ಕೊಚ್ಚಿ: ಮಾಲಿವುಡ್ ಸಿನಿಮಾವೊಂದರ ಬಗ್ಗೆ ನೆಗೆಟಿವ್ ವಿಮರ್ಶೆ ಮಾಡಿದ್ದಕ್ಕಾಗಿ ಯೂಟ್ಯೂಬ್, ಫೇಸ್ ಬುಕ್ ಸೇರಿದಂತೆ 9 ಮಂದಿಯ ವಿರುದ್ಧ ಕೊಚ್ಚಿ ಪೊಲೀಸರು ದೂರು ದಾಖಲಿಸಿದ್ದಾರೆ. ಈ ವಿಚಾರದಲ್ಲಿ ಇಂಥ ಪ್ರಕರಣವೊಂದು ದಾಖಲಾಗಿರುವುದು ಮಾಲಿವುಡ್ ಸಿನಿಮಾರಂಗದಲ್ಲಿ ಇದೇ ಮೊದಲು.
ಅಕ್ಟೋಬರ್ 13 ರಂದು ರಿಲೀಸ್ ಆದ ʼರಾಹೆಲ್ ಮಕಲ್ʼ ಸಿನಿಮಾದ ನಿರ್ದೇಶಕ ಉಬೈನಿ ಇ ಅವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕೇರಳ ಪೊಲೀಸ್ ಕಾಯಿದೆಯ ಸೆಕ್ಷನ್ 385 (ಸುಲಿಗೆ) ಮತ್ತು ಸೆಕ್ಷನ್ 120 (ಒ) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಉದ್ದೇಶಪೂರ್ವಕವಾಗಿ ನನ್ನ ಸಿನಿಮಾದ ವಿರುದ್ಧ ಬ್ಲ್ಯಾಕ್ ಮೇಲ್ ಹಾಗೂ ಸುಲಿಗೆ ಮಾಡುವುದಕ್ಕಾಗಿ ನಕಾರಾತ್ಮಕ ವಿಮರ್ಶೆ ಹಾಗೂ ಅಭಿಪ್ರಾಯವನ್ನು ಹರಿದು ಬಿಡಲಾಗಿದೆ ಎಂದು ನಿರ್ದೇಶಕ ಉಬೈನಿ ಇ ಅವರು ಫೇಸ್ ಬುಕ್, ಯೂಟ್ಯೂಬ್ ಹಾಘೂ ವ್ಲಾಗರ್ ಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಸಿನಿಮಾ ಪ್ರಚಾರ ಸಂಸ್ಥೆಯ ಮಾಲೀಕ ಹೈನ್ಸ್, ಸಾಮಾಜಿಕ ಮಾಧ್ಯಮ ವಿಮರ್ಶಕರಾದ ಅರುಣ್ ತರಂಗ, ಅಸ್ವಂತ್ ಕೋಕ್, ಫೇಸ್‌ಬುಕ್ ಖಾತೆ ಬಳಕೆದಾರ ಅನೂಪನು6165, ಸೋಷಿಯಲ್ ಮೀಡಿಯಾ ಹ್ಯಾಂಡಲ್ ಸೋಲ್‌ಮೇಟ್ಸ್55 ಮತ್ತು ಪ್ಲಾಟ್‌ಫಾರ್ಮ್‌ಗಳಾದ ಯೂಟ್ಯೂಬ್ ಮತ್ತು ಫೇಸ್‌ಬುಕ್ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ.
ಇತ್ತೀಚೆಗಷ್ಟೇ ʼ ಅರೋಮಾಲಿಂತೆ ಆದ್ಯತೇ ಪ್ರಾಣಾಯಾಮ್ʼ ಸಿನಿಮಾದ ನಿರ್ದೇಶಕ ಮುಬೀನ್ ರೌಫ್ ಅವರು ಸಿನಿಮಾದ ವಿಮರ್ಶೆಯನ್ನು ವ್ಲಾಗರ್ ಹಾಗೂ ವಿಮರ್ಶಕರು ಒಂದು ವಾರದವರೆಗೂ ಪ್ರಕಟಿಸದಂತೆ ನಿರ್ದೇಶನ ನೀಡುವಂತೆ ಕೇರಳ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಇದೇ ಸಮಯದಲ್ಲಿ ಸಿನಿಮಾದ ಬಗ್ಗೆ ನೆಗೆಟಿವ್ ರಿವ್ಯೂ ಕೊಟ್ಟವರ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ.
ʼರಾಹೆಲ್ ಮಕನ್ ಕೋರಾʼ ಕಾಮಿಡಿ ಡ್ರಾಮಾವಾಗಿದ್ದು,ಇದರಲ್ಲಿ ಅನ್ಸನ್ ಪಾಲ್ ಮತ್ತು ಮೆರಿನ್ ಫಿಲಿಪ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಅಲ್ತಾಫ್ ಸಲೀಂ, ವಿಜಯಕುಮಾರ್, ಸ್ಮಿನು ಸಿಜೋ ಮುಂತಾದವರು ನಟಿಸಿದ್ದಾರೆ.