ಪ್ರತೀ ರಾಜ್ಯದಲ್ಲೂ ಅದರಲ್ಲೂ ಪ್ರಾದೇಶಿಕ ಪಕ್ಷಗಳು ಇರುವಲ್ಲಿನ ರಾಜಕೀಯ ಲೆಕ್ಕಾಚಾರವೇ ಬೇರೆ. ಅಲ್ಲಿ ಒಂದು ಪಾರ್ಟಿ, ಒಂದು ನಾಯಕ, ಒಂದು ಅಲೆ ಎಂಬುದೆಲ್ಲ ತೀರಾ ಕಡಿಮೆ. ಸರಿ ಮಧ್ಯಾಹ್ನದ ಹೊತ್ತಿನ ಕಡಲಿನ ಹಾಗೆ. ಸಣ್ಣ ಸಣ್ಣ ಅಲೆಗಳು ಒಂದರ ಹಿಂದೆ ಬಂದು ದಡಕ್ಕೆ ಅಪ್ಪಳಿಸುವಂತೆ ಇರುತ್ತದೆ. ಹಾಗೆಂದು ಅವಗಣಿಸುವಂತೆಯೂ ಇಲ್ಲ, ಸಂಜೆ ಆಗುವಷ್ಟರಲ್ಲಿ ಯಾವುದೋ ಒಂದು ಅಲೆ ಹೆದ್ದೆರೆಯಾಗಿ ಬಿಡಬಹುದು!
ಕೇರಳದಲ್ಲಿ ಇಂದು ಹತ್ತಕ್ಕೂ ಹೆಚ್ಚು ಕಾಂಗ್ರೆಸ್‌ಗಳಿವೆ. ಯಾವುದೇ ಗಲ್ಲಿಯಲ್ಲಿ ನಿಂತು ಒಂದು ಕಲ್ಲೆಸೆದರೂ ಅದು ಒಂದು ಕಾಂಗ್ರೆಸ್‌ನ ಅಂಗಳಕ್ಕೆ ಬಿದ್ದೇ ಬೀಳುತ್ತದೆ.
ಇದು ಕೇರಳ ಕಾಂಗ್ರೆಸ್‌ನ ಕಥೆ. ಅಂದರೆ ಕೇರಳ ಪ್ರದೇಶ ಕಾಂಗ್ರೆಸ್‌ನದ್ದಲ್ಲ; ಅದರ ಉಪಕಥೆ. ಇದು ಹೇಗಿದೆ ಎಂದರೆ ಕಥಾ ನಾಯಕನಿಗಾಗಿ ರೂಪಿಸಿದ ಕಥೆಯಲ್ಲಿ ಉಪ ಪಾತ್ರಗಳೆಲ್ಲ ನಾಯಕನ ಮಟ್ಟಕ್ಕೇ ಬೆಳೆದರೆ ಹೇಗೆಯೋ ಹಾಗೆ? ಇನ್ನೊಂದು ರೀತಿಯಲ್ಲಿ ವ್ಯಾಖ್ಯಾನಿಸಬಹುದಾದರೆ ಹತ್ತು ನಾಯಕರು ಮತ್ತು ಅವರ ಹಿಂದೆ ಹತ್ತು ಹಿಂಬಾಲಕರು!
ಹಾಗೆಯೇ ಕರಾವಳಿ ಕಾಂಗ್ರೆಸ್‌ನಿಂದಲೇ ಒಡೆದು ಹುಟ್ಟಿದ್ದು ಕೇರಳ ಕಾಂಗ್ರೆಸ್. 1963 ರಲ್ಲಿ ಯುಡಿಎಫ್ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ನ ಮುಖ್ಯಮಂತ್ರಿ ಆರ್. ಶಂಕರ್ ಒಂದು ವಿವಾದ ಸಂಬಂಧ ಮುಖಂಡ ಪಿ.ಟಿ. ಚಾಕೋ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿದರು. ಇದರಿಂದ ಬೇಸತ್ತ ಚಾಕೋ ಗೆಳೆಯರಾದ ಕೆ.ಎಂ. ಜಾರ್ಜ್ ನೇತೃತ್ವದ ಗುಂಪು ಶಂಕರ್ ಸರಕಾರದ ವಿರುದ್ಧ ಅವಿಶ್ವಾಸ ಮಂಡಿಸಿತು. ಅಲ್ಲಿಂದ ಶುರುವಾಯಿತು ಕೇರಳ ಕಾಂಗ್ರೆಸ್‌ನ ಉಪಕಥೆ. ಆರ್. ಬಾಲಕೃಷ್ಣ ಪಿಳ್ಳೆ„ಅವರು ಕೆ.ಎಂ. ಜಾರ್ಜ್ ಜತೆ ಸೇರಿ ಕೇರಳ ಕಾಂಗ್ರೆಸ್ ಶುರು ಮಾಡಿದರು. ಅದಕ್ಕೆ ಮತ್ತೂಬ್ಬ ಬಲಿಷ್ಠ ಸಮುದಾಯದ ಮುಖಂಡ ಎಂ. ಪದ್ಮನಾಭನ್ ಕೈ ಜೋಡಿಸಿದರು. ಪಕ್ಷ ಬೆಳೆಯುತ್ತಿರುವಾಗಲೇ ಕೆ.ಎಂ.ಮಾಣಿ ಹಾಗೂ ಕೆ.ಜೆ. ಜೋಸೆಫ್ ಎಂಬ ನಾಯಕರೂ ಬೆಳೆದರು.
1977ರ ಸಂದರ್ಭ. ಕೆ.ಎಂ. ಜಾರ್ಜ್ ಕಾಲವಾದ ಬಳಿಕ ಪಿಳ್ಳೆ„ ಮತ್ತು ಕೆ.ಎಂ. ಮಾಣಿ ನಡುವೆ ನಾಯಕತ್ವಕ್ಕಾಗಿ ಹಣಾಹಣಿ ಪ್ರಾರಂಭವಾಯಿತು. ತಾನೇ ಹಿರಿಯ ನಾಯಕನಾದ್ದರಿಂದ ನನ್ನದೇ ಪಕ್ಷ ಎಂಬುದು ಪಿಳ್ಳೆ„ ವಾದವಾಗಿತ್ತು. ಆದರೆ ಮಾಣಿ ಮತ್ತು ಜೋಸೆಫ್ ಅವರ ಹಿಂದೆ ಹಿಂಬಾಲಕರ ಸಂಖ್ಯೆ ದೊಡ್ಡದಿತ್ತು. ಇನ್ನೇನು ವಿಧಾನಸಭೆ ಚುನಾವಣೆ ಬರುವ ಸಂದರ್ಭದಲ್ಲಿ ಪಿಳ್ಳೆ„ ಅವರು ಕೇರಳ ಕಾಂಗ್ರೆಸ್‌ನಿಂದ ಹೊರಬಂದು ಕೇರಳ ಕಾಂಗ್ರೆಸ್ (ಬಿ) ಸ್ಥಾಪಿಸಿದರು. ಕೇರಳ ಕಾಂಗ್ರೆಸ್ ಮಾಣಿ-ಜೋಸೆಫ್ ಮುಂದಾಳತ್ವದಲ್ಲಿ ಸಾಗಿತು.
ಇದು ಎಷ್ಟು ದಿನ ನಡೆಯಲು ಸಾಧ್ಯ? 1979ರಲ್ಲಿ ಕೆ.ಎಂ.ಮಾಣಿ ಮತ್ತೂಬ್ಬ ಮುಖಂಡ ಜೋಸೆಫ್ ಜತೆ ಮುನಿಸಿಕೊಂಡು ಹೊರಬಂದು ಕೇರಳ ಕಾಂಗ್ರೆಸ್ (ಎಂ) ಸ್ಥಾಪಿಸಿ ಎಡರಂಗ ನೇತೃತ್ವದ ಯುಡಿಎಫ್ ಕಡೆ ಮುಖ ಮಾಡಿದರು. 1982ರಲ್ಲಿ ಮತ್ತೆ ಯುಡಿಎಫ್ ಕಡೆ ವಾಲಿದರು. ಕೇರಳ ಕಾಂಗ್ರೆಸ್ ನಡೆದಿತ್ತು. 1985 ರಲ್ಲಿ ಈ ಎಂ ಮತ್ತು ಬಿ ಮತ್ತೆ ಕೇರಳ ಕಾಂಗ್ರೆಸ್ ಜತೆ ಸೇರಿಕೊಂಡರು. ಯುಡಿಎಫ್ಗೆ ಶಕ್ತಿ ತುಂಬಿದರು. ಎರಡೇ ವರ್ಷ, ಮತ್ತೆ ಮಾಣಿ ಮತ್ತು ಜೋಸೆಫ್ ಬೇರೆಯಾದರು. ಪಿಳ್ಳೆ„ ಜೋಸೆಫ್ ಬೆನ್ನಿಗೆ ನಿಂತರು. 1989ರಲ್ಲಿ ಪಿಳ್ಳೆ„ ತಮ್ಮ ಕೇರಳ ಕಾಂಗ್ರೆಸ್ (ಬಿ)ಯನ್ನು ಮತ್ತೆ ಬಲಗೊಳಿಸಿದರು. ಇತ್ತ ಜೋಸೆಫ್ 1991ರಲ್ಲಿ ಯುಡಿಎಫ್ ಬಿಟ್ಟು ಎಲ್‌ಡಿಎಫ್ ಬಾಗಿಲಲ್ಲಿ ನಿಂತರು.
ಈಗ ಒಡಕಿನ ಸರದಿ ಮಾಣಿ ಪಕ್ಷದಲ್ಲಿ ಅಂದರೆ ಕೇರಳ ಕಾಂಗ್ರೆಸ್ (ಎಂ). ಮಾಣಿಯ ಅನುಯಾಯಿ ಟಿ.ಎಂ. ಜಾಕೋಬ್ 1993 ರಲ್ಲಿ ಕೇರಳ ಕಾಂಗ್ರೆಸ್ (ಜೆ) ಸ್ಥಾಪಿಸಿದರು. ಇದೇ ಸಂದರ್ಭದಲ್ಲಿ ಪಿ ಟಿ ಚಾಕೋವಿನ ಮಗ ಪಿ.ಸಿ. ಥಾಮಸ್ ಮಾಣಿ ಕಾಂಗ್ರೆಸ್‌ನಲ್ಲಿ ಬಲಗೊಂಡಿದ್ದರು. ಅಷ್ಟರಲ್ಲಿ ಮಾಣಿ ತಮ್ಮ ಮಗನನ್ನು ಬೆಳೆಸಬೇಕೆಂಬ ಆಸೆಯಲ್ಲಿದ್ದರು. ಇದು ಮಾಣಿ ಮತ್ತು ಥಾಮಸ್ ನಡುವೆ ವಿರಸಕ್ಕೆ ಕಾರಣವಾಯಿತು. ಥಾಮಸ್ ಲೋಕಸಭೆ ಸದಸ್ಯರಾಗಿದ್ದ ಸಂದರ್ಭ. 2001ರಲ್ಲಿ ಪಕ್ಷದಿಂದ ಹೊರಬಂದು ಐಎಫ್ಡಿಪಿ ಯನ್ನು ಸ್ಥಾಪಿಸಿ ಎನ್‌ಡಿಎ ಕಡೆ ವಾಲಿದ್ದು ವಿಶೇಷ. ಇಲ್ಲಿಗೇ ಈ ಕಥೆ ಮುಗಿಯಲಿಲ್ಲ. ಮತ್ತೂ ಇದೆ.