Advertisement

ಉಗ್ರರ ತವರಾಗಿ ಬದಲಾದ ಕೇರಳ: ಇನ್ನೂ ತಗ್ಗದ ಐಸಿಸ್‌ ಆಕರ್ಷಣೆ

11:56 AM Nov 04, 2017 | Team Udayavani |

ಇರಾಕ್‌ ಮತ್ತು ಸಿರಿಯಾದಲ್ಲಿ ಐಸಿಸ್‌ ಬಹುತೇಕ ಅಳಿವಿನಂಚಿಗೆ ಬಂದಿದ್ದರೂ ಭಾರತವೂ ಸೇರಿದಂತೆ ಕೆಲವು ದೇಶಗಳಲ್ಲಿ ಈ ಉಗ್ರ ಸಂಘಟನೆಯತ್ತ ಕೆಲವು ಮತಾಂಧ ಜನರಿಗೆ ಇರುವ ಆಕರ್ಷಣೆ ಇನ್ನೂ ಕಡಿಮೆಯಾಗಿಲ್ಲ. ಕೆಲವು ದಿನಗಳ ಹಿಂದೆ ಅಮೆರಿಕದಲ್ಲಿ ಐಸಿಸ್‌ ಉಗ್ರನೊಬ್ಬ ಟ್ರಕ್‌ ಚಲಾಯಿಸಿ 8 ಮಂದಿಯನ್ನು ಕೊಂದಿರುವುದು ಮತ್ತು ಕೇರಳದಲ್ಲಿ ಐವರು ಐಸಿಸ್‌ ಉಗ್ರರನ್ನು ಬಂಧಿಸಿರುವುದು ಇತ್ತೀಚೆಗಿನ ಪ್ರಕರಣಗಳು.

Advertisement

ಐದು ವರ್ಷಗಳ ಹಿಂದೆ ಇರಾಕ್‌ ಮತ್ತು ಸಿರಿಯಾ ದೇಶಗಳನ್ನು ಆಕ್ರಮಿಸಿಕೊಂಡ ಐಸಿಸ್‌ ಅನಂತರ ಇಂಗ್ಲಂಡ್‌, ಫ್ರಾನ್ಸ್‌, ಅಮೆರಿಕದಂತಹ ಮುಂದುವರಿದ ದೇಶಗಳಿಗೆ ಕಬಂಧ ಬಾಹು ಚಾಚಿದ್ದರೂ ಭಾರತದಲ್ಲಿ ಐಸಿಸ್‌ ನೆಲೆಯೂರಲು ಸಾಧ್ಯವಿಲ್ಲ ಎಂದು ನಾವು ನಿರುಮ್ಮಳವಾಗಿದ್ದೆವು. ಆದರೆ ಕಳೆದ ವರ್ಷ ಕೇರಳದ ಉತ್ತರ ತುದಿಯ ಕಾಸರಗೋಡಿನ 21 ಮಂದಿ ನಿಗೂಢವಾಗಿ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಾಗಲೇ ನಮಗೆ ಐಸಿಸ್‌ ನಮ್ಮ ಮನೆಯಂಗಳಕ್ಕೆ ತಲುಪಿದೆ ಎಂದು ಅರಿವಾದದ್ದು. ಅನಂತರ ಐಸಿಸ್‌ ಸೇರುವವರ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ. ಅದರಲ್ಲೂ ದೇವರ ಸ್ವಂತ ನಾಡು ಎಂಬ ಖ್ಯಾತಿಯಿರುವ ಕೇರಳ ಐಸಿಸ್‌ ಉಗ್ರರ ತವರು ನೆಲವಾಗಿ ಬದಲಾಗಿರುವುದು ಆತಂಕಕಾರಿ ಬೆಳವಣಿಗೆ. ಕಾಸರಗೋಡು, ಕಣ್ಣೂರು ಜಿಲ್ಲೆಗಳನ್ನು ಒಳಗೊಂಡಿರುವ ಮಲಬಾರ್‌ ವಲಯ ಐಸಿಸ್‌ನ ನೇಮಕಾತಿ ಕ್ಯಾಂಪಸ್‌ ಆಗಿದೆ. ಆರಂಭದಲ್ಲಿ ಐಸಿಸ್‌ ಜಾಡು ಪತ್ತೆ ಹಚ್ಚಲು ಭದ್ರತಾ ಪಡೆ ವಿಫ‌ಲವಾದದ್ದೇ ಕೇರಳದಲ್ಲಿ ಈ ಉಗ್ರ ಸಂಘಟನೆ ಈ ಪರಿ ಬೆಳೆಯಲು ಕಾರಣ.

ಸಾಕ್ಷರತೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯವೆಂಬ ಹಿರಿಮೆ ಇದ್ದರೂ ಇದುವೆ ಈಗ ಮುಳುವಾಗಿ ಪರಿಣಮಿಸಿದೆ. ವಿದ್ಯಾವಂತ ಯುವಕ, ಯುವತಿಯರೇ ಐಸಿಸ್‌ನತ್ತ ಹೆಚ್ಚು ಆಕರ್ಷಿತರಾಗುತ್ತಿರುವುದು ಇದಕ್ಕೆ ಸಾಕ್ಷಿ. ಡಾಕ್ಟರ್‌, ಎಂಜಿನಿಯರಿಂಗ್‌ ಕಲಿತ ಯುವಕರು ಕೂಡ ಬುದ್ಧಿಯನ್ನು ಮತಾಂಧ ಶಕ್ತಿಗಳ ಕೈಗೆ ಕೊಟ್ಟು ಅವರನ್ನು ಕುರುಡಾಗಿ ಅನುಸರಿಸುತ್ತಿರುವುದನ್ನು ನೋಡುವಾಗ ಖೇದವಾಗುತ್ತದೆ. ಕಳೆದ ವಾರ ಸೆರೆಯಾಗಿರುವ ಉಗ್ರರ ಪೈಕಿ ಹಂಝ ತಲಶೆÏàರಿ ಎಂಬಾತ ಐಸಿಸ್‌ ನೇಮಕಾತಿಯ ಪ್ರಮುಖ ಕೊಂಡಿಯಾಗಿದ್ದವ. 40ಕ್ಕೂ ಹೆಚ್ಚು ಮಂದಿಯನ್ನು ಐಸಿಸ್‌ಗೆ ಸೇರಿಸಿರುವುದನ್ನು ಅವನು ಒಪ್ಪಿಕೊಂಡಿದ್ದಾನೆ. ಐಸಿಸ್‌ ಸೇರಿದವರ ಸಂಖ್ಯೆ ಪೊಲೀಸರು ಲೆಕ್ಕ ಹಾಕಿರುವುದಕ್ಕಿಂತ ಬಹಳ ಹೆಚ್ಚಿದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ. ಗಲ್ಫ್ ದೇಶಗಳ ಜತೆಗೆ ಇರುವ ಸಂಪರ್ಕ ರಾಜ್ಯದಲ್ಲಿ ಐಸಿಸ್‌ ಹುಲುಸಾಗಿ ಬೆಳೆಯಲು ಮುಖ್ಯ ಕಾರಣ. ಉಗ್ರ ಮತ್ತು ದೇಶದ್ರೋಹಿ ಚಟುವಟಿಕೆಗಳಿಗಾಗಿ ಗಲ್ಫ್ನಿಂದ ಹವಾಲಾ ಮೂಲಕ ಧಾರಾಳ ಹಣ ಹರಿದು ಬರುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಕೆಲ ದಿನಗಳ ಹಿಂದೆ ರಾಷ್ಟ್ರೀಯ ಟಿವಿ ವಾಹಿನಿ ನಡೆಸಿದ ಕುಟುಕು ಕಾರ್ಯಾಚರಣೆಯಲ್ಲಿ ವಿದೇಶದಿಂದ ಹವಾಲ ಮೂಲಕ ಭಾರೀ ಪ್ರಮಾಣದ ಹಣ ಬರುತ್ತಿರುವುದಕ್ಕೆ ಸಾಕ್ಷ್ಯಗಳು ಲಭಿಸಿವೆ.  

ಇತರ ಕೆಲವು ಸ್ಥಳೀಯ ಮೂಲಭೂತವಾದಿ ಸಂಘಟನೆಗಳು ಕೂಡ ಉಗ್ರ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವ ಗುಮಾನಿಯಿದೆ. ಐಸಿಸ್‌ ಸೇರಿದವರಲ್ಲಿ ಅನೇಕ ಮಂದಿ ಇಂಥ ಸಂಘಟನೆಗಳ ಕಾರ್ಯಕರ್ತರಾಗಿದ್ದರು ಎನ್ನುವುದು ಈ ಅನುಮಾನವನ್ನು ಪುಷ್ಟೀಕರಿಸಿದೆ. ಲವ್‌ ಜೆಹಾದ್‌ ಮೂಲಕ ಇಂಥವು ಉಗ್ರ ಚಟುವಟಿಕೆಗಳಿಗೆ ನೆರವು ನೀಡುತ್ತಿರುವುದನ್ನು ಎನ್‌ಐಎ ಪತ್ತೆ ಹಚ್ಚಿದೆ. ಕಳೆದ ವರ್ಷ ನಾಪತ್ತೆಯಾದ 21 ಮಂದಿಯ ಪೈಕಿ ಇಬ್ಬರು ಯುವತಿಯರು ಮತ್ತು ಮೂವರು ಯುವಕರು ಮತಾಂತರಗೊಂಡ ಹಿಂದೂ ಮತ್ತು ಕ್ರೈಸ್ತ ಧರ್ಮೀಯರಾಗಿದ್ದರು. ಇವರ ಮತಾಂತರದ ಹಿಂದೆ ಇಂಥ ಸಂಘಟನೆಗಳ ಕೈವಾಡವಿತ್ತು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.  

ಕೇರಳ ಇನ್ನೊಂದು ಕಾಶ್ಮೀರವಾಗುತ್ತಿದೆ ಎಂಬ ಆರೋಪವನ್ನು ಸಂಪೂರ್ಣ ಅಲ್ಲಗಳೆಯಲಾಗದಂತಹ ಸುದ್ದಿಗಳು ಪದೇ ಪದೇ ಬರುತ್ತಿವೆ. ಒಂದು ಕಾಲದಲ್ಲಿ ಅತ್ಯಂತ ಮುಕ್ತ ಸಾಮಾಜಿಕ ವ್ಯವಸ್ಥೆಯನ್ನು ಹೊಂದಿದ್ದ ರಾಜ್ಯದಲ್ಲೀಗ ಮೂಲಭೂತವಾದ ಆಳವಾಗಿ ಬೇರು ಬಿಟ್ಟಿದೆ. ವಿದ್ಯಾವಂತ ಯುವಕರನೇಕರು ಇಂಟರ್‌ನೆಟ್‌ ಮೂಲಕ ಇದಕ್ಕೆ ಸಂಬಂಧಿಸಿದ ಪ್ರವಚನಗಳನ್ನು ಕೇಳಿ ಪ್ರಭಾವಿತರಾಗುತ್ತಿದ್ದಾರೆ. ಈಗಲೇ ಇದನ್ನು ಹತ್ತಿಕ್ಕುವ ಕೆಲಸ ಮಾಡದಿದ್ದರೆ ಭವಿಷ್ಯದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸುತ್ತಿದ್ದರೂ ಅಧಿಕಾರದಲ್ಲಿರುವವರು ಕಿವುಡಾ ಗಿದ್ದಾರೆ. ಸದ್ಯಕ್ಕೆ ಐಸಿಸ್‌ ಸೇರಿರುವವರ ಸಂಖ್ಯೆ ನಗಣ್ಯವೇ ಆಗಿದ್ದರೂ ಇಂತಹ ಸಣ್ಣ ಗುಂಪುಗಳನ್ನು ಈಗಲೇ ನಿಯಂತ್ರಿಸುವುದು ಅಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next