Advertisement

ಬಂಡೀಪುರದತ್ತ ಕೇರಳ ಮಾಫಿಯಾ ಕಣ್ಣು

10:34 AM Oct 04, 2019 | mahesh |

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ರಾತ್ರಿ ವೇಳೆ ಸಂಚಾರವನ್ನು ತೆರವುಗೊಳಿಸಲು ನಾನಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿರುವ ಕೇರಳ, ಇದೀಗ ಹಗಲು ಸಂಚಾರವನ್ನೂ ಬಂದ್‌ ಮಾಡಲಾಗುತ್ತದೆ ಎಂಬ ವದಂತಿಯನ್ನು ಹರಿಬಿಟ್ಟು ಜನರನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ..

Advertisement

ಕೇರಳ ಸರ್ಕಾರ ಬಂಡೀಪುರ ಹುಲಿ ರಕ್ಷಿತ ಅರಣ್ಯದಲ್ಲಿ ರಾತ್ರಿ ಸಂಚಾರವನ್ನು ತೆರವುಗೊಳಿಸಬೇಕೆಂದು ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ. ಹಾಗಾಗಿ ಸುಪ್ರೀಂ ಕೋರ್ಟು ಕೇರಳಕ್ಕೆ “ಕರ್ನಾಟಕದಿಂದ ಮಾರ್ಗ ಯಾವುದಿದೆ?’ ಎಂದು ವಿವ ರಣೆ ಕೇಳಿದೆ. ಇದಕ್ಕೆ ಉತ್ತರಿಸಲು ನಾಲ್ಕು ವಾರಗಳ ಗಡುವು ನೀಡಿದೆ. ಈಗ ಎರಡು ವಾರದ ಗಡುವು ಮುಗಿದಿದೆ. ಇದನ್ನೇ ನೆಪವಾಗಿಟ್ಟುಕೊಂಡು ಕೇರಳ, ಬಂಡೀಪುರ ಹುಲಿ ರಕ್ಷಿತಾ ರಣ್ಯದಲ್ಲಿ ಹಗಲು ಸಂಚಾರವನ್ನೂ ನಿರ್ಬಂಧ ಗೊಳಿಸಲಾಗುತ್ತದೆ ಎಂಬ ವದಂತಿಯನ್ನು ಹರಡುತ್ತಿದೆ. ಈ ಬಗ್ಗೆ ಕೇರಳ ಗಡಿಯಲ್ಲಿ ಪ್ರತಿಭಟನೆ ಗಳನ್ನು ನಡೆಸಲಾಗುತ್ತಿದೆ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೂಡ ಕೇರಳದ ಪರವಾಗಿ ಮಾತನಾಡುತ್ತಿದ್ದಾರೆ.  ಕೇರಳದ ನಿಯೋಗ ಗುಂಡ್ಲುಪೇಟೆಗೆ ಭೇಟಿ ನೀಡಿ, ಅಲ್ಲಿನ ಶಾಸಕರನ್ನು ಭೇಟಿಯಾಗಿದೆ. ಬಂಡೀಪುರ ಅರಣ್ಯ ಕೇವಲ ಒಂದು ಅರಣ್ಯ ಮಾತ್ರವಾಗಿರದೆ, ಇಲ್ಲಿರುವ ವೈವಿಧ್ಯಮಯ ಪ್ರಾಣಿ, ಪಕ್ಷಿ, ಕೀಟ, ಮರಗಿಡಗಳಿಂದಾಗಿ ರಾಷ್ಟ್ರೀಯ ಉದ್ಯಾನವನ, ಹುಲಿ ಯೋಜನೆ, ಹುಲಿ ಸಂರಕ್ಷಿತ ಅರಣ್ಯ ಪ್ರದೇಶ, ಪರಿಸರ ಸೂಕ್ಷ್ಮ ಜೀವಿ ವಲಯವೂ ಆಗಿದೆ.

ಬಂಡೀಪುರ ಅರಣ್ಯದ ಮಧ್ಯೆಯೇ ಎರಡು ರಾಷ್ಟ್ರೀಯ ಹೆದ್ದಾರಿ ಗಳು ಹಾದು ಹೋಗುತ್ತವೆ. 766 ರಾಷ್ಟ್ರೀಯ ಹೆದ್ದಾರಿ (ಹಿಂದಿನ ಸಂಖ್ಯೆ 212) ಕೇರಳದ ಕಲ್ಲಿಕೋಟೆಗೆ ಸಂಪರ್ಕ ಕಲ್ಪಿಸು  ತ್ತದೆ. ಇನ್ನೊಂದು ರಾಷ್ಟ್ರೀಯ ಹೆದ್ದಾರಿ 67 ತಮಿಳುನಾಡಿನ ಊಟಿಗೆ ಸಂಪರ್ಕ ಕಲ್ಪಿಸುತ್ತದೆ. ಎರಡು ರಾಜ್ಯಗಳನ್ನು ಬೆಸೆಯುವ ಈ ಹೆದ್ದಾರಿಗಳು ಸ್ವಾಭಾವಿಕವಾಗಿಯೇ ವಾಹನ ದಟ್ಟಣೆ ಹೊಂದಿವೆ.

ಕೇರಳ ಮಾಫಿಯಾ ಒತ್ತಡ
ರಾತ್ರಿ ವೇಳೆ ಸಂಚಾರ ತೆರವುಗೊಳಿಸಬೇಕೆಂಬ ಕೇರಳದ ಒತ್ತಡಕ್ಕೆ ಹಲವು ಮಾಫಿಯಾಗಳ ಒತ್ತಡ ಕಾರಣ ಎಂಬುದು ಬಹಿರಂಗ ಸತ್ಯವಾಗಿದೆ. ಕೇರಳದ ಮದ್ಯದ ದಂಧೆ, ಮರಳು ದಂಧೆ, ಟಿಂಬರ್‌ ಮಾಫಿಯಾ, ಕಳ್ಳ ಸಾಗಾಣಿಕೆಗೆ ರಾತ್ರಿ ಸಮ ಯ ಪ್ರಶಸ್ತವಾಗಿದ್ದು, ಈ ಮಾಫಿಯಾಗಳು ಕೇರಳ ಸರ್ಕಾ ರದ ಜತೆ ಗೂಡಿ ರಾತ್ರಿ ಸಂಚಾರವನ್ನು ತೆರವುಗೊಳಿಸಲು ಸತತ ಯತ್ನ ನಡೆಸುತ್ತಿವೆ ಎಂದು ವನ್ಯಜೀವಿ ತಜ್ಞರು ಆರೋಪಿಸುತ್ತಾರೆ.

ರಾತ್ರಿ ಸಂಚಾರ ನಿಷೇಧವಾಗಿದ್ದೇಕೆ?
ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರದ ಸಮಯದಲ್ಲಿ ವನ್ಯಜೀವಿಗಳು ವಾಹನಗಳಿಗೆ ಸಿಲುಕಿ ಸಾವನ್ನಪ್ಪುತ್ತಿದ್ದವು. 10 ವರ್ಷಗಳ ಹಿಂದೆ ಬಂಡೀಪುರ ಅರಣ್ಯಾಧಿಕಾರಿಗಳು ಹಾಗೂ ವನ್ಯಜೀವಿ ತಜ್ಞರು, ಪರಿಸರವಾದಿಗಳು ಜಿಲ್ಲಾಡಳಿತಕ್ಕೆ ಒಂದು ಸಮೀಕ್ಷಾ ವರದಿ ನೀಡಿದ್ದರು. ಇದರ ಅಧ್ಯಯನ ನಡೆಸಿದ ಅಂದಿನ ಜಿಲ್ಲಾಧಿಕಾರಿ ಮನೋಜ್‌ಕುಮಾರ್‌ ಮೀನಾ ಅವರು 2009ರ ಜೂನ್‌ 3 ರಿಂದ ಬಂಡೀಪುರದಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಿದರು. ನಿಷೇಧದ ಬೆನ್ನಲ್ಲೇ ಕೇರಳ, ರಾತ್ರಿ ಸಂಚಾರ ನಿಷೇಧದಿಂದ ಕರ್ನಾಟಕದಿಂದ ಕೇರಳಕ್ಕೆ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಗುತ್ತದೆ. ಆದ್ದರಿಂದ ಇದನ್ನು ತೆರವುಗೊಳಿಸಬೇಕೆಂದು ಹೈಕೋರ್ಟ್‌ ಗೆ ಮನವಿ ಸಲ್ಲಿಸಿತು. ಜಿಲ್ಲಾಡಳಿತದ ಈ ಆಜ್ಞೆಯನ್ನು ಹೈಕೋರ್ಟ್‌ ಸಹ 2010ರಲ್ಲಿ ಎತ್ತಿ ಹಿಡಿದಿತ್ತು. ಈ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಅಲ್ಲದೇ ರಾಜ್ಯ ಸರ್ಕಾರದ ಮೇಲೆ ಮೇಲಿಂದ ಮೇಲೆ ಒತ್ತಡ ಹಾಕುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೇಂದ್ರ ಸರ್ಕಾರದ ಮೊರೆ ಹೋಗಿ, ವನ್ಯಜೀವಿಗಳಿಗೆ ರಾತ್ರಿ ಸಂಚಾರದಿಂದ ತೊಂದರೆಯಾಗದಂತೆ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸುವ ಪ್ರಸ್ತಾವನೆಯನ್ನೂ ಮುಂದಿಟ್ಟಿದೆ.

Advertisement

ರಾತ್ರಿ ಸಂಚಾರ ಏಕೆ ಬೇಡ?
1. ನಿಷೇಧ ಬಳಿಕ ರಾತ್ರಿ 9 ರಿಂದ 6ರ ಅವಧಿಯಲ್ಲಿ ಪ್ರಾಣಿಗಳು ಸತ್ತಿಲ್ಲ!

2 ಎ) ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧಕ್ಕೂ ಮುಂಚೆ ರಸ್ತೆ ಅಪಘಾತದಲ್ಲಿ ಸತ್ತಿರುವ ಪ್ರಾಣಿಗಳು: 2004ರಲ್ಲಿ ಒಟ್ಟು 32 ಪ್ರಾಣಿಗಳು, 2005 ರಲ್ಲಿ 07, 2006ರಲ್ಲಿ 09, 2007ರಲ್ಲಿ 41, 2008ರಲ್ಲಿ 02.

2 ಬಿ) ರಾತ್ರಿ ಸಂಚಾರ ನಿಷೇಧದ ಬಳಿಕ ರಸ್ತೆ ಅಪಘಾತದಲ್ಲಿ ಸತ್ತಿರುವ ಪ್ರಾಣಿಗಳು: 2009ರಲ್ಲಿ 02, 2010ರಲ್ಲಿ 03, 2011ರಲ್ಲಿ 7, 2012ರಲ್ಲಿ 10, 2013ರಲ್ಲಿ 06, 2014ರಲ್ಲಿ 01, 2015ರಲ್ಲಿ 02, 2016ರಲ್ಲಿ 01, 2017ರಲ್ಲಿ 02, 2018ರಲ್ಲಿ 02.

ಈ ಅಂಕಿ ಅಂಶಗಳನ್ನು ಗಮನಿಸಿದರೆ ರಾತ್ರಿ ವಾಹನ ಸಂಚಾರ ನಿಷೇಧಕ್ಕೂ ಹಿಂದಿನ ಕೇವಲ ಐದು ವರ್ಷಗಳಲ್ಲಿ ಒಟ್ಟು 91 ಪ್ರಾಣಿಗಳು ಮೃತಪಟ್ಟಿವೆ. ರಾತ್ರಿ ಸಂಚಾರ ನಿಷೇಧದ ನಂತರ ಒಟ್ಟು 10 ವರ್ಷಗಳ ಅವಧಿಯಲ್ಲಿ 36 ಪ್ರಾಣಿಗಳು ಮೃತಪಟ್ಟಿವೆ. ಇಲ್ಲಿ ಇನ್ನೂ ಒಂದು ಮುಖ್ಯ ಅಂಶವನ್ನು ಗಮನಿಸಬೇಕು. ರಾತ್ರಿ ವಾಹನ ಸಂಚಾರ ನಿಷೇಧದ ಬಳಿಕ 2009ರಿಂದ ರಾತ್ರಿ 9ರಿಂದ ಬೆಳಿಗ್ಗೆ 6ರ ಅವಧಿಯಲ್ಲಿ ಒಂದು ಪ್ರಾಣಿಯೂ ಸತ್ತಿಲ್ಲ ಎಂದು ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಇಲಾಖೆಯ ದಾಖಲೆಗಳು ತಿಳಿಸುತ್ತಿವೆ. ಹೀಗಾಗಿ ರಾತ್ರಿ ವೇಳೆ ಸಂಚಾರ ನಿಷೇಧ ಮಾಡಿದರೆ ಅಪರೂಪದ ವನ್ಯಜೀವಿಗಳ ಸಾವು ನಿರಂತರವಾಗುತ್ತದೆ.

ವಾಸ್ತವ ತಿಳಿಸಿದರೂ ಬದಲಾಗುತ್ತಿಲ್ಲ
ಬಂಡೀಪುರದ ಅರಣ್ಯಾಧಿಕಾರಿಗಳು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ಕೇರಳ ಸಾರಿಗೆ ಕಾರ್ಯದರ್ಶಿ, ಕೇರಳ ವೈನಾಡು ಜಿಲ್ಲಾಧಿಕಾರಿ ಮತ್ತಿತರ ಅಧಿಕಾರಿಗಳ ತಂಡವನ್ನು ರಾತ್ರಿ ವೇಳೆ ರಸ್ತೆಯಲ್ಲಿ ಕರೆದುಕೊಂಡು ಹೋಗಿ ಪ್ರಾಣಿಗಳ ಸಂಚಾರ ಹೇಗೆ ಸುಗಮವಾಗಿದೆ ಎಂಬುದನ್ನು ಈ ಹಿಂದೆ ವಿವರಿಸಿದ್ದಾರೆ. ಆದರೂ ಕೇರಳ ಕೇರ್‌ ಮಾಡುತ್ತಿಲ್ಲ.

ಪರ್ಯಾಯ ಮಾರ್ಗಗಳು ಇವೆಯೇ?
ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದ ಮೂಲಕ ಕೇರಳಕ್ಕೆ ಹಾದು ಹೋಗುವ ರಸ್ತೆಗೆ ಪರ್ಯಾಯವಾಗಿ ನಾಗರಹೊಳೆ ಅರಣ್ಯದ ಅಂಚಿನಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ 90ನ್ನು ಅಭಿವೃದ್ಧಿ ಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬಹುದು ಎಂದು ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಈ ಹಿಂದೆಯೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಪರ್ಯಾಯ ರಸ್ತೆ (ರಾಜ್ಯ ಹೆದ್ದಾರಿ 90) ಅಕ್ಷರಶಃ ಕಾಡಿನ ಅಂಚಿನಲ್ಲಿ ಸಾಗುವುದರಿಂದ, ಪ್ರಸ್ತುತ ಬಂಡೀಪುರ ಕಾಡಿನ ಹೃದಯವನ್ನೇ ಸೀಳಿಕೊಂಡು ಹೋಗುತ್ತಿರುವ ರಾ.ಹೆ.766ರಲ್ಲಿ ಆಗುತ್ತಿರುವ ತೊಂದರೆಗಿಂತ, ಪರ್ಯಾಯ ರಸ್ತೆಯಿಂದ ಸಮಸ್ಯೆಗಳು ಗಣನೀಯವಾಗಿ ಕಡಿಮೆ ಹಾಗೂ ಇದರಿಂದ ಕೇರಳಕ್ಕೆ ತಲುಪಲು ಹೈ-ಸ್ಪೀಡ್‌ ರಸ್ತೆ ಕೂಡ ಸಿಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

ರಾಹುಲ್‌ ಗಾಂಧಿ ಅಸಂಬದ್ಧ ವಾದ
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕಿರುವ ನಿರ್ಬಂಧವನ್ನು ತೆರವುಗೊಳಿಸುವ ಬಗ್ಗೆ ಕೇರಳದ ವಯನಾಡು ಸಂಸದ ಹಾಗೂ ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಪದೇ ಪದೇ ಕೇರಳ ಪರ ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಿಪರ್ಯಾಸವೆಂದರೆ, ಮೈಸೂರು ಮಹಾರಾಜರ ಕಾಲದಲ್ಲಿ 1931ರಲ್ಲಿ ವೇಣುಗೋಪಾಲ ವನ್ಯಧಾಮವಾಗಿದ್ದ ಬಂಡೀಪುರ ಅರಣ್ಯವನ್ನು ಹುಲಿಗಳ ಸಂತತಿಯನ್ನು ಹೆಚ್ಚಿಸುವ ಸಲುವಾಗಿ 1974ರಲ್ಲಿ ಹುಲಿಯೋಜನೆ ವ್ಯಾಪ್ತಿಗೊಳಪಡಿಸಲಾಯಿತು. ಆಗ ಪ್ರಧಾನಿಯಾಗಿದ್ದವರು ರಾಹುಲ್‌‌ರ ಅಜ್ಜಿ ಇಂದಿರಾಗಾಂಧಿ! ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ರಾಹುಲ್‌ ತಂದೆ ರಾಜೀವ್‌ರ ಹೆಸರನ್ನೇ ಇಡಲಾಗಿದೆ! ಹೀಗಿರುವಾಗ ಅರಣ್ಯ ಹಾಗೂ ಅದನ್ನು ಅವಲಂಬಿಸಿರುವ ಜೀವರಾಶಿಗಳ ಮಹತ್ವ ಅರಿಯದೇ ರಾಹುಲ್‌ ಮಾತನಾಡುತ್ತಿರುವುದು ವನ್ಯಜೀವಿ ತಜ್ಞರನ್ನು ಕೆರಳಿಸಿದೆ.

ಬಂಡೀಪುರದ ವಿಷಯವಾಗಿ ದೆಹಲಿಯಲ್ಲಿ ಚರ್ಚೆ ನಡೆಸಿದ ರಾಹುಲ್‌-ಪಿಣರಾಯಿ

ರಾಹುಲ್‌ ಕೇರಳ ಪರ, ಕೆಪಿಸಿಸಿ ಯಾರ ಪರ?
ರಾಹುಲ್‌ ಗಾಂಧಿ ತಮ್ಮ ಕ್ಷೇತ್ರದ ಜನರ ಅನುಕೂಲಕ್ಕಾಗಿ ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ. ನಾವು ರಾಜ್ಯದ ಪರವಾಗಿಯೇ ಇದ್ದೇವೆ. ಇದರಲ್ಲಿ ಯಾವುದೇ ಗೊಂದಲ ಇಲ್ಲ.
ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ.

ರಾಹುಲ್‌ ಗಾಂಧಿ ಅವರು ತಮ್ಮ ಕ್ಷೇತ್ರದ ಜನತೆಯ ಅನುಕೂಲಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ನಾವು ನಮ್ಮ ರಾಜ್ಯದ ಹಿತಾಸಕ್ತಿಗೆ ಬದ್ಧರಾಗಿದ್ದೇವೆ.
ವಿ.ಎಸ್‌. ಉಗ್ರಪ್ಪ, ಮಾಜಿ ಸಂಸದ.

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next