ಪಾಲಕ್ಕಾಡ್: ಕೇರಳದ ಹಲವು ಕಡೆಗಳಲ್ಲಿ ಕಾಡಾನೆಗಳ ಹಾವಳಿ ಜೋರಾಗಿದ್ದು ಇದೀಗ ಕಾಡಾನೆ ದಾಳಿಯಿಂದ ಸುದ್ದಿ ವಾಹಿನಿಯ ಕ್ಯಾಮೆರಾಮೆನ್ ಒಬ್ಬರು ಮೃತಪಟ್ಟ ಘಟನೆ ಕೇರಳದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಎ.ವಿ.ಮುಕೇಶ್ (34) ಎನ್ನಲಾಗಿದ್ದು ಮುಕೇಶ್ ಕೇರಳದ ಮಾತೃಭೂಮಿ ಸುದ್ದಿವಾಹಿನಿಯ ಕ್ಯಾಮೆರಾ ಮೆನ್ ಆಗಿದ್ದಾರೆ.
ಪಾಲಕ್ಕಾಡ್‌ನ ಕೊಟ್ಟೇಕಾಡ್‌ನಲ್ಲಿ ಕಾಡಾನೆಗಳ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಈ ಸ್ಥಳವು ಕಾಡು ಪ್ರಾಣಿಗಳ ದಾಳಿಗೆ ಹೆಸರುವಾಸಿಯಾಗಿದೆ.
ಮಾತೃಭೂಮಿ ನ್ಯೂಸ್‌ನಲ್ಲಿ ಕೆಲಸ ನಿರ್ವಹಿಸುತ್ತಿರುವ ಎವಿ ಮುಖೇಶ್ ಅವರು ವರದಿಗಾರರ ಜೊತೆ ಕೊಟ್ಟೇಕಾಡ್ ನಲ್ಲಿ ಕಾಡಾನೆ ಹಿಂಡಿನ ಚಲನವಲನದ ದೃಶ್ಯಗಳನ್ನು ಸೆರೆಹಿಡಿಯುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ ಕೂಡಲೇ ಮುಕೇಶ್ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಆದರೆ ದುರದೃಷ್ಟವಶಾತ್ ಆಯತಪ್ಪಿ ಬಿದ್ದಿದ್ದಾರೆ ಈ ವೇಳೆ ಆನೆ ಮುಕೇಶ್ ಮೇಲೆ ದಾಳಿ ನಡೆಸಿ ಗಂಭೀರವಾಗಿ ಘಾಸಿಗೊಳಿಸಿದೆ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಕಾಡಾನೆ ದಾಳಿ ನಡೆಸಿದ ವೇಳೆ ಮುಕೇಶ್ ಜೊತೆಗಿದ್ದ ವರದಿಗಾರ ಹಾಗೂ ಚಾಲಕ ಆನೆ ದಾಳಿಯಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಮುಕೇಶ್ ಮಲಪ್ಪುರಂನ ಪರಪ್ಪನಂಗಡಿ ಚೆಟ್ಟಿಪಾಡಿ ನಿವಾಸಿಗಳಾದ ಉನ್ನಿ ಮತ್ತು ದೇವಿ ದಂಪತಿಯ ಪುತ್ರನಾಗಿದ್ದಾನೆ. ಮುಕೇಶ್ ಪತ್ನಿ ತಿಶಾ ಅವರನ್ನು ಅಗಲಿದ್ದಾರೆ.
ಸದ್ಯ ಮುಕೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಇರಿಸಲಾಗಿದೆ.
ದೆಹಲಿ ಬ್ಯೂರೋದಲ್ಲಿ ಬಹಳ ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದ ಮುಕೇಶ್ ಕಳೆದ ವರ್ಷ ಪಾಲಕ್ಕಾಡ್ ಬ್ಯೂರೋಗೆ ವರ್ಗ ಹೊಂದಿದ್ದರು.
ಇದನ್ನೂ ಓದಿ:Politics: ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್