ಕಾಸರಗೋಡು: ಮಂಗಳೂರು-ಕೊಚ್ಚುವೇಲಿ ಅಂತ್ಯೋದಯ ಎಕ್ಸ್‌ಪ್ರೆಸ್ ರೈಲುಗಾಡಿಗೆ ಕಾಸರಗೋಡಿನಲ್ಲಿ ನಿಲುಗಡೆ ನೀಡದೆ ಇರುವ ರೈಲು ಇಲಾಖೆಯ ನಿಲುವಿನ ವಿರುದ್ಧ ಕಾಸರಗೋಡಿನಲ್ಲಿ ತಲೆಯೆತ್ತಿರುವ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ.
ಇದರಂತೆ ಮುಸ್ಲಿಂ ಲೀಗ್ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಕಾಸರಗೋಡು ರೈಲು ನಿಲ್ದಾಣದಲ್ಲಿ ಅಂತ್ಯೋದಯ ಎಕ್ಸ್ ಪ್ರಸ್ ರೈಲುಗಾಡಿಯನ್ನು ದಿಢೀರ್ ಆಗಿ ತಡೆಯಲಾಗಿದೆ. ಈ ರೈಲು ಶುಕ್ರವಾರ ಬೆಳಗ್ಗೆ ಮಂಗಳೂರಿನತ್ತ ಸಾಗುತ್ತಿದ್ದ ವೇಳೆ ಕಾಸರಗೋಡು ರೈಲು ನಿಲ್ದಾಣಕ್ಕೆ ತಲುಪಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕುನ್ನು ಅಪಾಯ ಸೂಚಕ ಚೈನ್ ಎಳೆದಿದ್ದಾರೆ.
ತತ್‌ಕ್ಷಣ ರೈಲು ನಿಂತಿದ್ದು ಆ ವೇಳೆ ಮುಸ್ಲಿಂ ಲೀಗ್ ಮತ್ತು ಯೂತ್ ಲೀಗ್ ನೇತಾರರಾದ ಶಾಸಕ ಪಿ.ಬಿ. ಅಬ್ದುಲ್ ರಝಾಕ್, ನಗರಸಭಾಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ಎ.ಅಹಮ್ಮದ್ ಹಾಜಿ, ಮೂಸಾ ಬಿ.ಚೆರ್ಕಳ, ಮಾಹಿನ್ ಕೇಳ್ಳೋಟ್, ಎ.ಅಬ್ದುಲ್ ರಹಿಮಾನ್, ಎ.ಎಂ. ಕಡವತ್, ಅಬ್ದುಲ್ಲ ಕುಂಞಿ ಚೆರ್ಕಳ, ಅಶ್ರಫ್ ಎಡನೀರು, ಟಿ.ಡಿ. ಕಬೀರ್ ಮೊದಲಾದವರ ನೇತೃತ್ವದಲ್ಲಿ ಕಾರ್ಯ ಕರ್ತರು ರೈಲನ್ನು ಅರ್ಧ ಗಂಟೆ ಕಾಲ ತಡೆದು ನಿಲ್ಲಿಸಿದರು.
ಹಗಲು ಪ್ರಯಾಣಿಕರ ಸೌಕರ್ಯಾರ್ಥ ಅಂತ್ಯೋದಯ ಎಕ್ಸ್ ಪ್ರಸ್ ರೈಲು ಗಾಡಿಯನ್ನು ಮಂಜೂರು ಮಾಡಲಾಗಿದೆ.
ಆದರೆ ಕಣ್ಣೂರು ಬಳಿಕ ಈ ರೈಲಿಗೆ ಮಂಗಳೂರಿನಲ್ಲಿ ಮಾತ್ರವೇ ನಿಲುಗಡೆ ನೀಡಲಾಗಿದೆ. ಜಿಲ್ಲಾ ಕೇಂದ್ರವಾದ ಕಾಸರಗೋಡಿನಲ್ಲಿ ನಿಲುಗಡೆ ನೀಡಬೇಕಾಗಿದ್ದರೂ ಅದನ್ನು ಅವಗಣಿಸಲಾಗಿದೆ. ಇದು ರೈಲು ಇಲಾಖೆ ಕಾಸರಗೋಡಿನ ಬಗ್ಗೆ ತೋರುತ್ತಿರುವ ನಿರಂತರ ಅವಗಣೆಗೆ ಸ್ಪಷ್ಟ ನಿದರ್ಶನವೆಂದು ಲೀಗ್ ನೇತಾರರು ಆರೋಪಿಸಿದ್ದಾರೆ.
ಕಾಸರಗೋಡು ಅವಗಣಿಸುತ್ತಿರುವ ರೈಲ್ವೇ ಇಲಾಖೆಯ ಇಂತಹ ನೀತಿಯನ್ನು ಪ್ರತಿಭಟಿಸಿ, ಕಾಂಗ್ರೆಸ್, ಸಿಪಿಎಂ, ಬಿಜೆಪಿ ಮತ್ತು ಸಿಪಿಐ ಕೂಡಾ ಹೋರಾಟಕ್ಕಿಳಿದಿದೆ. ಇದೇ ಬೇಡಿಕೆ ಮುಂದಿರಿಸಿಕೊಂಡು ಎಐವೈಎಫ್ ನೇತೃತ್ವದಲ್ಲಿ ಈಗಾಗಲೇ ಕಾಸರಗೋಡು ರೈಲು ನಿಲ್ದಾಣಕ್ಕೆ ಜಾಥಾ ನಡೆಯಲಿದೆ. ಸಂಸದ ಪಿ. ಕರುಣಾಕರನ್ ಜು. 1ರಿಂದ ಕಾಸರಗೋಡು ರೈಲು ನಿಲ್ದಾಣದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ ಆರಂಭಿಸುವ ತೀರ್ಮಾನವನ್ನು ತೆಗೆದು ಕೊಂಡಿದ್ದಾರೆ. ಇತರ ಹಲವು ಸಂಘಟನೆಗಳೂ ಇದೇ ಬೇಡಿಕೆಯನ್ನು ಮುಂದಿರಿಸಿ ಚಳವಳಿ ಆರಂಭಿಸಿವೆ.