Advertisement
ಹಬ್ಬಗಳಿಗಾಗಿ ಬಗ್ಗೀತೇ ಕೇರಳ ಸರಕಾರ? :
Related Articles
Advertisement
ದೇಶದ ಶೇ.60ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣ :
ದೇಶದಲ್ಲಿ ಸೋಮವಾರ 38,948 ಪ್ರಕರಣ ದೃಢಪಟ್ಟಿವೆ. ರವಿವಾರಕ್ಕೆ ಹೋಲಿಕೆ ಮಾಡಿದರೆ ಶೇ.8.9ರಷ್ಟು ಕಡಿಮೆಯಾಗಿದೆ. ಆದರೆ ಇದರಲ್ಲಿ ಕೇರಳದ್ದೇ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಿವೆ. ಇದು ಕಳೆದ 24 ಗಂಟೆಯ ಕೇಸುಗಳಾಗಿರುವುದರಿಂದ ಈ ಸಂಖ್ಯೆಯಲ್ಲಿ ಕೇರಳದ ರವಿವಾರದ ಸಂಖ್ಯೆ ಸೇರ್ಪಡೆಯಾಗಿದೆ. ಅಂದರೆ 38 ಸಾವಿರ ಪ್ರಕರಣಗಳಲ್ಲಿ 26 ಸಾವಿರ ಪ್ರಕರಣ ಕೇರಳದವೇ ಆಗಿವೆ.
ಕೇರಳದಲ್ಲಿ ಆ್ಯಂಟಿಬಾಡಿ ಕಡಿಮೆ? :
ಮೇನಲ್ಲಿ ಐಸಿಎಂಆರ್ ನಡೆಸಿದ ಸೀರೋ ಪರೀಕ್ಷೆಯ ಪ್ರಕಾರ, ಕೇರಳದಲ್ಲಿ ರೋಗ ಪ್ರತಿರೋಧಕ ಶಕ್ತಿ ಉಳ್ಳವರ ಸಂಖ್ಯೆ ಕಡಿಮೆ ಇದೆ. ಅಂದರೆ, ಇಡೀ ದೇಶದಲ್ಲೇ ಶೇ.68ರಷ್ಟು ಮಂದಿ ಆ್ಯಂಟಿಬಾಡಿ ಸಾಮರ್ಥ್ಯ ಹೊಂದಿದ್ದರೆ, ಕೇರಳದಲ್ಲಿ ಈ ಪ್ರಮಾಣ ಶೇ.44ರಷ್ಟಿದೆ. ಅಂದರೆ ಕೇರಳದಲ್ಲಿ ಇನ್ನೂ ಅರ್ಧಕ್ಕಿಂತ ಹೆಚ್ಚು ಜನ ಕೊರೊನಾ ಎದುರಿಸುವ ಸಾಮರ್ಥ್ಯ ಹೊಂದಿಲ್ಲ. ಅಂದರೆ, ಸೀರೋ ಸಮೀಕ್ಷೆಯ ವೇಳೆ ಹೆಚ್ಚು ಜನ, ಕೊರೊನಾಗೆ ಎಕ್ಸ್‌ಪೋಸ್ ಆಗಿದ್ದರೆ, ಅವರಲ್ಲಿ ಆ್ಯಂಟಿಬಾಡಿ ಶಕ್ತಿ ಬೆಳೆದಿರುತ್ತಿತ್ತು. ಇವರಲ್ಲಿ ಆ್ಯಂಟಿಬಾಡಿ ಸಾಮರ್ಥ್ಯ ಇಲ್ಲದೇ ಇರುವುದರಿಂದ ಹರ್ಡ್ ಇಮ್ಯೂನಿಟಿ ಬೆಳೆದಿಲ್ಲ ಎಂದು ಹೇಳುತ್ತಾರೆ ತಜ್ಞರು.
ಡೆಲ್ಟಾ ವೇರಿಯಂಟ್ ಕಾರಣ :
ಕೇರಳದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದು ರೂಪಾಂತರಗೊಂಡ ಕೊರೊನಾ. ಅಂದರೆ, ಡೆಲ್ಟಾ ವೇರಿಯಂಟ್. ಇತ್ತೀಚೆಗಷ್ಟೇ ಕೊರೊನಾ ಪರೀಕ್ಷೆಗೊಳಪಟ್ಟ ಮಾದರಿಗಳನ್ನು ಪರೀಕ್ಷಿಸಿದಾಗ, ಶೇ.90ರಷ್ಟು ಮಂದಿಯಲ್ಲಿ ಈ ಡೆಲ್ಟಾ ವೇರಿಯಂಟ್ ಇರುವುದು ಕಂಡು ಬಂದಿದೆ. ಆದರೆ ಇದು ಬಿ.1.617.2 ವೇರಿಯಂಟ್ ಅಥವಾ ಬೇರೆ ಯಾವ ವೇರಿಯಂಟ್ ಎಂಬುದು ದೃಢಪಟ್ಟಿಲ್ಲ. ಆದರೂ, ಡೆಲ್ಟಾ, ಡೆಲ್ಟಾ ಪ್ಲಸ್ ಇರಬಹುದು ಎಂದು ಹೇಳಲಾಗುತ್ತಿದೆ.
ಪರೀಕ್ಷೆಯೂ ಹೆಚ್ಚು :
ಕೇರಳದಲ್ಲಿ ಏಕೆ ಸೋಂಕು ಹೆಚ್ಚಾಗುತ್ತಿದೆ ಎಂಬುದಕ್ಕೆ ಕೆಲವರು ಬೇರೆಯೇ ಕಾರಣ ಕೊಡುತ್ತಾರೆ. ಇಲ್ಲಿ ನಾವು ಪರೀಕ್ಷಾ ಸಂಖ್ಯೆ ಹೆಚ್ಚಿಸಿದ್ದೇವೆ, ಹೀಗಾಗಿ, ಕೇಸುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಬೇರೆ ರಾಜ್ಯಗಳಲ್ಲಿ ಪರೀಕ್ಷೆ ಹೆಚ್ಚಳ ಮಾಡುತ್ತಿಲ್ಲ, ಹೀಗಾಗಿ ಕೇಸು ಹೆಚ್ಚಾಗಿ ಕಂಡು ಬರುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲದೇ, ಸೋಮವಾರ ಗಣನೀಯ ಸಂಖ್ಯೆಯಲ್ಲಿ ಪರೀಕ್ಷೆಯನ್ನೂ ಕಡಿಮೆ ಮಾಡಲಾಗಿದೆ. ಹೀಗಾಗಿಯೇ ಕಡಿಮೆ ಪ್ರಕರಣ ಕಂಡು ಬಂದಿವೆ ಎಂದು ಹೇಳಲಾಗುತ್ತಿದೆ. ಕಳೆದ ಆರು ದಿನಗಳ ಟೆಸ್ಟ್‌ಗಳ ಸಂಖ್ಯೆ
ಸೋಮವಾರ – 1,17,823
ರವಿವಾರ – 1,55,543
ಶನಿವಾರ – 1,69,237
ಶುಕ್ರವಾರ – 1,63,691
ಗುರುವಾರ – 1,74,307
ಬುಧವಾರ – 1,74,854
ಶೈಲಜಾ ಟೀಚರ್ ಬಿಟ್ಟಿದ್ದೇ ದುಬಾರಿಯಾಯ್ತಾ? :
ಕೊರೊನಾ ಮೊದಲ ಅಲೆಯಲ್ಲಿ ಕೇರಳದಲ್ಲಿ ಆರೋಗ್ಯ ಸಚಿವರಾಗಿದ್ದ ಶೈಲಜಾ ಟೀಚರ್ ಸಮರ್ಥವಾಗಿ ನಿಭಾಯಿಸಿದ್ದರು. ಏಕೆಂದರೆ, ಕೊರೊನಾ ಬರುವ ಮುಂಚೆಯೇ, ಇದಕ್ಕಿಂತಲೂ ಭಯಾನಕವಾಗಿದ್ದ ನಿಫಾ ವೈರಸ್ ಕೇರಳವನ್ನು ಬಾಧಿಸಿತ್ತು. ಇದನ್ನು ಸಮರ್ಥವಾಗಿ ನಿಭಾಯಿಸಿದ್ದ ಶೈಲಜಾ ಅವರು, ಅನಂತರ ಬಂದ ಕೊರೊನಾವನ್ನು ಹಾಗೆಯೇ ನಿಭಾಯಿಸಿ, ಹೆಚ್ಚು ಸಾವು ಆಗದಂತೆ ನೋಡಿಕೊಂಡಿದ್ದರು. ಜತೆಗೆ ಅಲ್ಲಿನ ಆರೋಗ್ಯ ಮೂಲಭೂತ ಸೌಕರ್ಯವನ್ನೂ ಉತ್ತಮಗೊಳಿಸಿದ್ದರು. ಈಗ ಆರೋಗ್ಯ ಸಚಿವೆಯಾಗಿ ವೀಣಾ ಜಾರ್ಜ್ ಇದ್ದಾರೆ. ಇವರಿಗೆ ಕೊರೊನಾ ಸಂಕಷ್ಟ ಹೊಸದು. ಹೀಗಾಗಿಯೇ ಕೇರಳ ಸರಕಾರ ಕೊರೊನಾ ನಿಯಂತ್ರಣದಲ್ಲಿ ವಿಫಲವಾಗಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಜತೆಗೆ, ಶೈಲಜಾ ಅವರನ್ನು ಸಂಪುಟದಿಂದ ಕೈಬಿಟ್ಟಾಗ, ಇಡೀ ದೇಶಕ್ಕೆ ದೇಶವೇ ಅಚ್ಚರಿಯನ್ನೂ ವ್ಯಕ್ತಪಡಿಸಿತ್ತು.
ಸೂತ್ರ ಮರೆತ ಸರಕಾರ :
ಮೊದಲ ಅಲೆ ವೇಳೆ, ಕೇರಳ ಸರಕಾರ ಕೊರೊನಾ ಸೂತ್ರಗಳನ್ನು ಚೆನ್ನಾಗಿಯೇ ಪಾಲಿಸಿತ್ತು. ಅಂದರೆ, ಪರೀಕ್ಷೆ, ಸಂಪರ್ಕಿತರ ಹುಡುಕಾಟ ಮತ್ತು ಕ್ವಾರಂಟೈನ್. ಆದರೆ ಈ ಬಾರಿ ಪರೀಕ್ಷೆ ಮಾಡುವ ನಿಟ್ಟಿನಲ್ಲಿಯೇ ಎಡವಿದೆ. ಮೊದಮೊದಲಿಗೆ ಕಡಿಮೆ ಪರೀಕ್ಷೆಗಳನ್ನು ನಡೆಸುತ್ತಾ ಬಂದ ರಾಜ್ಯ ಸರಕಾರ, ಸೋಂಕು ಹೆಚ್ಚಾಗಿ ಹರಡುವಂತೆ ಮಾಡಿತು. ಅಂದರೆ, ಎರಡನೇ ಅಲೆ ಕಡಿಮೆಯಾಗುತ್ತಿದೆ ಅಂದುಕೊಳ್ಳುತ್ತಿರುವಾಗಲೇ ಪರೀಕ್ಷೆಗಳ ಸಂಖ್ಯೆ ಕಡಿಮೆಯಾಯಿತು. ಒಂದು ವೇಳೆ ಹೆಚ್ಚೆಚ್ಚು ಪರೀಕ್ಷೆ ನಡೆಸಿದ್ದರೆ, ಸಂಪರ್ಕಿತರನ್ನು ಪತ್ತೆ ಮಾಡಿ, ಕ್ವಾರಂಟೈನ್ ಮಾಡಬಹುದಿತ್ತು. ಈಗ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದ್ದರೂ, ಹೆಚ್ಚು ಕಡಿಮೆ ಎಲ್ಲೆಡೆ ಹರಡಿರುವುದರಿಂದ ನಿಯಂತ್ರಣಕ್ಕೆ ತರಲಾಗುತ್ತಿಲ್ಲ. ಇನ್ನೂ ಒಂದು ವಾರ ಹೀಗೆಯೇ ಮುಂದುವರಿಯಬಹುದು ಎಂದು ಹೇಳಲಾಗುತ್ತಿದೆ.
ವೈರಸ್+ಜನ+ಪರಿಸರ :
ಕೇರಳದ ತಜ್ಞ ವೈದ್ಯರ ಪ್ರಕಾರ, ವೈರಸ್+ಜನ+ಪರಿಸರವೂ ಸೋಂಕಿನ ಏರಿಕೆಗೆ ಕಾರಣವಾಗಿದೆ. ಅಂದರೆ ಇದನ್ನು ಏಜೆಂಟ್+ಮೋಸ್ಟ್+ಎನ್‌ವಿರಾನ್‌ಮೆಂಟ್ ಎಂದು ಅವರು ಕರೆದಿದ್ದಾರೆ. ಇಲ್ಲಿ ವೈರಸ್ ಏಜೆಂಟ್ ಆಗಿದ್ದರೆ, ಜನ ಹೋಸ್ಟ್‌ನಂತೆ ಆಗಿದ್ದಾರೆ. ಇವರು ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಪ್ರವಾಸ ಮಾಡಿ ವೈರಸ್ ಅನ್ನು ಹರಡಿಸುತ್ತಿದ್ದಾರೆ. ಇನ್ನು ಕೇರಳದ ಶೀತವುಳ್ಳ ವಾತಾವರಣವೂ ವೈರಸ್ ಹೆಚ್ಚು ಕಾಲ ಇರುವಂತೆ ಮಾಡುತ್ತಿದೆ.