ಸಂಕಷ್ಟದ ಸಮಯದಲ್ಲಿ ಯಾರು ಯಾವ ರೀತಿ ಸಹಾಯಕ್ಕೆ ಬರುತ್ತಾರೆಂದು ಊಹಿಸಲೂ ಸಾಧ್ಯವಾಗುವುದಿಲ್ಲ. ಕೋವಿಡ್ ವೈರಸ್ ಹಾಗೂ ಲಾಕ್ ಡೌನ್‌ನ ಈ ಸಂದರ್ಭದಲ್ಲಿ ಮನೆಯೊಳಗೇ ಬಂದಿಯಾಗಿರುವ ಅನೇಕರಲ್ಲಿ ಮಾನಸಿಕ ಖನ್ನತೆ ಹಾಗೂ ಒತ್ತಡ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗಷ್ಟೇ ಮನೋರೋಗ ತಜ್ಞರು ಹೇಳಿದ್ದರು. ಈಗ ಅಂತಾರಾಷ್ಟ್ರೀಯವಾಗಿ ಖ್ಯಾತಿ ಗಳಿಸಿರುವ ಕೇರಳದ ಜಾದೂಗಾರ ಸಮಾಜ್(64) ಅವರು ಉಚಿತವಾಗಿ ಸೇವೆ ಕಲ್ಪಿಸಲು ಮುಂದೆ ಬಂದಿದ್ದಾರೆ. ರಾಜ್ಯ ಸರ್ಕಾರ ಅಥವಾ ಪೊಲೀಸರು ಒಪ್ಪಿಗೆ ಕೊಟ್ಟರೆ ನಾನು ಉಚಿತವಾಗಿ ಮ್ಯಾಜಿಕ್ ಶೋಗಳನ್ನು ಆಯೋಜಿಸುವ ಮೂಲಕ, ಜನರ ಮಾನಸಿಕ ಒತ್ತಡ ಕಡಿಮೆ ಮಾಡಿ, ಅವರು ರಿಲೀಫ್ ಆಗುವಂತೆ ಮಾಡಲು ಸಿದ್ಧ ಎಂದು ಅವರು ಹೇಳಿದ್ದಾರೆ. ಮ್ಯಾಜಿಕ್ ಎನ್ನುವುದು ಒಂದು ಮನರಂಜನೆ. ಇದು ಮನಸ್ಸಿಗೆ ಹಿತಾನುಭವ ನೀಡುವಂಥದ್ದು. ಯಾರು ಯಾವಾಗ ಹೇಳಿದರೂ ನಾನು ಬಂದು ಜಾದೂ ಮಾಡುವ ಮೂಲಕ ಮಾನಸಿಕ ಖನ್ನತೆ ತಗ್ಗಿಸುವ ಕೆಲಸದಲ್ಲಿ ನನ್ನಿಂದಾದ ಅಳಿಲುಸೇವೆ ನೀಡುತ್ತೇನೆ. ಈ ಕಷ್ಟಕಾಲದಲ್ಲಿ ಅದರ ಅಗತ್ಯತೆಯೂ ಇದೆ ಎಂದಿದ್ದಾರೆ ಸಮಾಜ್. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಸಮಾಜ್, ದೇಶ-ವಿದೇಶಗಳಲ್ಲಿ ಜಾದೂ ಕಾರ್ಯಕ್ರಮ ನಡೆಸಿ ಜನಪ್ರಿಯತೆ ಪಡೆದಿದ್ದಾರೆ.