Advertisement
ಕಳೆದ ಜೂನ್ 3 ರಂದು ಅಡೂರು ಶಾಲೆಯ ಕನ್ನಡ ಮಕ್ಕಳಿಗೆ ಸಮಾಜ ವಿಜ್ಞಾನ ಕಲಿಸಲು ಮಲಯಾಳಿ ಭಾಷೆಯ ಶಿಕ್ಷಕಿಯನ್ನು ಕೇರಳ ಸರಕಾರ ನೇಮಿಸಿದಾಗ ಕನ್ನಡಿಗ ವಿದ್ಯಾರ್ಥಿಗಳು ಅವರ ಪಾಠದ ಶೈಲಿಯ ಬಗ್ಗೆ ಆತಂಕ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದರು. ಜೂ.3 ರ ಪ್ರತಿಭಟನೆಯಂದಾಗಿ ನೇಮಕವಾಗದೆ ತೆರಳಿದ್ದ ಶಿಕ್ಷಕಿಯು ಆದೂರು ಪೊಲೀಸರನ್ನು ಕರೆದುಕೊಂಡು ಬಂದು ನೇಮಕಗೊಳ್ಳಲು ಪ್ರಯತ್ನಿಸಿದರು. ಆದರೆ ಮುಖ್ಯ ಶಿಕ್ಷಕರು ಅಸ್ವಸ್ಥರಾದ ಹಿನ್ನೆಲೆಯಲ್ಲಿ ನೇಮಕಾತಿ ಸಾಧ್ಯವಾಗಿರಲಿಲ್ಲ. ಅನಂತರ ಜಿಲ್ಲಾಧಿಕಾರಿ ಸಹಿತ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಶಿಕ್ಷಕಿಯ ನೇಮಕಾತಿಯಿಂದಾಗುವ ಸಮಸ್ಯೆಗಳ ಬಗ್ಗೆ ಕನ್ನಡ ಪೋಷಕರು ಮನವರಿಕೆ ಮಾಡಿದ್ದರು. ಆದರೆ ಜೂ.16 ರಂದು ಏಕಾಏಕಿಯಾಗಿ ಶಾಲೆಗೆ ಆಗಮಿಸಿ, ನೇಮಕಾತಿ ಪಡೆದು ತರಗತಿಗೆ ಮಲಯಾಳಿ ಭಾಷೆಯ ಶಿಕ್ಷಕಿಯು ತೆರಳಿದಾಗಲೇ ಕನ್ನಡ ಮಕ್ಕಳ ಹಾಗು ಪೋಷಕರ ಅಸಮಾಧಾನ ಕಟ್ಟೆಯೊಡೆದಿತ್ತು. ಆ ನಂತರ ಕನ್ನಡದ ಮಕ್ಕಳು ಮಲಯಾಳಿ ಶಿಕ್ಷಕಿಯ ಪಾಠ ಅರ್ಥವಾಗುತ್ತಿಲ್ಲ ಎಂದು ನಿರಂತರವಾಗಿ ತರಗತಿ ಬಹಿಷ್ಕರಿಸುತ್ತಿದ್ದಾರೆ. ಆದರೂ ಕೂಡಾ ಕೇರಳ ಸರಕಾರ ಮಕ್ಕಳ ಹಿತರಕ್ಷಣೆಯ ಬಗ್ಗೆ ಚಿಂತಿಸುತ್ತಿಲ್ಲ ಎಂದು ಪೋಷಕರು ದೂರಿದ್ದಾರೆ.
Related Articles
Advertisement
ಹೈಕೋರ್ಟ್ ಮೆಟ್ಟಲೇರಿದ ವಿವಾದ : ಇದೀಗ ಮಲಯಾಳಿ ಶಿಕ್ಷಕಿಯ ನೇಮಕಾತಿಯಿಂದಾಗಿ ಕನ್ನಡಿಗ ಮಕ್ಕಳು ಮಾತೃ ಭಾಷಾ ಶಿಕ್ಷಣದಿಂದ ವಂಚಿರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿಕೊಂಡೆ ಅಡೂರಿನ ಕನ್ನಡಿಗ ಪೋಷಕರು ಕನ್ನಡ ಹೋರಾಟ ಕ್ರಿಯಾ ಸಮಿತಿಯನ್ನು ರಚಿಸಿಕೊಂಡು ಹೈಕೋರ್ಟ್ ಮೆಟ್ಟಲೇರಿದ್ದಾರೆ. ಇದೀಗ ಕಾಸರಗೋಡಿನ ಕನ್ನಡ ಪರ ಸಂಘಟನೆಗಳು, ಕರ್ನಾಟಕ ಸರಕಾರ ಹಾಗು ಸಾರ್ವತ್ರಿಕವಾಗಿ ಕನ್ನಡ ಭಾಷಾಭಿಮಾನಿಗಳು ಅಡೂರಿನ ಕನ್ನಡಿಗ ಮಕ್ಕಳಿಗೆ ಶಕ್ತಿಯಾಗಬೇಕಾಗಿದೆ. ಕನ್ನಡ ವಿದ್ಯಾರ್ಥಿಗಳಿಗೆ ಮಲಯಾಳಿ ಶಿಕ್ಷಕಿ ಪಾಠ ಮಾಡುವ ಶಿಫಾರಸ್ಸನೇ ತಿದ್ದುಪಡಿ ಮಾಡಬೇಕಾಗಿದೆ. ವಿವಾದ ಬಗೆಹರಿಯದಲ್ಲಿ ನೇಮಕವಾದ ಮಲಯಾಳಿ ಶಿಕ್ಷಕಿಯಾಗಲೀ, ಕೇರಳ ಸರಕಾರಕ್ಕಾಗಲೀ ಯಾವುದೇ ನಷ್ಟವಿಲ್ಲ. ಸರಕಾರಿ ಶಾಲೆಯಲ್ಲಿ ಕಲಿಯಲೆಂದು ಬಂದ ಕನ್ನಡದ ಮಕ್ಕಳ ಭವಿಷ್ಯ ಮಾತ್ರ ಭಾರೀ ಅಪಾಯಕ್ಕೆ ಸಿಲುಕಬಹುದು ಎಂದು ಪೋಷಕರು ಹೇಳುತ್ತಾರೆ.