Advertisement

ಯತ್ರ ಯೋಗೇಶ್ವರಃ ಕೃಷ್ಣೋ…: ಆರೀಫ್ ಮೊಹಮ್ಮದ್‌ ಖಾನ್‌

12:19 AM Sep 04, 2022 | Team Udayavani |

ಮೌಂಟ್‌ಅಬು, (ರಾಜಸ್ಥಾನ): ಭಗವದ್ಗೀತೆ ಯಲ್ಲಿ ಭಗವಾನ್‌ ಶ್ರೀಕೃಷ್ಣ ಎಲ್ಲಿ ತಾನಿದ್ದೇನೊ ಅಲ್ಲಿ ವಿಜಯ (ಯತ್ರ ಯೋಗೇಶ್ವರಃ ಕೃಷ್ಣೋ…) ಎಂದು ಹೇಳಿದ್ದಾನೆ. ಕೃಷ್ಣ ಇರುವುದು ಆತ್ಮ ಆಧಾರಿತ ಜ್ಞಾನ ಪ್ರಸರಣದಲ್ಲಿ. ಕೃಷ್ಣನ ಸಾರ್ವಕಾಲಿಕ ಮೌಲ್ಯದ ಸಂದೇಶವನ್ನು ಜಗತ್ತಿ ನಾದ್ಯಂತ ಮನುಕುಲಕ್ಕೆ ನಾವು ನೀಡಬೇಕಾಗಿದೆ ಎಂದು ಕೇರಳದ ರಾಜ್ಯಪಾಲ ಆರೀಫ್‌ ಮೊಹಮ್ಮದ್‌ ಖಾನ್‌ ಕರೆ ನೀಡಿದರು.

Advertisement

ರಾಜಸ್ಥಾನದ ಮೌಂಟ್‌ ಅಬುವಿನಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶನಿವಾರ ಆಯೋಜಿಸಿದ ಅಖೀಲ ಭಾರತೀಯ ಭಗವದ್ಗೀತ ಮಹಾಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಧಾರ್ಮಿಕ ಗ್ರಂಥಗಳು ಜೀವನ ಜಿಜ್ಞಾಸೆಗೆ ಬಹಳ ಮಹತ್ವ ಕೊಟ್ಟಿವೆ.ಭಾರತೀಯ ಸಂಸ್ಕೃತಿ ತತ್ವಜ್ಞಾನ ಆಧಾರಿತವಾದುದು ಎಂದರು.

ವೇದಕಾಲದಿಂದಲೂ ಏಕಂ ಸತ್‌ ವಿಪ್ರಾಃ ಬಹುಧಾ ವದಂತಿ ಎಂಬ ಸಂದೇಶವಿದೆ. ಇದು ಭಾರತೀಯ ಸಂಸ್ಕೃತಿಯ ಮೂಲ ಸಂದೇಶ. ಭಾರತದಲ್ಲಿ ಧ್ಯಾನ- ಜ್ಞಾನ ನಿರತ ಋಷಿ ಮುನಿಗಳನ್ನು ಆದರ್ಶಪ್ರಾಯರಾಗಿ ಕಂಡರೇ ವಿನಾ ಆಡಳಿತಾರೂಢರನ್ನಲ್ಲ ಎಂಬುದನ್ನು ನಾವು ಸದಾ ಗಮನಿಸಬೇಕಾಗುತ್ತದೆ ಎಂದು ಖಾನ್‌ ಹೇಳಿದರು.

ಭಾರತದ ಧರ್ಮ ತತ್ವಜ್ಞಾನ- ಆಧ್ಯಾತ್ಮಿಕ ವಾದುದು. ತತ್ವಜ್ಞಾನದ ಮೂಲಕವಾಗಿ ಆತ್ಮಗಳ ಅಂತರ್‌ ಸಮ್ಮಿಲನಕ್ಕೆ ಪ್ರಾಶಸ್ತ್ಯ ಕೊಡಲಾಗಿದೆ. ಸಂಸ್ಕೃತಿ, ಸಭ್ಯತೆಯು ಭಾಷೆ, ಜಾತಿ, ಆಚರಣೆಗಳ ಪರಿಭಾಷೆಯನ್ನು ಮೀರಿದ್ದಾಗಿದೆ ಎಂದು ಖಾನ್‌ ಬೆಟ್ಟು ಮಾಡಿದರು.

ಶ್ರೀಮದ್ಭಾಗವತದಲ್ಲಿ ದೇಹದಲ್ಲಿರುವ ಆತ್ಮಾನು ಭೂತಿ ಸತ್ಯದ ಬಗೆಗೆ ಕಪಿಲಮುನಿ ತನ್ನ ತಾಯಿ ಜತೆ ಮಾಡಿದ ಸಂವಾದದಲ್ಲಿ ಉಲ್ಲೇಖವಿದೆ. ಇಂತಹ ಮಹತ್ವಪೂರ್ಣ ಭಾರತೀಯ ಸಂಸ್ಕೃತಿಯ ಬಗೆಗೆ 137 ದೇಶಗಳಲ್ಲಿ ವ್ಯಾಪಿಸಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಯು ಪ್ರಸಾರ ಮಾಡುತ್ತಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

Advertisement

ಪ್ರಜಾಪಿತ ಸಂಸ್ಥೆಯ ಮುಖ್ಯಸ್ಥೆ ರಾಜಯೋಗಿನಿ ರತ್ನಮೋಹಿನಿ ಆಶೀರ್ವಚನ ನೀಡಿದರು. ಧಾರ್ಮಿಕ ವಿಭಾಗದ ಅಧ್ಯಕ್ಷೆ ಬಿ.ಕೆ. ಮನೋರಮಾ ಸ್ವಾಗಸಿದರು. ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ರಾಜಯೋಗಿ ಬಿ.ಕೆ. ಬೃಜಮೋಹನ್‌ ಮುಖ್ಯ ಭಾಷಣ ಮಾಡಿದರು.

ಧಾರ್ಮಿಕ ವಿಭಾಗದ ಸಮನ್ವಯಕಾರ ಬಿ.ಕೆ. ರಾಮನಾಥ ವಂದಿಸಿದರು. ವಕ್ತಾರೆ ಬಿ.ಕೆ. ಆಶಾ ಕಾರ್ಯಕ್ರಮ ನಿರ್ವಹಿಸಿದರು. ಧಾರ್ಮಿಕ ವಿಭಾಗದ ಉಪಾಧ್ಯಕ್ಷೆ ಡಾ| ಗೋದಾವರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next