Advertisement

ಕರಾವಳಿ ದಿನವಿಡೀ ಮಳೆ : ಕೇರಳದಲ್ಲಿ ಮಳೆಯಿಂದಾಗಿ ಮೂವರು ಸಾವು

01:25 AM Jun 11, 2019 | Team Udayavani |

ಮಂಗಳೂರು/ತಿರುವನಂತಪುರ: ರಾಜ್ಯದ ಕರಾವಳಿ ಪ್ರದೇಶಕ್ಕೆ ಸೋಮವಾರ ಮುಂಗಾರು ಪ್ರವೇಶವಾದ ಸೂಚನೆ ಸಿಕ್ಕಿದೆ. ಅದಕ್ಕೆ ಪೂರಕವಾಗಿ ಕರಾವಳಿಯಾದ್ಯಂತ ದಿನವಿಡೀ ಮೋಡಕವಿದ ವಾತಾವರಣವಿದ್ದು, ನಿರಂತರ ಲಘು ಮಳೆಯಾಗಿದೆ.

Advertisement

ಬೆಳಗ್ಗೆ ಮೋಡ ಕವಿದ ವಾತಾವರಣವಿದ್ದು, 10 ಗಂಟೆ ಸುಮಾರಿಗೆ ಕರಾವಳಿಯ ಹೆಚ್ಚಿನೆಡೆ ಲಘು ಮಳೆ ಆರಂಭಗೊಂಡಿತು. ಅನಂತರ ನಿರಂತರ ಮಳೆ ಸುರಿಯಿತು. ಕೆಲವು ಪ್ರದೇಶಗಳಲ್ಲಿ ರಭಸವಾಗಿ ಗಾಳಿ ಬೀಸುತ್ತಿತ್ತು. ಉಳ್ಳಾಲ ಸಮೀಪ ಕಡಲ್ಕೊರೆತ ತೀವ್ರಗೊಂಡಿದ್ದು, ತಡೆಗೋಡೆ ದಾಟಿ ನೀರು ಮುನ್ನುಗ್ಗುತ್ತಿದೆ.

ಭಾರೀ ಮಳೆ ಸಂಭವ
ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತವು ಚಂಡಮಾರುತವಾಗಿ ಬದಲಾಗುವ ಕಾರಣ ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕ ಕರಾವಳಿ ಮತ್ತು ಗುಜರಾತ್‌ ಕರಾವಳಿಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾವಾನ ಇಲಾಖೆ ತಿಳಿಸಿದೆ. ಇದೇ ವೇಳೆ ಚಂಡಮಾರುತ ಕರ್ನಾಟಕ ಕರಾವಳಿಯಿಂದ 500-600 ಕಿ.ಮೀ. ದೂರದಿಂದ ಹಾದು ಹೋಗಲಿರುವುದರಿಂದ ಈ ಭಾಗದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಕರ್ನಾಟಕ ಕರಾವಳಿಯಲ್ಲಿ 60-80 ಕಿ.ಮೀ. ವೇಗದಲ್ಲಿ ಗಾಳಿ ಬೀಸುವುದರಿಂದ ಸಮುದ್ರದ ಅಬ್ಬರ ಜೋರಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗದಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ| ಜಿ. ಎಸ್‌. ಶ್ರೀನಿವಾಸ್‌ ರೆಡ್ಡಿ ತಿಳಿಸಿದ್ದಾರೆ.

ಕೇರಳದಲ್ಲಿ ಮುಂಗಾರು ಚುರುಕು
ಕೇರಳದ ವಿವಿಧ ಭಾಗಗಳಲ್ಲಿ ಮುಂಗಾರು ಚುರುಕಾ ಗಿದ್ದು, ಧಾರಾಕಾರ ಮಳೆಯಾಗುತ್ತಿದೆ. ಮಳೆ ಸಂಬಂಧಿ ಘಟನೆಗಳಲ್ಲಿ ಮೂರು ಮಂದಿ ಸಾವಿಗೀಡಾಗಿದ್ದಾರೆ. ಕೊಚ್ಚಿಯಲ್ಲಿ ನೀರು ತುಂಬಿದ ರಸ್ತೆ ಮೇಲೆ ವಿದ್ಯುತ್‌ ತಂತಿ ಬಿದ್ದು, ವಿದ್ಯುತಾಘಾತದಿಂದ ಮಹಿಳೆ ಸಹಿತ ಇಬ್ಬರು ಮೃತಪಟ್ಟರೆ, ಮತ್ತೂಂದು ಘಟನೆಯಲ್ಲಿ ಮರವೊಂದು ಧರೆಗುರುಳಿದ ಪರಿಣಾಮ ಒಬ್ಬ ವ್ಯಕ್ತಿ ಸಾವಿಗೀಡಾಗಿ, ಇಬ್ಬರು ಗಾಯಗೊಂಡಿದ್ದಾರೆ.

ಸಿಡಿಲು ಬಡಿದು ಇಬ್ಬರು ಸಾವು
ಲಿಂಗಸುಗೂರು/ತೀರ್ಥಹಳ್ಳಿ: ಪ್ರತ್ಯೇಕ ಪ್ರಕರಣದಲ್ಲಿ ಸಿಡಿಲು ಬಡಿದು ಇಬ್ಬರು ಮೃತಪಟ್ಟಿದ್ದಾರೆ.

Advertisement

ಲಿಂಗಸುಗೂರು ತಾಲೂಕಿನ ಗುರುಗುಂಟಾ ಗ್ರಾಮದಲ್ಲಿ ಸಿಡಿಲು ಬಡಿದು ಕುರಿಗಾಹಿ ಸೋಮಣ್ಣ ಆದಪ್ಪ (28) ಮೃತಪಟ್ಟಿದ್ದಾನೆ. ಗ್ರಾಮದ ಹೊಲವೊಂದರಲ್ಲಿ ಕುರಿಹಟ್ಟಿಯಲ್ಲಿ ಮಲಗಿದ್ದಾಗ ರವಿವಾರ ರಾತ್ರಿ 9.30ರ ಸುಮಾರಿಗೆ ಸಿಡಿಲು ಬಡಿದಿದೆ.

ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಸಮೀಪದ ಯೋಗಿಮಳಲಿಯಲ್ಲಿ ರವಿವಾರ ಸಿಡಿಲು ಬಡಿದು ರೈತ ವೆಂಕಟೇಶ್‌ (58) ಸಾವನ್ನಪ್ಪಿದ್ದಾರೆ. ಶುಂಠಿ ಬಿತ್ತನೆ ಮಾಡಲು ಗದ್ದೆಗೆ ತೆರಳಿದ್ದ ಇವರು ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾಗಲೇ ಸಿಡಿಲು ಬಡಿದು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲು ಕರೆತರುವಾಗ ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next