Advertisement
ಹೌದು, ಇದು ಹೊಸ ವಿಧದ ಕೃತಕ ಬುದ್ಧಿಮತ್ತೆಯ ಮೋಸ. ಎಐ ಆಧರಿತವಾಗಿ “ಫೇಕ್ ಫೇಸ್’ ಮುಂದಿಟ್ಟುಕೊಂಡು ಮೋಸ ಮಾಡುವ ಜಾಲವೊಂದು ಬಂದಿದೆ. ಈ ಮೋಸಕ್ಕೆ ಕೇರಳದ ವ್ಯಕ್ತಿಯೊಬ್ಬರು ಬಲಿಯಾಗಿದ್ದು, 40 ಸಾವಿರ ರೂ. ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಇದೊಂದು ವಾಟ್ಸ್ ಆ್ಯಪ್ ವಂಚನೆಯಾಗಿದೆ.
ಕೇರಳದ ರಾಧಾಕೃಷ್ಣನ್ ಎಂಬ ವ್ಯಕ್ತಿಯೊಬ್ಬರು ವಾಟ್ಸ್‌ಆ್ಯಪ್ ಮೂಲಕ ಅಪರಿಚಿತ ನಂಬರಿನಿಂದ ವಿಡಿಯೋ ಕರೆ ಸ್ವೀಕರಿಸಿದ್ದರು. ಅದರಲ್ಲಿ ಹಳೇ ಸಹೋದ್ಯೋಗಿಯ ರೂಪದಲ್ಲಿನ ವ್ಯಕ್ತಿಯೊಬ್ಬರು ಮಾತನಾಡಿದ್ದರು. ಅಲ್ಲದೆ, ನಂಬಿಕೆ ಬರಲಿ ಎಂಬ ಉದ್ದೇಶದಿಂದ, ಜತೆಯಲ್ಲಿ ಕೆಲಸ ಮಾಡಿದ್ದ ಕೆಲವರ ಹೆಸರುಗಳನ್ನೂ ಹೇಳಿದ್ದರು. ಕೆಲಹೊತ್ತು ಮಾತನಾಡಿ ವಿಶ್ವಾಸ ಗಳಿಸಿದ ಮೇಲೆ, ತಮ್ಮ ಸಂಬಂಧಿಯೊಬ್ಬರು ಆಸ್ಪತ್ರೆಯಲ್ಲಿದ್ದಾರೆ. ತುರ್ತಾಗಿ 40 ಸಾವಿರ ಹಣ ಬೇಕಾಗಿದೆ ಎಂದು ಕೇಳಿದ್ದರು. ಇದಕ್ಕೆ ಸ್ಪಂದಿಸಿದ್ದ ರಾಧಾಕೃಷ್ಣನ್ ತಕ್ಷಣವೇ 40 ಸಾವಿರ ರೂ. ಕಳಿಸಿದ್ದರು. ಇದಾದ ಸ್ವಲ್ಪಹೊತ್ತಿನಲ್ಲೇ ಮತ್ತೆ ಕರೆ ಮಾಡಿದ್ದ ಅದೇ ವ್ಯಕ್ತಿ, ಹಣ ಕಡಿಮೆಯಾಗಿದೆ, ಮತ್ತೆ 35 ಸಾವಿರ ಬೇಕು ಎಂದು ಕೇಳಿದ್ದ. ತಕ್ಷಣವೇ ಅನುಮಾನಗೊಂಡ ರಾಧಾಕೃಷ್ಣನ್, ತಮ್ಮ ಹಳೆಯ ಸಹೋದ್ಯೋಗಿಗಳನ್ನು ಸಂಪರ್ಕಿಸಿ, ಈತನ ಬಗ್ಗೆ ವಿಚಾರಿಸಿದ್ದರು. ಆಗ ತಮಗೆ ಬಂದಿದ್ದ ಕರೆ ಸಹಜವಲ್ಲ, ಮೋಸದ್ದು ಎಂಬುದು ರಾಧಾಕೃಷ್ಣನ್‌ಗೆ ಗೊತ್ತಾಗಿತ್ತು. ಬಳಿಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಎಐ-ಡೀಪ್‌ಫೇಕ್ ಸ್ಕ್ಯಾಮ್ ಬಗ್ಗೆ ಗೊತ್ತಾಗಿತ್ತು.
Related Articles
ಸಾಮಾಜಿಕ ಜಾಲತಾಣದ ಒಂದು ಪ್ರೊಫೈಲ್ ಪಿಕ್ಟರ್ ಇದ್ದರೆ ಸಾಕು, ಈ ಎಐ ಫೇಕ್ ಫೇಸ್ ಸ್ಕ್ಯಾಮ್ ಮಾಡಬಹುದು. ಕೇರಳ ಸೈಬರ್ ಪೊಲೀಸರ ಪ್ರಕಾರ, ಈ ಘಟನೆಯಲ್ಲಿ ನಡೆದಿರುವುದು ಅದೇ. ವಂಚಕರು ವ್ಯಕ್ತಿಯೊಬ್ಬರ ಫೋಟೋವನ್ನು ತೆಗೆದುಕೊಂಡು, ಎಐ ಮೂಲಕ ಇದನ್ನು ಮಾತನಾಡುವ ವಿಡಿಯೋವನ್ನಾಗಿ ಪರಿವರ್ತಿಸುತ್ತಾರೆ. ಇದಕ್ಕೆ ಡೀಪ್ ಫೇಕ್ ಟೆಕ್ನಾಲಜಿಯನ್ನು ಬಳಕೆ ಮಾಡುತ್ತಾರೆ. ಈ ಡೀಪ್ ಫೇಕ್ ಟೆಕ್ನಾಲಜಿಯು ಫೋಟೋವನ್ನು ವಿಡಿಯೋ ರೂಪ ಮಾಡುವುದಲ್ಲದೇ, ಬೇಕಾದ ಹಾಗೆ ಧ್ವನಿ ಕೊಟ್ಟುಕೊಳ್ಳಬಹುದು. ಜತೆಗೆ, ಟಾರ್ಗೆಟ್ ಮಾಡಿದ ವ್ಯಕ್ತಿಯು ನಂಬುವ ರೀತಿಯಲ್ಲೇ ವಿಡಿಯೋವನ್ನು ಮಾಡಿರುತ್ತಾರೆ. ಅಲ್ಲದೆ, ಇತರರ ಮಾಹಿತಿಯನ್ನು ಸಾಮಾಜಿಕ ಜಾಲತಾಣದ ಸ್ನೇಹಿತರ ಪಟ್ಟಿಯಿಂದ ತೆಗೆದುಕೊಳ್ಳುತ್ತಾರೆ.
Advertisement
ಪಾರಾಗುವುದು ಹೇಗೆ?
– ಅಪರಿಚಿತ ಕರೆಯಿಂದ ವಿಡಿಯೋ ಕರೆ ಬಂದಾಗ ಎಚ್ಚರಿಕೆ ಇರಬೇಕು.
– ಯಾರಾದರು ಒಬ್ಬರು ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ಎಂದಾಗ, ತೀರಾ ಖಾಸಗಿ ಪ್ರಶ್ನೆಯನ್ನು ಕೇಳಿ.
– ಅವರಿಗೆ ಉತ್ತರ ಗೊತ್ತಿಲ್ಲ ಎಂದಾದ ಆ ಕರೆ ವಂಚಕರದ್ದು ಎಂಬುದನ್ನು ತಿಳಿದುಕೊಳ್ಳಿ.
– ಒಂದು ವೇಳೆ ನಿಮಗೆ ಬಂದಿರುವುದು ಮೋಸದ ಕರೆ ಎಂದು ಗೊತ್ತಾದ ಕೂಡಲೇ ಕರೆ ಕಡಿತಗೊಳಿಸಿ
ಗುರುತಿಸುವುದು ಹೇಗೆ?
– ನಿಮಗೆ ಕರೆ ಮಾಡಿದವರ ಧ್ವನಿ ನೈಜತೆಯೊಳಗೊಂಡಿರುವುದಿಲ್ಲ.
– ನಿಮ್ಮ ಕುರಿತಾದ ಕೆಲವೊಂದು ವೈಯಕ್ತಿಕ ಪ್ರಶ್ನೆ ಕೇಳಬಹುದು.
– ತೀರಾ ಅನಿರೀಕ್ಷಿತವಾಗಿ ನಿಮ್ಮ ಕಡೆಯಿಂದ ಸಹಾಯಯಾಚಿಸಬಹುದು.