Advertisement
ಕಬಿನಿ ಮತ್ತು ತಾರಕ ಜಲಾಶಯ ಭರ್ತಿಯಾದ ಮರುದಿನವೇ ನುಗು ಮತ್ತು ಹೆಬ್ಬಳ್ಳ ಜಲಾಶಯಗಳು ಕೂಡ ಭರ್ತಿಯಾಗಿವೆ. ನುಗು ಜಲಾಶಯದಲ್ಲಿ ಸಂಗ್ರಹ ಮಟ್ಟ ಕಾಯ್ದುಕೊಂಡು ಡ್ಯಾಂನ ಸುರಕ್ಷತೆ ದೃಷ್ಟಿಯಿಂದ 10 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.
Related Articles
Advertisement
ಕ್ರಸ್ಟ್‌ಗೇಟ್‌ನಲ್ಲಿ ದೋಷ: ಕಬಿನಿಯಿಂದ 1.50 ಲಕ್ಷ ಕ್ಯೂಸೆಕ್‌ಗೂ ಅಧಿಕ ಪ್ರಮಾಣದ ನೀರನ್ನು ಹೊರಬಿಡುತ್ತಿದ್ದು, ಜಲಾಶಯ ಹೊಂದಿರುವ 4 ಕ್ರಸ್ಟ್‌ಗೇಟ್‌ಗಳಲ್ಲಿ ಮೊದಲ ಗೇಟ್‌ನ ಕಬ್ಬಿಣದ ವೈರ್ ತುಂಡಾಗಿ ಗೇಟ್ ದುರಸ್ತಿಯಾಗದ ಕಾರಣ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು.
ತಾರಕ ಡ್ಯಾಂನಿಂದ ನೀರು: ನಾರಹೊಳೆ ಹಾಗೂ ಸಾರಥಿಹೊಳೆ ಮತ್ತು ಕುಟ್ಟ ಅರಣ್ಯ ವಲಯದ ಕೊಡಗು ಭಾಗ ಸೇರಿದಂತೆ ತಾರಕ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಗರಿಷ್ಠ ಸಂಗ್ರಹ ಮಟ್ಟ 2425 (3.947 ಟಿಎಂಸಿ) ಅಡಿಗಳಷ್ಟಿದ್ದು, 5 ಅಡಿಗಳಷ್ಟು ಕಾಯ್ದುಕೊಂಡು ಒಳ ಹರಿದು ಬರುತ್ತಿರುವ 15 ಸಾವಿರಕ್ಕೂ ಹೆಚ್ಚು ಕ್ಯೂಸೆಕ್‌ಗೂ ಹೆಚ್ಚಿನ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಜಲಾಶಯದ ಮುಂಭಾಗದ ಸೇತುವೆ ಸೇರಿ ಎಚ್.ಡಿ.ಕೋಟೆ ಪಟ್ಟಣ ಹಾಗೂ ಆಲತಾಳಹುಂಡಿ, ಹೆಗ್ಗಡಾಪುರ, ಮೈಸೂರು ಮಾನಂದವಾಡಿ ರಸ್ತೆಯ ಎಚ್.ಮಟಕೆರೆ ಬಳಿಯ ದೊಡ್ಡ ಸೇತುವೆ ಮುಳುಗಡೆಯಾಗಿರುವುದರಿಂದ ಮೈಸೂರು ನಗರ, ಎಚ್.ಡಿ.ಕೋಟೆ ಸರಗೂರು ಪಟ್ಟಣ ಸೇರಿ ನೂರಾರು ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಮಳೆಯ ರುದ್ರ ನರ್ತನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ.
ನಗು ಜಲಾಶಯ ಭರ್ತಿ: ಕೇರಳದ ಮೂಲೆಹೊಳೆ ಮತ್ತು ಮುತ್ತಯ್ಯನ ಕೆರೆ ಹಾಗೂ ಬೆಲದಕುಪ್ಪೆ, ಕಲ್ಕರೆ ವನ್ಯಜೀವಿ ವಲಯದ ವ್ಯಾಪ್ತಿ ಪ್ರದೇಶದಲ್ಲಿ ಮುಂಗಾರು ಮಳೆ ಆರ್ಭಟಿಸಿದ್ದರಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು ಜಲಾಶಯ ಭರ್ತಿಯಾಗಿದೆ.
ಗರಿಷ್ಟ ಮಟ್ಟ 110 (4.2 ಟಿಎಂಸಿ) ಅಡಿಗಳಷ್ಟು ಸಂಗ್ರಹ ಸಾಮರ್ಥ್ಯವಿರುವ ನುಗು ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್‌ಗೂ ಹೆಚ್ಚು ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ಸುರಕ್ಷತೆ ದೃಷ್ಟಿಯಿಂದ 9 ಅಡಿಗಳಷ್ಟು ಅಂತರ ಕಾಯ್ದುಕೊಂಡು ಮುಂಭಾಗದ ನದಿಗೆ 10 ಸಾವಿರ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ ಎಂದು ಜಲಾಶಯದ ಕಿರಿಯ ಇಂಜಿನಿಯರ್ ಶ್ರೀಪತಿ ‘ಉದಯವಾಣಿ’ಗೆ ತಿಳಿಸಿದ್ದಾರೆ.
ಡೀಸಿ, ಎಸ್‌ಪಿ ಭೇಟಿ: ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಎಲ್ಲಾ ಜಲಾಶಯ, ಪರಿಹಾರ ಕೇಂದ್ರ, ಮಳೆಹಾನಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಬ್ಬಳ್ಳ ಜಲಾಶಯ ಭರ್ತಿ: 2311(1.42.ಟಿಎಂಸಿ) ಗರಿಷ್ಠ ಸಾಮರ್ಥ್ಯದ ಹೆಬ್ಬಳ ಜಲಾಶಯ ಕೂಡ ಭರ್ತಿಯಾಗಿದ್ದು, ಕೋಡಿ ಬಿದ್ದಿರುವುದರಿಂದ ಹೆಚ್ಚಿನ ನೀರು ಕೊಲ್ಲಿಗಳ ಮೂಲಕ ಹರಿದು ಮಟಕೆರೆ ಸಮೀಪದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಸಂಗಮವಾಗಿ ಕಬಿನಿ ನದಿ ಸೇರುತ್ತಿದೆ. ಹೆಬ್ಬಳ್ಳ ಜಲಾಶಯ ತುಂಬಿ ಕೋಡಿ ಬಿದ್ದರುವುದರಿಂದ ಎಚ್.ಮಟಕೆರೆ ಗ್ರಾಮದ ಸಮೀಪ ಮೈಸೂರು ಮಾನಂದವಾಡಿ ರಸ್ತೆಗೆ ಅಡ್ಡಲಾಗಿ ನಿರ್ಮಾಣವಾಗಿರುವ ತಾರಕ ಸೇತುವೆ ಮುಳುಗಡೆಯಾಗಿ ರಸ್ತೆ ತುಂಬಾ ನೀರು ಹರಿಯುತ್ತಿರುವುದರಿಂದ ಶುಕ್ರವಾರ ಬೆಳಿಗ್ಗೆಯಿಂದಲೇ ರಸ್ತೆ ಸಂಚಾರ ಸಂಪೂರ್ಣ ಕಡಿತಗೊಂಡಿರುವುದರಿಂದ ಪ್ರಯಾಣಿಕರ ಪಾಡು ಹೇಳತೀರದಾಗಿದೆ. ಒಟ್ಟಾರೆ ಕಾವೇರಿ ಕಣಿವೆಗೆ ಸೇರಿದ ತಾಲೂಕಿನ ಎಲ್ಲಾ 4 ಜಲಾಶಯಗಳು ಭರ್ತಿಯಾಗಿರುವುದರಿಂದ ರೈತಲ್ಲಿ ಹರ್ಷ ಮನೆ ಮಾಡಿದ್ದರೂ ಎಲ್ಲಾ ಡ್ಯಾಂಗಳಿಂದನೀರನ್ನು ಹೊರ ಬಿಡುತ್ತಿರುವುದರಿಂದ ಆತಂಕ ಸೃಷ್ಟಿಯಾಗಿದೆ.
● ಬಿ.ನಿಂಗಣ್ಣಕೋಟೆ