ತಿರುವನಂತಪುರಂ: ಕಳೆದ ತಿಂಗಳು ಅಂಕೋಲದ ಶಿರೂರಿನಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ನಾಪತ್ತೆಯಾಗಿರುವ ಲಾರಿ ಚಾಲಕನ ಶೋಧ ಕಾರ್ಯಾಚರಣೆಯನ್ನು ಪುನರಾರಂಭಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ‘ಅರ್ಜುನ್ ಬಹಳ ದಿನಗಳಿಂದ ನಾಪತ್ತೆಯಾಗಿರುವುದರಿಂದ ಅವರ ಕುಟುಂಬದ ಸದಸ್ಯರ ಆತಂಕ ಮತ್ತು ದುಃಖವನ್ನು ಹಂಚಿಕೊಳ್ಳಲು ನಾನು ಪತ್ರವನ್ನು ಬರೆಯುತ್ತಿದ್ದೇನೆ. ಅರ್ಜುನ್ ಪತ್ತೆಗಾಗಿ ಶೋಧ ಕಾರ್ಯಾಚರಣೆಯನ್ನು ಇಂದು ಪುನರಾರಂಭಿಸಲಾಗುವುದು ಎಂದು ನನಗೆ ತಿಳಿದಿತ್ತು. ಆದರೆಕಾರ್ಯಾಚರಣೆ ಇನ್ನೂ ಪುನರಾರಂಭಗೊಂಡಿಲ್ಲ ಎಂಬ ಮಾಹಿತಿ ಲಭ್ಯವಾಗುತ್ತಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆ ಪುನರಾರಂಭಿಸಲು ಕೇರಳ ಸಿಎಂ ಸಿದ್ದರಾಮಯ್ಯ ಅವರ ವೈಯಕ್ತಿಕ ಮಧ್ಯಸ್ಥಿಕೆ ಕೋರಿದ್ದಾರೆ. ಇದಕ್ಕೂ ಮುನ್ನ ವಿಜಯನ್ ಅವರು ಅರ್ಜುನ್ ಮನೆಗೆ ಭೇಟಿ ನೀಡಿ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿ ಯಾವುದೇ ತೊಂದರೆಗಳಿದ್ದರೂ ಅವರ ಬೆಂಬಲಕ್ಕೆ ನಿಲ್ಲುವುದಾಗಿ ಭರವಸೆ ನೀಡಿ ಧೈರ್ಯ ತುಂಬಿದರು.
ಕೇರಳ ಸಿಎಂ ಫೇಸ್‌ಬುಕ್ ಪೋಸ್ಟ್‌ನಲ್ಲಿ,ಅರ್ಜುನ್‌ನ ಪತ್ತೆಯ ಬಗ್ಗೆ ಕುಟುಂಬದ ಕಳವಳವನ್ನು ಕರ್ನಾಟಕ ಸರ್ಕಾರಕ್ಕೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಕೋಝಿಕ್ಕೋಡ್‌ಗೆ ಮರ ತುಂಬಿದ ಲಾರಿಯನ್ನು ಕೇರಳದ ಅರ್ಜುನ್ ಚಾಲನೆ ಮಾಡುತ್ತಿದ್ದಾಗ ಜುಲೈ 16 ರಂದು ಭೂಕುಸಿತ ಸಂಭವಿಸಿದ್ದು, ಅಂದಿನಿಂದ ಅವರು ನಾಪತ್ತೆಯಾಗಿದ್ದಾರೆ.ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಹಲವು ಏಜೆನ್ಸಿಗಳು ಶೋಧ ಕಾರ್ಯಾಚರಣೆ ನಡೆಸಿದರೂ ಇನ್ನೂ ಸುಳಿವು ಲಭ್ಯವಾಗಿಲ್ಲ.