ಕೊಚ್ಚಿ: ಸಿನಿಮಾದಲ್ಲಿ ನಾಯಕಿಯ ಪಾತ್ರವನ್ನು ನೀಡುವುದಾಗಿ ನಂಬಿಸಿ ಯುವತಿಯಿಂದ ಲಕ್ಷಾಂತರ ರೂ.ವನ್ನು ವಂಚಿಸಿದ ಆರೋಪದ ಮೇಲೆ ನಿರ್ಮಾಪಕರೊಬ್ಬರನ್ನು ಬಂಧಿಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಮಲಪ್ಪುರಂ ಮೂಲದ ಶಕ್ಕೀರ್ ಎಂಕೆ ಎಂಬಾತನನ್ನು ಉತ್ತರ ಕೋಝಿಕ್ಕೋಡ್‌ನಿಂದ ಪಲರಿವಟ್ಟಂ ಪೊಲೀಸರು ಬಂಧಿಸಿದ್ದಾರೆ.
ಮಾಲಿವುಡ್ ನಲ್ಲಿ ನಿರ್ಮಾಪಕನಾಗಿದ್ದೇನೆ ಎಂದು ಯುವತಿಯೊಬ್ಬರನ್ನು ಪರಿಚಯಿಸಿಕೊಂಡು ಆಕೆಗೆ ತನ್ನ ಸಿನಿಮಾದಲ್ಲಿ ಲೀಡ್ ರೋಲ್ ನಲ್ಲಿ ನಟಿಸಲು ಅವಕಾಶ ನೀಡುವುದಾಗಿ ಶಕ್ಕೀರ್ ಎಂಕೆ ಹೇಳಿದ್ದಾರೆ. ಇದಾದ ಬಳಿಕ ಸಿನಿಮಾ ನಿರ್ಮಾಣಕ್ಕೆ ಸ್ವಲ್ಪ ಹಣದ ಕೊರತೆಯಿದೆ ಎಂದು ಯುವತಿಯಿಂದ ಹಂತ – ಹಂತವಾಗಿ ಹಣವನ್ನು ತೆಗೆದುಕೊಂಡಿದ್ದಾರೆ. ಹಣದ ಕೊರತೆಯಿಂದ ಸಿನಿಮಾದ ಶೂಟಿಂಗ್ ಯಾವ ಕ್ಷಣದಲ್ಲೂ ಬೇಕಾದರೂ ನಿಲ್ಲಬಹುದೆಂದು ಯುವತಿಯಿಂದ ಹಣವನ್ನು ಪಡೆದಿದ್ದಾರೆ.
ಹೀಗೆ ಒಟ್ಟು 27 ಲಕ್ಷ ರೂ.ವನ್ನು ಯುವತಿ ನೀಡಿದ್ದು, ಇದನ್ನು ಆಕೆ ವಾಪಾಸ್ ಕೇಳಿದಾಗ, ನಿರ್ಮಾಪಕ ಆಕೆಗೆ ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಆಕೆಯ ಮೊಬೈಲ್ ಸಂಖ್ಯೆಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.
ವಂಚನೆ ಬಗ್ಗೆ ಅರಿತ ಯುವತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪಲರಿವಟ್ಟಂ ಇನ್ಸ್‌ಪೆಕ್ಟರ್ ಜೋಸೆಫ್ ಸಾಜನ್ ನೇತೃತ್ವದ ಪೊಲೀಸ್ ತಂಡ ಸೈಬರ್ ಸೆಲ್ ಬೆಂಬಲದೊಂದಿಗೆ ಆರೋಪಿಯನ್ನು ಪತ್ತೆ ಮಾಡಿ, ಆತನನ್ನು ಬಂಧಿಸಿದ್ದಾರೆ.