Advertisement

ಹದಿಯಾ ವಿವಾಹ ಕಾನೂನು ಬದ್ಧ: ಸುಪ್ರೀಂ ಕೋರ್ಟ್‌

08:15 AM Mar 09, 2018 | |

ನವದೆಹಲಿ/ಕೊಚ್ಚಿ: ಕೇರಳದ ಮಹಿಳೆ ಹದಿಯಾರ ವಿವಾಹ ಕಾನೂನುಬದ್ಧವಾಗಿದ್ದು, ಅವರು ಪತಿಯ ಜತೆ ಜೀವಿಸಲು ಸ್ವತಂತ್ರರು ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಜತೆಗೆ ಮುಸ್ಲಿಂ ಪತಿಯ ಜತೆಗೆ ಆದ ವಿವಾಹವನ್ನು ರದ್ದು ಮಾಡಿ ಕೇರಳ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ಅನೂರ್ಜಿತಗೊಳಿಸಿದೆ. ಈ ಪ್ರಕರಣವು “ಲವ್‌ ಜಿಹಾದ್‌’ ಹೆಸರಿನಲ್ಲಿ ದೇಶಾದ್ಯಂತ ವಿವಾದ ಹಾಗೂ ಕುತೂಹಲಕ್ಕೆ ಕಾರಣವಾಗಿತ್ತು.

Advertisement

ಸುಪ್ರೀಂಕೋರ್ಟ್‌ ಮು.ನ್ಯಾ. ದೀಪಕ್‌ ಮಿಶ್ರಾ ನೇತೃತ್ವದ ಪೀಠ ಗುರುವಾರ ಈ ಕುರಿತು  ತೀರ್ಪು ನೀಡಿದೆ. ಜತೆಗೆ, ಹದಿಯಾ ಪತಿ ಶಫೀನ್‌ ಜಹಾನ್‌ ವಿರುದ್ಧ ಎನ್‌ಐಎ ತನಿಖೆ ಮುಂದುವರಿಸಲು ಕೋರ್ಟ್‌ ಅನುಮತಿ ನೀಡಿದೆ. ಆದೇಶದ ಬಗ್ಗೆ ಕೊಚ್ಚಿಯಲ್ಲಿ ಪ್ರತಿಕ್ರಿಯೆ ನೀಡಿರುವ ಹದಿಯಾ ತಂದೆ ಕೆ.ಎಂ.ಅಶೋಕನ್‌, ತೀರ್ಪಿನ ಮರುಪರಿಶೀಲನೆಗೆ ಕೋರಿ ಮೇಲ್ಮನವಿ ಸಲ್ಲಿಸಲು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. ಶಫೀನ್‌ ಜಹಾನ್‌ ಜತೆ ಪುತ್ರಿಯ ವಿವಾಹ ಗುಂಪೊಂದರ ಕೃತ್ಯವಾಗಿದ್ದು, ಶಫೀನ್‌ ವಿರುದ್ಧ ಎನ್‌ಐಎ ತನಿಖೆ ಮುಂದುವರಿಸಲು ಹೇಳಿರುವುದು ಸಮಾಧಾನ ತಂದಿದೆ ಎಂದು ಪ್ರತಿಪಾದಿಸಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಸುಪ್ರೀಂಕೋರ್ಟ್‌ ಈ ಬಗ್ಗೆ ತನಿಖೆಗೆ ಆದೇಶಿಸಿತ್ತು. ಕೇರಳದಲ್ಲಿ ಇತರ ಧರ್ಮೀಯರನ್ನು ಮತಾಂತರಗೊಳಿಸಿ ಮದುವೆಯಾಗುವ ಜಾಲ ಇದೆ ಎಂದು ಎನ್‌ಐಎ ಪ್ರತಿಪಾದಿಸಿತ್ತು. ಕಳೆದ  ನ.27ರಂದು ಹದಿಯಾರನ್ನು ಸುಪ್ರೀಂಕೋರ್ಟ್‌ ಪೋಷಕರ ವಶದಿಂದ ಮುಕ್ತಗೊಳಿಸಿ, ವಿದ್ಯಾಭ್ಯಾಸ ಪೂರ್ಣಗೊಳಿಸುವಂತೆ ಸೂಚಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next