Advertisement

Milk: ಕರ್ನಾಟಕ ಗಡಿಯ ಹಾಲು ಕೇರಳ ಪಾಲು! ಖರೀದಿ ದರ ಇಲ್ಲಿಗಿಂತ ಕೇರಳದಲ್ಲೇ ಅಧಿಕ

12:20 AM Nov 06, 2024 | Team Udayavani |

ಮಂಗಳೂರು: ಖರೀದಿ ದರ ಹೆಚ್ಚಿರುವ ಕಾರಣ ಕರ್ನಾಟಕ ಗಡಿ ಭಾಗದಲ್ಲಿ ಉತ್ಪಾದನೆಯಾಗುವ ಸುಮಾರು 3 ಸಾವಿರ ಲೀ.ಗೂ ಅಧಿಕ ಹಾಲು ನಿತ್ಯ ನೆರೆಯ ರಾಜ್ಯ ಕೇರಳದ ಪಾಲಾಗುತ್ತಿದೆ!

Advertisement

ದಕ್ಷಿಣ ಕನ್ನಡ ಜಿಲ್ಲೆಯ ಕೇರಳ ಗಡಿ ಭಾಗದಲ್ಲಿ ಇರುವ ಕೆಲವು ಹೈನುಗಾರರು ದಿನನಿತ್ಯ ಹಾಲನ್ನು ಕೇರಳದ ಹಾಲು ಖರೀದಿ ಕೇಂದ್ರಗಳಿಗೆ ಮಾರಾಟ ಮಾಡುತ್ತಿದ್ದಾರೆ. ಜತೆಗೆ ಕರ್ನಾಟಕ ಭಾಗದ ಹಾಲಿನ ಗುಣಮಟ್ಟ ಉತ್ತಮವಾಗಿದೆ ಎಂಬ ಕಾರಣ ನೀಡಿ ಕೇರಳ ಭಾಗದಲ್ಲಿರುವ ಖಾಸಗಿ ವ್ಯಕ್ತಿಗಳು, ಹೊಟೇಲ್‌, ಕ್ಯಾಟರಿಂಗ್‌ ಪ್ರಮುಖರು ಕೂಡ ಆದ್ಯತೆಯಲ್ಲಿ ಖರೀದಿ ಮಾಡುತ್ತಿದ್ದಾರೆ.

ಯಾಕೆ ಕೇರಳಕ್ಕೆ ಹಾಲು?
ಕರ್ನಾಟಕದಲ್ಲಿ ಹಾಲಿನ ಖರೀದಿ ದರ 40 ರೂ. (5 ರೂ. ಸರಕಾರದ ಸಬ್ಸಿಡಿ ಸಹಿತ) ಆಸುಪಾಸಿನಲ್ಲಿದ್ದರೆ, ಕೇರಳದಲ್ಲಿ 50 ರೂ. ಆಸುಪಾಸಿನಲ್ಲಿ ಖರೀದಿ ದರವಿದೆ. ಹೀಗಾಗಿ ಗಡಿ ಭಾಗದ ಸುಮಾರು 5-7 ಕಿ.ಮೀ. ವ್ಯಾಪ್ತಿಯ ಕರ್ನಾಟಕದ ಹೈನುಗಾರರು 10 ಲೀ.ಗೂ ಹೆಚ್ಚು ಹಾಲಿದ್ದರೆ ಕೇರಳದ ಡಿಪೋಗಳಿಗೆ ಮಾರಾಟ ಮಾಡುತ್ತಿದ್ದಾರೆ. ಸಂಚಾರಕ್ಕೆ ಕೊಂಚ ಖರ್ಚಾದರೂ ಹೆಚ್ಚು ಲಾಭ ಸಿಗುತ್ತದೆ. ಹೈನುಗಾರಿಕೆಯ ನಷ್ಟವನ್ನು ಈ ಮೂಲಕ ಸರಿಪಡಿಸಬಹುದು ಎಂಬುದು ಅವರ ಲೆಕ್ಕಾಚಾರ. ಅಲ್ಲದೆ ಕರ್ನಾಟಕದಲ್ಲಿ 5 ರೂ. ಪ್ರೋತ್ಸಾಹಧನ ನಿಗದಿತ ಸಮಯಕ್ಕೆ ಸಿಗುವುದೇ ಇಲ್ಲ.

ಉತ್ತಮ ಗುಣಮಟ್ಟದ ಒಂದು ಲೀ. ಹಾಲಿಗೆ ದಕ್ಷಿಣ ಕನ್ನಡದಲ್ಲಿ 38 ರೂ. ಖರೀದಿ ದರ ಇದೆ. ಗುಣಮಟ್ಟ ಕಡಿಮೆ ಇದ್ದರೆ ದರ ಕಡಿಮೆಯಾಗುತ್ತದೆ. ಇದಕ್ಕೆ 5 ರೂ. ಸರಕಾರದ ಪ್ರೋತ್ಸಾಹ ಧನವಿದೆ. ಅದೇ ಕೇರಳದಲ್ಲಿ ಉತ್ತಮ ಗುಣಮಟ್ಟದ ಹಾಲನ್ನು ಲೀಟರ್‌ಗೆ 50 ರೂ.ಗಳಿಗಿಂತಲೂ ಅಧಿಕ ದರದಲ್ಲಿ ಖರೀದಿ ಮಾಡಲಾಗುತ್ತಿದೆ. ಇದು ಗಡಿಭಾಗದ ಹೈನುಗಾರರಿಗೆ ಹೆಚ್ಚು ಅನುಕೂಲ ತಂದಿದೆ.

ಕರ್ನಾಟಕ ಗಡಿ ಭಾಗದ ಅಳಿಕೆ ಮುಳಿಯ ನಿವಾಸಿ ಜೆರಾಲ್ಡ್‌ ಡಿ’ಸೋಜಾ ಅವರ ಪ್ರಕಾರ, “ಕೇರಳದ ಡಿಪೋಗಳಿಗೆ ಹಾಲು ಹಾಕುವುದರಿಂದ ಪ್ರತೀ ಲೀಟರ್‌ಗೆ ಹೆಚ್ಚುವರಿಯಾಗಿ ಸುಮಾರು 10 ರೂ. ಸಿಗುತ್ತದೆ. ಹಾಲಿನ ಗುಣಮಟ್ಟ ಚೆನ್ನಾಗಿದ್ದರೆ ಲೀ.ಗೆ 50 ರೂ.ಗಳಿಗಿಂತಲೂ ಅಧಿಕ ದರ ಸಿಗುತ್ತದೆ. ಪ್ರಸ್ತುತ ಕರ್ನಾಟಕದಲ್ಲಿ ಸಬ್ಸಿಡಿ ಹಣ ಸಮರ್ಪಕವಾಗಿ ಸಿಗುತ್ತಿಲ್ಲ. ಪಶು ಆಹಾರದ ಬೆಲೆಯೂ ಏರಿದೆ. ದ. ಕನ್ನಡದಲ್ಲಿ ಹೈನುಗಾರಿಕೆ ನಷ್ಟದಲ್ಲಿದೆ. ರೈತರು ಇದರಿಂದ ದೂರ ಸರಿಯುತ್ತಿದ್ದಾರೆ. ಖರೀದಿ ದರವೂ ಕಡಿಮೆ ಇದೆ. ಹೀಗಾಗಿ ಹೆಚ್ಚು ದರ-ಲಾಭ ಇರುವಲ್ಲಿಗೆ ಹಾಲು ಕೊಡುವುದು ರೈತರಿಗೆ ಅನಿವಾರ್ಯವಾಗಿದೆ’.

Advertisement

ಕೇರಳದ ವರ್ಕಾಡಿಯ ಹಾಲು ಉತ್ಪಾದಕರೊಬ್ಬರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, “ಕೇರಳದಲ್ಲಿ ಗುಣಮಟ್ಟದ ಆಧಾರ
ದಲ್ಲಿ ಮಾತ್ರ ಹಾಲಿನ ಖರೀದಿ ದರ ಇರುತ್ತದೆ. ಆದರೆ ಕರ್ನಾಟಕಕ್ಕೆ ಹೋಲಿಸಿದರೆ ಖರೀದಿ ದರ ಹೆಚ್ಚು. ಹೀಗಾಗಿ ಕರ್ನಾಟಕ ಗಡಿಯ ನಿವಾಸಿಗಳು ಹೆಚ್ಚು ಪ್ರಮಾಣದಲ್ಲಿ ಹಾಲು ತರುತ್ತಾರೆ. ಕೆಲವೊಮ್ಮೆ ಹಾಲು ಮಾರಾಟ ದರಕ್ಕಿಂತ ಅಧಿಕ ಖರೀದಿ ದರ ರೈತರಿಗೆ ಸಿಗುತ್ತದೆ’ ಎಂದಿದ್ದಾರೆ.

ಕಾಸರಗೋಡಿನ ಮಂಜೇಶ್ವರದ ಹಾಲು ಡಿಪೋ ಒಂದರ ಪ್ರಮುಖರು “ಉದಯವಾಣಿ’ ಜತೆಗೆ ಮಾತನಾಡಿ, “ಕೇರಳದಲ್ಲಿ ಗುಣಮಟ್ಟದ ಆಧಾರದಲ್ಲಿ ಕನಿಷ್ಠ 44 ರೂ.ಗಳಿಂದ 60 ರೂ.ವರೆಗೆ ಖರೀದಿ ದರ ನೀಡಿದ ಉದಾಹರಣೆ ಇದೆ. ಹೀಗಾಗಿ ಗಡಿಭಾಗದ ಕೆಲವರು ಹಾಲು ತರುತ್ತಾರೆ. ಅದಕ್ಕೆ ಗಡಿ ನಿರ್ಬಂಧ ಇಲ್ಲ. ಕೇರಳ ಹಾಲು ಒಕ್ಕೂಟವೂ ಪ್ರೋತ್ಸಾಹಧನ ನೀಡುತ್ತದೆ. ಆದರೆ ರಾಜ್ಯ ಬದಲಾಗಿರುವುದರಿಂದ ಕೇರಳ ಸರಕಾರದ ಪ್ರೋತ್ಸಾಹಧನ ಮಾತ್ರ ಅವರಿಗೆ ಸಿಗುವುದಿಲ್ಲ’ ಎಂದಿದ್ದಾರೆ.

ಕೇರಳದಲ್ಲಿ ಹಾಲು ಗುಣಮಟ್ಟ ಕಡಿಮೆ ಇದ್ದರೂ ಖರೀದಿ ಮಾಡುತ್ತಾರೆ. ನಿಯಮಾವಳಿ ಪ್ರಕಾರ ಇದಕ್ಕೆ ಅವಕಾಶ ಇಲ್ಲ. ಆದರೆ ರೈತರ ನೆಪ ಹೇಳಿ ಕೇರಳ ಸರಕಾರ ಕಡಿಮೆ ಗುಣಮಟ್ಟದ ಹಾಲನ್ನು ಖರೀದಿ ಮಾಡಲು ಅವಕಾಶ ನೀಡಿದೆ. ಪೂರಕವಾಗಿ ದರ ಕೂಡ ಕೊಂಚ ಏರಿಸಿದೆ. ಕರ್ನಾಟಕದಲ್ಲಿ ಇದಕ್ಕೆ ಅವಕಾಶ ಇಲ್ಲ. ಸುಮಾರು 3 ಸಾವಿರ ಲೀ. ಹಾಲು ಈ ಕಾರಣದಿಂದ ಕೇರಳ ಗಡಿ ಭಾಗದಲ್ಲಿ ಮಾರಾಟ ಆಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಹೈನುಗಾರಿಕೆಯ ಭವಿಷ್ಯದ ದೃಷ್ಟಿಯಿಂದ ಒಂದು ಲೀ.ಗೆ ಹಾಲಿಗೆ ಖರೀದಿ ದರವನ್ನು ಇನ್ನೂ 5 ರೂ. ಏರಿಕೆ ಮಾಡಿದರೆ ಉತ್ತಮ.
– ಸುಚರಿತ ಶೆಟ್ಟಿ , ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ

- ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next