ತಿರುವನಂತಪುರಂ: ರಾಜ್ಯದಲ್ಲಿ ಆರೋಗ್ಯ ಸೇವಾ ವಲಯ, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಇತರ ಕೆಲಸ ಮಾಡುವವರಿಗೆ ಗಂಭೀರವಾದ ದೈಹಿಕ ಹಾನಿಯನ್ನುಂಟುಮಾಡುವ ತಪ್ಪಿತಸ್ಥರಿಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಗರಿಷ್ಠ 5 ಲಕ್ಷ ರೂ ದಂಡ ಸೇರಿದಂತೆ ಕಠಿಣ ಶಿಕ್ಷೆಯನ್ನು ಒದಗಿಸುವ ಸುಗ್ರೀವಾಜ್ಞೆಗೆ ಕೇರಳದ ಎಲ್‌ಡಿಎಫ್ ಸರಕಾರ ಬುಧವಾರ ಅನುಮೋದನೆ ನೀಡಿದೆ.
ಕಳೆದ ವಾರ ರಾಜ್ಯದ ಕೊಲ್ಲಂ ಜಿಲ್ಲೆಯ ತಾಲೂಕು ಆಸ್ಪತ್ರೆಯಲ್ಲಿ ರೋಗಿಯೊಬ್ಬರು ಡಾ.ವಂದನಾ ದಾಸ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೇರಳ ಹೆಲ್ತ್‌ಕೇರ್ ಸೇವಾ ಕಾರ್ಯಕರ್ತರು ಮತ್ತು ಆರೋಗ್ಯ ಸೇವಾ ಸಂಸ್ಥೆಗಳ (ಹಿಂಸಾಚಾರ ತಡೆಗಟ್ಟುವಿಕೆ ಮತ್ತು ಆಸ್ತಿಗೆ ಹಾನಿ) ತಿದ್ದುಪಡಿ ಸುಗ್ರೀವಾಜ್ಞೆಯ ಅಡಿಯಲ್ಲಿ, ಯಾವುದೇ ಆರೋಗ್ಯ ಕಾರ್ಯಕರ್ತರು ಮತ್ತು ವೃತ್ತಿಪರರಿಗೆ ಗಂಭೀರವಾದ ದೈಹಿಕ ಹಾನಿಯನ್ನು ಉಂಟುಮಾಡುವ ತಪ್ಪಿತಸ್ಥರಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಒಂದು ಲಕ್ಷದಿಂದ 5 ಲಕ್ಷದವರೆಗೆ ದಂಡ ವಿಧಿಸಲಾಗುವುದು ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.