ಮಲಪ್ಪುರಂ : ಕೇರಳದಲ್ಲಿ ನಡೆದ ಅತ್ಯಂತ ಕಳವಳಕಾರಿ ಘಟನೆಯೊಂದರಲ್ಲಿ 17 ವರ್ಷದ ತರುಣಿಯೊಬ್ಬಳು ಯೂಟ್ಯೂಬ್ ನೋಡಿ ಸ್ವಯಂ ಹೆರಿಗೆ ಮಾಡಿಕೊಂಡಿದ್ದಾಳೆ.ಅಚ್ಚರಿಯೆಂದರೆ ಈ ವಿಚಾರ ಕೆಲ ದಿನಗಳ ಬಳಿಕ ಪೋಷಕರಿಗೆ ತಿಳಿದಿದೆ.
ಅವಿವಾಹಿತ ತರುಣಿ ಅಕ್ಟೋಬರ್ 24 ರಂದು ಮಗುವಿಗೆ ಜನ್ಮ ನೀಡಿದ್ದು. ಮೂರು ದಿನಗಳ ನಂತರವೇ ಆಕೆಯ ಅಸ್ವಸ್ಥ ತಾಯಿಗೆ ಮಗುವಿನ ಅಳು ಕೇಳಿ ವಿಷಯ ತಿಳಿದಿದೆ.
ಹೆರಿಗೆಯಾದ ಬಳಿಕ ಮೂರು ದಿನಗಳ ಕಾಲ ಬಾಲಕಿ ತನ್ನ ಕೋಣೆಗೆ ಬೀಗ ಹಾಕಿಕೊಂಡು ಒಳಗೇ ಇದ್ದಳು. ಆಕೆಯ ತಾಯಿಗೆ ತಿಳಿದ ನಂತರ , ತಾಯಿ ಮತ್ತು ಮಗು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಿಷಯ ತಿಳಿಸಿದ್ದು, ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೋಲೀಸರ ಹೇಳಿಕೆಯ ಪ್ರಕಾರ, 21 ವರ್ಷದ ನೆರೆಮನೆಯ ಯುವಕ ಆಕೆಯ ಗರ್ಭಕ್ಕೆ ಕಾರಣವಾಗಿದ್ದಾನೆ.
ಮಗುವಿಗೆ ಜನ್ಮ ನೀಡಿದ ನಂತರ ಹೊಕ್ಕುಳಬಳ್ಳಿಯನ್ನು ಹೇಗೆ ಕತ್ತರಿಸಬೇಕೆಂದು ತಿಳಿಯಲು ಯೂಟ್ಯೂಬ್ ವೀಡಿಯೊಗಳನ್ನು ನೋಡುವಂತೆ ಆತ ಸಲಹೆ ನೀಡಿದ್ದನು ಎಂದು ತಿಳಿದು ಬಂದಿದೆ.
ಪೊಲೀಸರು ಪೋಸ್ಕೋ ಕಾಯಿದೆಯ ಅಡಿಯಲ್ಲಿ ಯುವಕನನ್ನು ಬಂಧಿಸಿದ್ದು, ಯುವಕ ಮತ್ತು ತರುಣಿಯ ಜೊತೆ ಸಂಪರ್ಕವಿದ್ದದ್ದು ಮನೆಯವರಿಗೂ ತಿಳಿದಿತ್ತು ಎಂದು ತಿಳಿಸಿದ್ದಾರೆ.