ಕಾಸರಗೋಡು: ಭಾಷಾ ಅಲ್ಪಸಂಖ್ಯಾಕರಿಗೆ ಉದ್ಯೋಗ ಖಚಿತಪಡಿಸಲು ಕೇರಳ ಲೋಕಸೇವಾ ಆಯೋಗ (ಪಿಎಸ್‌ಸಿ) ಏಳು ವರ್ಷಗಳ ಹಿಂದೆ ಸಿದ್ಧಪಡಿಸಿದ್ದ ತಾತ್ಕಾಲಿಕ ಯಾದಿಯಲ್ಲಿ ವಂಚನೆ ನಡೆದಿದೆ ಎಂದು ಉದ್ಯೋಗಾರ್ಥಿಗಳು ಆರೋಪಿಸಿದ್ದಾರೆ.
2016ರಲ್ಲಿ ಕನ್ನಡ-ಮಲೆಯಾಳ ಬಲ್ಲ ಎಲ್‌ಡಿಸಿ ಹುದ್ದೆಗೆ ಪಿಎಸ್‌ಸಿ ಅರ್ಜಿ ಆಹ್ವಾನಿಸಿತ್ತು. 2021ರಲ್ಲಿ ತಾತ್ಕಾಲಿಕ ಪಟ್ಟಿ ಪ್ರಕಟಿಸಿದೆ. ಏಳು ವರ್ಷಗಳಿಂದ ರ್‍ಯಾಂಕ್ ಪಟ್ಟಿಗಾಗಿ ಕಾಯುತ್ತಿದ್ದ ಉದ್ಯೋಗಾರ್ಥಿಗಳಿಗೆ ವಂಚನೆ ಆಗಿರುವ ವಿಚಾರ ಈಗ ಅರಿವಿಗೆ ಬಂದಿದೆ. 2021ರಲ್ಲಿ ತಯಾರಿಸಿದ 98 ಮಂದಿಯ ಪಟ್ಟಿಯಿಂದ 37 ಮಂದಿಯನ್ನು ಹೊರತುಪಡಿಸಿ ಇತರ 52 ಮಂದಿಯನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಉದ್ಯೋಗಾರ್ಥಿಗಳು ಆರೋಪಿಸಿದ್ದಾರೆ.
2021ರ ಪಟ್ಟಿಯಲ್ಲಿ ಸ್ಥಾನ ಪಡೆದವರು ಬಳಿಕ ಪಟ್ಟಿಯಿಂದ ಹೇಗೆ ಹೊರಗಾದರೆಂದೂ? ಹೊಸದಾಗಿ ಹೆಚ್ಚು ಮಂದಿ ಪಟ್ಟಿಗೆ ಸೇರ್ಪಡೆಯಾಗಿರುವುದು ಹೇಗೆ? ಎಂದು ಉದ್ಯೋಗಾರ್ಥಿಗಳು ಪ್ರಶ್ನಿಸಿದ್ದಾರೆ.