ಚೆನ್ನೈ/ತಿರುವನಂತಪುರ: ಮೇಲ್ಮೈ ಸುಳಿಗಾಳಿಯ ಪರಿಣಾಮವಾಗಿ ಕೇರಳ, ತಮಿಳುನಾಡು, ಪುದುಚೇರಿಗಳಲ್ಲಿ ಬುಧವಾರ ಮತ್ತು ಗುರುವಾರ ಧಾರಾಕಾರ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈ ಎರಡು ರಾಜ್ಯಗಳಿಗೆ ಎಲ್ಲೋ ಅಲರ್ಟ್ ಘೋಷಿಸಿದೆ.
ಕೇರಳ ಮತ್ತು ಮಾಹೆಯ ವಿವಿಧ ಭಾಗಗಳಲ್ಲಿ ಗುರುವಾರದ ವರೆಗೆ ಬಿರುಸಿನ ಮಳೆಯಾಗಲಿದೆ. ಹೀಗಾಗಿ, ಕಟ್ಟೆಚರಿಕೆಯ ಕ್ರಮಗಳನ್ನು ಕೈಗೊಳ್ಳಲು ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ತೀರ್ಮಾನಿಸಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ.
ರಾಜಧಾನಿ ಚೆನ್ನೈ ಸಹಿತ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಚೆನ್ನೈಯ ಮೂಲಂಬಾಕಂ ಎಂಬಲ್ಲಿ ಸಬ್‌ವೇಗೆ ಪ್ರವಾಹದ ನೀರು ನುಗ್ಗಿ ಬಸ್ ಆಂಶಿಕವಾಗಿ ಮುಳುಗಿತ್ತು. ಕೂಡಲೇ ಚೆನ್ನೈ ಮಹಾನಗರಪಾಲಿಕೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಬಸ್ಸನ್ನು ನೀರಿನಿಂದ ಹೊರಕ್ಕೆಳೆದಿದ್ದಾರೆ.
ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಕಾರೈಕಲ್ ಮತಿತ್ತರ ಹಲವು ಸ್ಥಳಗಳಲ್ಲಿ ಮಳೆಯಾಗಿದೆ. ಅಲ್ಲಿ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲು ಸರಕಾರ ತೀರ್ಮಾನಿಸಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಮಳೆಯಾಗಿದೆ. ಕೆಲವು ದಿನಗಳಿಂದ ಬಿಸಿಲಿನ ಝಳದಿಂದ ಕಂಗೆಟ್ಟಿದ್ದ ಉದ್ಯಾನನಗರ ವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಏಕಾಏಕಿ ಮಳೆಯಾದ್ದರಿಂದ ಕಚೇರಿಗಳಿಂದ ಮನೆಗಳಿಗೆ ತೆರಳುತ್ತಿದ್ದವರಿಗೆ ತೊಂದರೆಯಾಯಿತು. ಕರಾವಳಿಯಲ್ಲಿ ಬುಧವಾರ ಮೋಡ ಕವಿದ ವಾತಾವರಣ ಕಂಡುಬಂದಿತ್ತು.