ ಸಂಯೋಜಕರಾಗಿಯೂ ಕೆಲಸ ಮಾಡಿದ್ದು, ಎನ್‌ಜಿಒ ಅಂಗವಾಗಿ ನರ್ಸರಿಯೊಂದನ್ನು ನಡೆಸುತ್ತಿದ್ದು, ಇಲ್ಲಿ ಉಚಿತವಾಗಿ ಗಿಡಗಳನ್ನು ವಿತರಿಸಲಾಗುತ್ತದೆ ಎಂದು ಅವರು ಹೇಳಿದರು.
ಹಲವಾರು ಶಾಲೆಗಳು, ಸರ್ಕಾರಿ ಕಚೇರಿಗಳು, ಪೂಜಾ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ಎನ್ ಜಿಒನಲ್ಲಿದ್ದು ಆಲಪ್ಪುಳ ಸುತ್ತಮುತ್ತ ಸುಮಾರು 1 ಲಕ್ಷಕ್ಕೂ ಅಧಿಕ ಗಿಡಗಳನ್ನು ನೆಟ್ಟಿದ್ದಾರೆ.
ಇವರ ಪರಿಸರ ಪ್ರೇಮಕ್ಕೆ ಪ್ರಶಸ್ತಿಗಳು ಹುಡುಕಿಕೊಂಡು ಬಂದಿದ್ದು, 2015 ರಲ್ಲಿ ಕೇರಳ ರಾಜ್ಯ ಜೀವವೈವಿಧ್ಯ ಮಂಡಳಿಯ “ಅತ್ಯುತ್ತಮ ಪರಿಸರವಾದಿ ಪ್ರಶಸ್ತಿ”, ಇತ್ತೀಚೆಗೆ ಕೇರಳ ಅರಣ್ಯ ಮತ್ತು ವನ್ಯಜೀವಿ ಇಲಾಖೆ “ವನಮಿತ್ರ ಪ್ರಶಸ್ತಿ” ಪ್ರಶಸ್ತಿಯನ್ನು ನೀಡಿದೆ.
-ಸುಹಾನ್ ಶೇಕ್