ತಿರುವನಂತಪುರಂ: ಸಿಪಿಐ(ಎಂ) ಬೆಂಬಲಿತ ಎಸ್ ಎಫ್ ಐ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇರಳ ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್ ಅವರಿಗೆ ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಲು ತಿಳಿಸಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ:Ratnagiri- Watch Video: ಪೊಲೀಸ್ ಠಾಣೆಯೊಳಗೆ ನುಗ್ಗಿ ಶ್ವಾನವನ್ನು ಹೊತ್ತೊಯ್ದ ಚಿರತೆ!
ಶನಿವಾರ (ಜನವರಿ 27) ಬೆಳಗ್ಗೆ ಕೊಲ್ಲಂ ಜಿಲ್ಲೆಯಲ್ಲಿ ಎಸ್ ಎಫ್ ಐ ಕಾರ್ಯಕರ್ತರು ರಾಜ್ಯಪಾಲ ಖಾನ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ರಾಜ್ಯಪಾಲ ಖಾನ್ ಅವರು ತನ್ನ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದ್ದ ಎಸ್ ಎಫ್ ಐ ಕಾರ್ಯಕರ್ತರನ್ನು ಬಂಧಿಸುವಂತೆ ಆಗ್ರಹಿಸಿ ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದರು.
ರಾಜ್ಯಪಾಲ ಖಾನ್ ಅವರು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಬದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದರು. ಆದರೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಖಾನ್ ಆರೋಪಿಸಿದ್ದರು.
ಎಸ್ ಎಫ್ ಐ ಕಾರ್ಯಕರ್ತರ ವಿರುದ್ಧ ಎಫ್ ಐಆರ್ ದಾಖಲಿಸಿದ ಪ್ರತಿ ನೀಡುವಂತೆ ನಾನು ಪ್ರತಿಭಟನೆ ನಡೆಸಿರುವುದಾಗಿ ರಾಜ್ಯಪಾಲ ಖಾನ್ ತಿಳಿಸಿದ್ದಾರೆ. ಈ ಬೆಳವಣಿಗೆ ನಂತರ ಪೊಲೀಸರು 17 ಎಸ್ ಎಫ್ ಐ ಕಾರ್ಯಕರ್ತರ ಮೇಲೆ ಎಫ್ ಐಆರ್ ದಾಖಲಿಸಿದ ಪ್ರತಿಯನ್ನು ನೀಡಿದ ನಂತರ ರಾಜ್ಯಪಾಲರು ಸ್ಥಳದಿಂದ ತೆರಳಿದ್ದರು.
ಈ ಘಟನೆಯ ನಂತರ ಕೇಂದ್ರ ಗೃಹ ಸಚಿವಾಲಯ ರಾಜ್ಯಪಾಲ ಖಾನ್ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡುವಂತೆ ಕೇರಳ ರಾಜಭವನಕ್ಕೆ ಸೂಚನೆ ನೀಡಿರುವುದಾಗಿ ಕೇರಳ ರಾಜಭವನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.