ತಿರುವನಂತಪುರ: ಚಿನ್ನ ಕಳ್ಳ ಸಾಗಣೆ ಆರೋಪಿ ಜತೆಗೆ ಶಾಮೀಲಾಗಿರುವ ಆರೋಪಕ್ಕೆ ಸಂಬಂಧಿಸಿ ದಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಎಂ.ಶಿವಶಂಕರ್ ಅವರನ್ನು ವಜಾ ಮಾಡಲಾಗಿದೆ. ಮಾಹಿತಿ ತಂತ್ರಜ್ಞಾನ ಕಾರ್ಯದರ್ಶಿಯೂ ಆಗಿರುವ ಅವರಿಗೆ ರಾಜೀನಾಮೆ ನೀಡುವಂತೆ ಸಿಎಂ ಸೂಚಿಸಿದ್ದಾರೆ. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ, ಯುಡಿಎಫ್ ಮತ್ತು ಇತರ ವಿಪಕ್ಷಗಳು ಸಿಬಿಐನಿಂದಲೇ ಪ್ರಕರಣದ ವಿರುದ್ಧ ತನಿಖೆ ನಡೆಸಲೇಬೇಕು ಎಂದು ಪಟ್ಟು ಹಿಡಿದಿವೆ. ಇದೇ ವೇಳೆ ಕಳ್ಳಸಾಗಣೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕೇರಳ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ನಿರ್ವಹಣಾ ಅಧಿಕಾರಿಯಾಗಿರುವ ಸ್ವಪ್ನಾ ಸುರೇಶ್ ಅವರನ್ನು ಅಮಾನತು ಮಾಡಲಾಗಿದೆ.
ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರಿತ್ ಕುಮಾರ್ ಎಂಬಾತನನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆತ ಸ್ವಪ್ನಾ ಸುರೇಶ್‌ಗಾಗಿ ಕಾಯುತ್ತಿದ್ದೇನೆ. ಆಕೆ ನನ್ನ ಸ್ನೇಹಿತೆ ಎಂದು ಹೇಳಿದ್ದ. ರಾಜತಾಂತ್ರಿಕ ಅಧಿಕಾರಿಗಳಿಗೆ ಇರುವ ರಕ್ಷಣೆ ದುರುಪಯೋಗ ಮಾಡಿಕೊಂಡು ಚಿನ್ನ ಕಳ್ಳ ಸಾಗಣೆ ಮಾಡಲಾಗುತ್ತಿದೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದರು.
ಸ್ವಪ್ನಾ ಸುರೇಶ್ ತಿರುವನಂತಪುರದ ಯುಎಇ ದೂತಾವಾಸದಲ್ಲಿ ಕೆಲಕಾಲ ಉದ್ಯೋಗಿಯಾಗಿದ್ದರು. ಹೀಗಾಗಿ ಆಕೆಯ ನೆರವಿನಿಂದಲೇ ಬೃಹತ್ ಮಟ್ಟದಲ್ಲಿ ಕೊಲ್ಲಿ ರಾಷ್ಟ್ರಗಳಿಂದ ಅಕ್ರಮವಾಗಿ ಚಿನ್ನ ಸಾಗಣೆ ಜಾಲದಲ್ಲಿ ಆಕೆಯ ಪಾತ್ರ ಕಸ್ಟಮ್ಸ್ ಅಧಿಕಾರಿಗಳಿಗೆ ದೃಢಪಟ್ಟಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಆಕೆಯ ವಿಚಾರಣೆಯನ್ನೂ ನಡೆಸಲಾಗಿತ್ತು. ಇದೇ ವೇಳೆ, ಆಕೆಯ ವಿರುದ್ಧ ದೂತಾವಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ತಿದ್ದಿದ ಆರೋಪಗಳೂ ಇವೆ.
ಐಟಿ ಇಲಾಖೆಯಲ್ಲಿ ಉದ್ಯೋಗ: ದೂತಾವಾಸದ ಕಚೇರಿಯ ಉದ್ಯೋಗದ ಬಳಿಕ ಆಕೆಯನ್ನು ಕೇರಳ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ನಿರ್ವಹಣಾ ಅಧಿಕಾರಿಯನ್ನಾಗಿ ನೇಮಿಸ ಲಾಗಿತ್ತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಸ್ವಪ್ನಾ ಸುರೇಶ್ ಜತೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಫೋಟೋಗಳೂ ವೈರಲ್ ಆಗಿವೆ. ವಜಾಗೊಂಡಿರುವ ಕಾರ್ಯದರ್ಶಿ ಶಿವಶಂಕರ್ ಮತ್ತು ಸ್ವಪ್ನಾಗೆ ನಿಕಟ ಸಂಪರ್ಕ ಇತ್ತು ಎಂದು ಆರೋಪಿಸಲಾಗಿದೆ. ಐಎಎಸ್ ಅಧಿಕಾರಿ ಈ ಜಾಲಕ್ಕೆ ನೆರವು ನೀಡಿದ್ದರೆಂದು ಹೇಳಲಾಗಿದೆ. ಅಕ್ರಮದಲ್ಲಿ ಭಾಗಿಯಾದದ್ದು ದೃಢಪಡುತ್ತಲೇ ಸ್ವಪ್ನಾರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. ಇದರ ಜತೆಗೆ ಆಕೆ ನಾಪತ್ತೆಯಾಗಿದ್ದಾಳೆ.
ಸಿಬಿಐ ತನಿಖೆಗೆ ನಡೆಯಲಿ: ಸಿಎಂ ಪ್ರಧಾನ ಕಾರ್ಯದರ್ಶಿಯನ್ನು ವಜಾ ಮಾಡಿರುವಂತೆಯೇ ರಾಜಕೀಯ ಟೀಕಾ ಪ್ರಹಾರ ಬಿರುಸಾಗಿದೆ. ವಿವಾದದ ಬಗ್ಗೆ ಸಿಬಿಐನಿಂದಲೇ ತನಿಖೆ ನಡೆಸಬೇಕು ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಯುಎಇ ದೂತವಾಸದಲ್ಲಿ ಉದ್ಯೋಗಿಯಾಗಿದ್ದ ಆಕೆಯ ವಿರುದ್ಧ ಗುರುತರ ಆರೋಪಗಳಿದ್ದವು. ಅಂಥ ಮಹಿಳೆಗೆ ಕೇರಳ ಸರಕಾರದ ಸಂಸ್ಥೆಯಲ್ಲಿ ಹೇಗೆ ಕೆಲಸ ಸಿಕ್ಕಿತು ಎಂದು ಚೆನ್ನಿತ್ತಲ ಪ್ರಶ್ನೆ ಮಾಡಿದ್ದಾರೆ. ಕೇರಳ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಪ್ರತಿಕ್ರಿಯೆ ನೀಡಿ, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕ್ರೈಮ್ ಬ್ರ್ಯಾಂಚ್ ಪೊಲೀಸರು ಆಕೆಯ ವಿಚಾರಣೆ ನಡೆಸಿ ದ್ದರು. ಅಂಥ ಮಹಿಳೆಯನ್ನು ಪ್ರಮುಖ ಹುದ್ದೆಗೆ ಹೇಗೆ ನೇಮಕ ಮಾಡಲಾಯಿತು ಎಂದು ಪ್ರಶ್ನಿಸಿದ್ದಾರೆ.ಕೆ.ಸುರೇಂದ್ರನ್.
15 ಬಾರಿ ಸ್ಮಗ್ಲಿಂಗ್
30 ಕೆಜಿ ಚಿನ್ನದೊಂದಿಗೆ ಸಿಕ್ಕಿಹಾಕಿಕೊಂಡಿರುವ ಸರಿತ್, ಈ ಹಿಂದೆ 15 ಬಾರಿ ಚಿನ್ನದ ಕಳ್ಳಸಾಗಣೆ ಮಾಡಿದ್ದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ರಾಜತಾಂತ್ರಿಕ ಸಿಬಂದಿಯ ಲಗೇಜುಗಳನ್ನು ಅಷ್ಟು ಕಟ್ಟುನಿಟ್ಟಾಗಿ ತಪಾಸಣೆ ನಡೆಸುವುದಿಲ್ಲ ಎಂದು ತಿಳಿದಿದ್ದ ಆತ, ವಿದೇಶಗಳಿಂದ ಚಿನ್ನವನ್ನು ಭಾರತಕ್ಕೆ ತರಲು ಇದೇ ಮಾರ್ಗವನ್ನು ಅವಲಂಬಿಸಿದ್ದ. ತಿರುವನಂತಪುರ ವಿಮಾನ ನಿಲ್ದಾಣದ ಮೂಲಕ 8 ಬಾರಿ ಚಿನ್ನವನ್ನು ಸ್ವದೇಶದೊಳಕ್ಕೆ ತಂದಿದ್ದ ಆತ, ಇನ್ನುಳಿದ 7 ಬಾರಿ ಕೊಚ್ಚಿ ಬಂದರಿನ ಮೂಲಕ ಚಿನ್ನ ತಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಯಾರು ಈ ಸ್ವಪ್ನ ಸುರೇಶ್?
ಇವರು ಅಬುಧಾಬಿಯಲ್ಲಿ ಹುಟ್ಟಿ ಅಲ್ಲಿಯೇ ಬೆಳೆದವರು. ಆಕೆಯ ತಂದೆ ತಿರುವನಂತಪುರದ ಬಲರಾಮಪುರದವರು. ತಿರುವನಂತಪುರದಲ್ಲಿ ಎರಡು ವರ್ಷ ಟ್ರಾವೆಲ್ ಏಜೆನ್ಸಿಯೊಂದರಲ್ಲಿ ಕೆಲಸ ಮಾಡಿದ್ದ ಸ್ವಪ್ನಾ, ಆನಂತರ ಏರ್ ಇಂಡಿಯಾ ಸ್ಯಾಟ್ಸ್‌ಗೆ 2013ರಲ್ಲಿ ಉದ್ಯೋಗಿಯಾಗಿ ಸೇರಿದ್ದರು. ಅಲ್ಲಿ ಅಧಿಕಾರಿಯೊಬ್ಬರ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಸ್ವಪ್ನಾ, ಪೊಲೀಸರ ಗಮನ ಸೆಳೆದಿದ್ದಳು. ಆ ಪ್ರಕರಣದ ತನಿಖೆ ನಡೆಸಲು ಆರಂಭಿಸಿದಾಗ “ನಕಲಿ ಸಹಿ’ ಪ್ರಕರಣವೊಂದು ತೆರೆದುಕೊಂಡಿತು. ಅದರ ಜತೆಯಲ್ಲೇ, ಸ್ವಪ್ನಾರ ಲೈಂಗಿಕ ಕಿರುಕುಳ ಪ್ರಕರಣ ಸುಳ್ಳು ಎಂಬುದು ಸಾಬೀತಾಗಿತ್ತು. ಇದು ತಿಳಿಯುತ್ತಲೇ 2016ರಲ್ಲಿ ಅಬುಧಾಬಿಗೆ ಹಿಂದಿರುಗಿದ್ದ ಸ್ವಪ್ನಾ ಅವರನ್ನು ಮತ್ತೆ ಕರೆಸಿಕೊಂಡು ಪ್ರಕರಣ ವಿಚಾರಣೆ ನಡೆಸಲಾಗುತ್ತಿತ್ತು. ಆದರೆ ಪ್ರತಿ ಬಾರಿ ಅವರನ್ನು ವಿಚಾರಣೆಗೆ ಒಳಪಡಿಸಿದ ಕೂಡಲೇ ಪ್ರಭಾವಿಗಳಿಂದ ಪೊಲೀಸರಿಗೆ ಫೋನುಗಳು ಬರುತ್ತಿದ್ದವು. ಅವರನ್ನು ಬೇಗನೇ ಹೊರಗೆ ಕಳಿಸುವಂತೆ ಸೂಚಿಸಲಾಗುತ್ತಿತ್ತು ಎಂದು “ದ ವೀಕ್’ ತಿಳಿಸಿದೆ. ಇದರ ನಡುವೆಯೇ ಅವರು, ಯುಎಇ ದೂತಾವಾಸದ ಕಾನ್ಸುಲೇಟ್ ಜನರಲ್ ಆಗಿ ನೇಮಕಗೊಂಡರು. ಆದರೆ ಇಲ್ಲಿಯೂ ಹಲವಾರು ಅಸಮರ್ಪಕ ಕೆಲಸಗಳಿಂದಾಗಿ ಆ ಕೆಲಸದಿಂದ ವಜಾಗೊಂಡರು. ಆದರೆ ಆ ಕೆಲಸದಲ್ಲಿದ್ದಾಗ ಸೌದಿಯ ಹಲವಾರು ರಾಜಕೀಯ ನಾಯಕರ ಸಂಪರ್ಕ ಗಳಿಸಿದ್ದರು.