Advertisement

ಗುಣಮಟ್ಟದ ಬದುಕಿಗೆ ಫಿಸಿಯೋಥೆರಪಿ; ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್‌ ಖಾನ್‌

01:37 AM Mar 26, 2022 | Team Udayavani |

ಮಂಗಳೂರು: ನಮ್ಮ ಬದುಕು ಪ್ರಕೃತಿಯ ಕೊಡುಗೆ. ಆರೋಗ್ಯ, ಜ್ಞಾನಸಂಪನ್ನವಾಗಿಸಿಕೊಂಡು ಗುಣಮಟ್ಟದ ಜೀವನವಾಗಿಸಿ ಸುಂದರಗೊಳಿಸುವುದು ನಮ್ಮ ಕರ್ತವ್ಯ. ಫಿಸಿಯೋಥೆರಪಿ ಇದಕ್ಕೆ ಪೂರಕವಾಗಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್‌ ಖಾನ್‌ ಹೇಳಿದ್ದಾರೆ.

Advertisement

ದಕ್ಷಿಣ ಕನ್ನಡ ಫಿಸಿಯೋಥೆರಪಿ ಬೋಧಕರ ಸಂಘದ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ ನ್ಯಾಶನಲ್‌ ಕನ್ವೆನನ್‌ ಸೆಂಟರ್‌ನಲ್ಲಿ ಆಯೋಜಿಸಲಾದ “ಮಂಗಳೂರು ಫಿಸಿಯೋಕಾನ್‌ 2022′ ಅಂತಾರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಣದಿಂದ ಜ್ಞಾನ ಹಾಗೂ ಗುಣಮಟ್ಟದ ಜೀವನ ಪ್ರಾಪ್ತಿಯಾಗುತ್ತದೆ.

ಫಿಸಿಯೋಥೆರಪಿಯಲ್ಲಿ ಆಗುವ ಹೊಸ ಬೆಳವಣಿಗೆಗಳ ಬಗ್ಗೆ ಜ್ಞಾನ, ಚಿಕಿತ್ಸಾ ಕೌಶಲಗಳನ್ನು ಉನ್ನತೀಕರಣ ಗೊಳಿಸುವುದು ಅತೀ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಆದ್ಯತೆ ಅಗತ್ಯ: ಡಾ| ಸುಧಾಕರ್‌
ದೇಶದಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಫಿಸಿಯೋಥೆರಪಿಸ್ಟ್‌ಗಳ ಕೊರತೆ ಕಾಡುತ್ತಿದೆ. ಅಮೆರಿಕದಲ್ಲಿ 10 ಸಾವಿರ ಜನಸಂಖ್ಯೆಗೆ 7 ಮಂದಿ ಫಿಸಿಯೋಥೆರಪಿಸ್ಟ್‌ಗಳಿದ್ದಾರೆ. ಭಾರತದಲ್ಲಿ ಇದರ ಪ್ರಮಾಣ 0.05 ಮಾತ್ರ. ಇದನ್ನು ನೀಗಿಸುವ ಪ್ರಯತ್ನ ಆಗಬೇಕಾಗಿದ್ದು, ಫಿಸಿಯೋಥೆರಪಿಸ್ಟ್‌ ಶಿಕ್ಷಣಕ್ಕೆ ಆದ್ಯತೆ ಅಗತ್ಯವಿದೆ ಎಂದು ಸಮ್ಮೇಳದ ಅಧ್ಯಕ್ಷತೆ ವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿಸಲಾಯಿತು. ಜೀವನದ ಗುಣಮಟ್ಟ ಉನ್ನತಗೊಳಿಸುವಲ್ಲಿ ಪಿಸಿಯೋಥೆರಪಿಯ ಪಾತ್ರ ಮಹತ್ತರವಾದುದು ಎಂದು ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಮಣಿಪಾಲ ಮಾಹೆಯ ಸಹಕುಲಾಧಿಪತಿ ಡಾ|ಎಚ್‌.ಎಸ್‌. ಬಲ್ಲಾಳ್‌ ಹೇಳಿದರು.

Advertisement

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ. ಕುಲಪತಿ ಡಾ| ಎಂ. ಕೆ. ರಮೇಶ್‌ ಅವರು ದಿಕ್ಸೂಚಿ ಭಾಷಣ ಮಾಡಿದರು. ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ 4 ಸಾವಿರಕ್ಕೂ ಅಧಿಕ ಪ್ರತಿನಿಧಿಗಳ ಜ್ಞಾನ ಹಾಗೂ ಕಲಿಕೆ ಉನ್ನತೀಕರಣಕ್ಕೆ ಸಮ್ಮೇಳನ ಪೂರಕವಾಗಲಿದೆ ಎಂದರು.

ಯುವ ಸಾಧಕ ಪ್ರಶಸ್ತಿ ಪುರಸ್ಕೃತ ದುಬಾೖ ಮತ್ತು ನಾರ್ದರ್ನ್ ಎಮಿರೇಟ್ಸ್‌ನ ವಿಪಿಎಸ್‌ ಹೆಲ್ತ್‌ ಕೇರ್‌ನ ಸಿಇಒ ಡಾ| ಶಾಜಿರ್‌ ಗಫ‌ರ್‌ ಅವರನ್ನು ಕಾರ್ಯಕ್ರಮದಲ್ಲಿ ಸಮ್ಮಾನಿಸಿ ಅಭಿನಂದಿಸಲಾಯಿತು. ಉತ್ತಮ ಸಾಧನೆಗೈದ ಮೂವರು ಫಿಸಿಯೋಥೆರಪಿ ವಿದ್ಯಾರ್ಥಿನಿಯರನ್ನು ಸಮ್ಮಾನಿಸಲಾಯಿತು.

ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಫಿಸಿಯೋ ಹಾಗೂ ಇಂಟರ್‌ನ್ಯಾಷನಲ್‌ ಅಫೇರ್ಸ್‌ ಆಫ್ ಇಂಡಿಯನ್‌ ಅಸೋಸಿಯೇಶನ್‌ ಆಫ್ ಫಿಸಿಯೋಥೆರಪಿಸ್ಟ್‌ ಅಧ್ಯಕ್ಷ ಡಾ| ಅಲಿ ಇರಾನಿ ಹಾಗೂ ಭಾರತೀಯ ಫಿಸಿಯೋಥೆರಪಿಸ್ಟ್‌ಗಳ ಸಂಘದ ಅಧ್ಯಕ್ಷ ಡಾ| ಸಂಜೀವ್‌ ಕೆ. ಝಾ, ಸಮ್ಮೇಳನ ಸಂಘಟನ ಸಮಿತಿಯ ಅಧ್ಯಕ್ಷ ಡಾ| ಯು.ಟಿ. ಇಫ್ತಿಕಾರ್‌ ಆಲಿ ಉಪಸ್ಥಿತರಿದ್ದರು. ಸಮ್ಮೇಳನ ಸಂಚಾಲಕ ಮುಹಮ್ಮದ್‌ ಸುಹೇಲ್‌ ಸ್ವಾಗತಿಸಿದರು.

ಪ್ರಾಚೀನ ಕಾಲದಿಂದಲೂ ಪ್ರಚಲಿತ
ಭಾರತದಲ್ಲಿ ಪಿಸಿಯೋಥೆರಪಿ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿತ್ತು. ಪಂಚಕರ್ಮ, ಅಭ್ಯಂಗ ಸ್ನಾನದಂತಹ ಚಿಕಿತ್ಸೆಗಳು ಇದಕ್ಕೆ ಉದಾಹರಣೆ. ಆದರೆ ಪಾಶ್ಚಿಮಾತ್ಯ ಜಗತ್ತಿಗೆ ಇದರ ಮಹತ್ವ ಅರಿವಾಗಿದ್ದು 19ನೇ ಶತಮಾನದಿಂದೀಚೆಗೆ ಎಂದು ಸಚಿವ ಡಾ| ಸುಧಾಕರ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next