ತಿರುವನಂತಪುರ/ಕೊಚ್ಚಿ: ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗ ಳಿಗೂ ಸಿಪಿಎಂ ನಾಯಕರಿಗೂ ನಂಟಿತ್ತೇ?
ಕೇರಳ ಉನ್ನತ ಶಿಕ್ಷಣ ಸಚಿವ, ಸಿಪಿಎಂ ನಾಯಕ ಕೆ.ಟಿ.ಜಲೀಲ್ ಮತ್ತು ಆರೋಪಿ ಸ್ವಪ್ನಾ ಸುರೇಶ್ ನಡುವೆ 16 ಬಾರಿ ದೂರವಾಣಿ ಸಂಭಾಷಣೆ ನಡೆದಿರುವುದು ತನಿಖೆಯಿಂದ ಬೆಳಕಿಗೆ ಬಂದಿರುವುದೇ ಇಂಥ ಪ್ರಶ್ನೆ ಮೂಡಲು ಕಾರಣ. ಇವರಿಬ್ಬರ ದೂರವಾಣಿ ಕರೆಗಳ ಒಟ್ಟು 16 ಬಾರಿ ಸ್ವಪ್ನಾ ಹಾಗೂ ಜಲೀಲ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಎನ್‌ಐಎ ಈ ಕರೆಗಳ ಬೆನ್ನು ಹತ್ತಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಸಚಿವ ಜಲೀಲ್, ನಾನು ಯುಎಇ ಕಾನ್ಸುಲ್ ಜನರಲ್ ಸೂಚನೆ ಮೇರೆಗೆ ಸ್ವಪ್ನಾಗೆ ಕರೆ ಮಾಡಿ ಮಾತನಾಡಿದ್ದೆ. ಆದರೆ, ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ರಂಜಾನ್ ವೇಳೆ ಪ್ರತಿ ವರ್ಷದಂತೆ ಈ ಬಾರಿಯೂ 10 ಸಾವಿರ ಆಹಾರದ ಕಿಟ್‌ಗಳನ್ನು ಒದಗಿಸುವುದಾಗಿ ಯುಎಇ ರಾಯಭಾರ ಕಚೇರಿ ನನಗೆ ತಿಳಿಸಿತ್ತು.
ಈ ವಿಚಾರದಲ್ಲಿ ಸ್ವಪ್ನಾರನ್ನು ಸಂಪರ್ಕಿಸುವಂತೆ ರಾಯಭಾರ ಕಚೇರಿಯ ಅಧಿಕಾರಿಗಳೇ ಹೇಳಿದ್ದರು. ಅದರಂತೆ, ಸ್ವಪ್ನಾರಿಗೆ ಕರೆ ಮಾಡಿ ಮಾತನಾಡಿದ್ದೆ ಎಂದು ಹೇಳಿದ್ದಾರೆ. ಜತೆಗೆ, ಯುಎಇ ಕಾನ್ಸುಲ್ ಜನರಲ್‌ರೊಂದಿಗೆ ತಾವು ನಡೆಸಿದ ಚಾಟ್‌ನ ವಿವರಗಳನ್ನೂ ಸಲ್ಲಿಸುವ ಮೂಲಕ ಜಲೀಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿದ್ದಾರೆ.
ಈ ನಡುವೆ, ಇತ್ತೀಚೆಗೆ ವಜಾಗೊಂಡ ಐಟಿ ಕಾರ್ಯದರ್ಶಿ ಎಂ.ಶಿವಶಂಕರ್‌ಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆರೋಪಿ ಪಿ.ಎಸ್.ಸರಿತ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ.