Advertisement

ಶಿಕ್ಷಣ ಗುಣಮಟ್ಟ ಸೂಚ್ಯಂಕ: ಕೇರಳಕ್ಕೆ ಪ್ರಥಮ ಸ್ಥಾನ ; ತೃತೀಯ ಸ್ಥಾನದಲ್ಲಿ ಕರ್ನಾಟಕ

09:15 AM Oct 01, 2019 | Team Udayavani |

ನವದೆಹಲಿ: ನೀತಿ ಆಯೋಗವು ಬಿಡುಗಡೆ ಮಾಡಿರುವ ವರದಿಯ ಪ್ರಕಾರ ದೇಶದ ಇಪ್ಪತ್ತು ದೊಡ್ಡ ರಾಜ್ಯಗಳ ಪೈಕಿ ಉತ್ತಮ ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕದಲ್ಲಿ ಕೇರಳ ರಾಜ್ಯವು ಮುಂಚೂಣಿಯಲ್ಲಿದೆ. ಇದರ ಬೆನ್ನಲ್ಲೇ ರಾಜಸ್ಥಾನ ಮತ್ತು ಕರ್ನಾಟಕ ರಾಜ್ಯಗಳಿವೆ. ದೇಶದ ಅತೀದೊಡ್ಡ ರಾಜ್ಯಗಳಲ್ಲಿ ಒಂದಾಗಿರುವ ಉತ್ತರಪ್ರದೇಶ ಈ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಅಂದರೆ 20ನೇ ಸ್ಥಾನವನ್ನು ಸಂಪಾದಿಸಿದೆ. ಇದು 2016-17ನೇ ಸಾಲಿನ ವರದಿಗಳನ್ನು ಆಧರಿಸಿ ನೀತಿ ಆಯೋಗವು ಸಿದ್ಧಪಡಿಸಿರುವ ಸೂಚ್ಯಂಕ ಪಟ್ಟಿಯಾಗಿದೆ.

Advertisement

ಈ ಪಟ್ಟಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುವ ಕೇರಳ ರಾಜ್ಯದ ಒಟ್ಟಾರೆ ನಿರ್ವಹಣೆ 76.6 ಪ್ರತಿಶತವಾಗಿದ್ದರೆ, ಕೊನೆಯ ಸ್ಥಾನ ಸಂಪಾದಿಸಿರುವ ಉತ್ತರಪ್ರದೇಶದ ಒಟ್ಟಾರೆ ನಿರ್ವಹಣೆ 36.4 ಪ್ರತಿಶತವಾಗಿದೆ.

ನಮ್ಮ ಶಾಲೆಗಳ ಯಶಸ್ಸು – ಶಾಲಾ ಶಿಕ್ಷಣ ಗುಣಮಟ್ಟ ಸೂಚ್ಯಂಕ (SEQI) ಎಂಬ ಶೀರ್ಷಿಕೆಯಡಿಯಲ್ಲಿ ನೀತಿ ಆಯೋಗವು ಈ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯನ್ನು ನೀತಿ ಆಯೋಗ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ವಿಶ್ವಬ್ಯಾಂಕ್ ಜಂಟಿಯಾಗಿ ಶಿಕ್ಷಣ ಕ್ಷೇತ್ರಗಳ ತಜ್ಞರ ಮಾಹಿತಿಗಳನ್ನು ಆಧರಿಸಿ ಈ ವರದಿಯನ್ನು ಬಿಡುಗಡೆಗೊಳಿಸಿವೆ.

ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಶಾಲಾ ಮಕ್ಕಳ ಕಲಿಕಾ ಫಲಿತಾಂಶಗಳನ್ನು ಆಧರಿಸಿ ಈ ಸೂಚ್ಯಂಕವನ್ನು ಸಿದ್ಧಗೊಳಿಸಲಾಗಿದೆ.

ಇನ್ನು ಎಂಟು ಸಣ್ಣ ರಾಜ್ಯಗಳಲ್ಲಿ ಮಣಿಪುರ, ತ್ರಿಪುರ ಹಾಗೂ ಗೋವಾ ರಾಜ್ಯಗಳು ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡಿವೆ. ಆ ಬಳಿಕದ ಸ್ಥಾನಗಳಲ್ಲಿ ಮಿಝೊರಾಂ, ನಾಗಾಲ್ಯಾಂಡ್, ಸಿಕ್ಕಿಂ, ಮೇಘಾಲಯ ಹಾಗೂ ಅರುಣಾಚಲಪ್ರದೇಶ ರಾಜ್ಯಗಳಿವೆ.

Advertisement

ಏಳು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಉತ್ತಮ ಶಿಕ್ಷಣ ಗುಣಮಟ್ಟ ಹೊಂದಿರುವ ಹೆಗ್ಗಳಿಕೆ ಚಂಢಿಗಢದ ಪಾಲಾಗಿದೆ. ದಾದ್ರಾ ಮತ್ತು ನಗರ ಹವೇಲಿ ಹಾಗೂ ದೆಹಲಿ ಆ ಬಳಿಕದ ಎರಡು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿವೆ.

30 ದರ್ಶಕಗಳನ್ನು ಮಾದರಿಗಳನ್ನಾಗಿರಿಸಿಕೊಂಡು ಅವುಗಳನ್ನು ಎರಡು ವಿಶಾಲ ವಿಭಾಗಗಳನ್ನಾಗಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗಿದೆ. ಕಲಿಕೆ, ಲಭ್ಯತೆ, ಮೂಲಸೌಕರ್ಯ ಮತ್ತು ಸೌಲಭ್ಯಗಳು, ಪಾರದರ್ಶಕತೆ ಫಲಿತಾಂಶಗಳು, ಸರಕಾರಿ ಸವಲತ್ತುಗಳ ಲಭ್ಯತೆ ಮತ್ತು ಬಳಕೆ ಇತ್ಯಾದಿ ಮಾನದಂಡಗಳನ್ನು ಪರಿಗಣಿಸಲಾಗುತ್ತದೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಶಿಕ್ಷಣ ರಂಗದಲ್ಲಿನ ತಮ್ಮ ಸಾಮರ್ಥ್ಯ ಹಾಗೂ ದೌರ್ಬಲ್ಯಗಳನ್ನು ಗುರುತಿಸಿಕೊಂಡು ಅದಕ್ಕೆ ಅನುಗುಣವಾಗಿ ನೀತಿರೂಪಿಸಿಕೊಳ್ಳಲು ಈ ವರದಿಯು ಮಾರ್ಗದರ್ಶನ ಮಾಡಲಿದೆ ಎಂಬ ಆಶಯವನ್ನು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ಅವರು ಈ ಸೂಚ್ಯಂಕ ವರದಿಯನ್ನು ಬಿಡುಗಡೆಗೊಳಿಸಿ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next