ಕೊಚ್ಚಿ: ಎರ್ನಾಕುಲಂ ಜಿಲ್ಲೆಯ ಕಿಝಕ್ಕಂಬಲಂ ಪ್ರದೇಶದಲ್ಲಿ ಕ್ರಿಸ್‌ಮಸ್ ದಿನದಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 50 ಮಂದಿ ಆರೋಪಿಗಳನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಶನಿವಾರ ರಾತ್ರಿ, ಕಿಝಕ್ಕಂಬಳಂನಲ್ಲಿ ಭಾರತದ ಈಶಾನ್ಯ ಭಾಗದಿಂದ ವಲಸೆ ಕಾರ್ಮಿಕರ ಕ್ರಿಸ್ಮಸ್ ದಿನದ ಆಚರಣೆಗಳು ಹಿಂಸಾಚಾರಕ್ಕೆ ತಿರುಗಿದ್ದವು, ಹಲವಾರು ಪೊಲೀಸರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಗಿತ್ತು, ಎರಡು ಪೊಲೀಸ್ ಜೀಪ್‌ಗಳಿಗೆ ಬೆಂಕಿ ಹಚ್ಚಲಾಗಿತ್ತು. ಹಿಂಸಾಚಾರದಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಸೇರಿದಂತೆ ಎಂಟು ಮಂದಿ ಪೊಲೀಸರು ಗಾಯಗೊಂಡಿದ್ದರು.
ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು, ಒಂದು ಅಧಿಕಾರಿಗಳ ಮೇಲಿನ ಹಲ್ಲೆಗೆ ಕೊಲೆಯ ಯತ್ನದ ಆರೋಪ ಮತ್ತು ಇನ್ನೊಂದು ಆಸ್ತಿ ನಾಶದ ಆರೋಪದಲ್ಲಿ 50 ಮಂದಿಯನ್ನು ಬಂಧಿಸಿದ್ದಾರೆ. ಭಾನುವಾರ ಬೆಳಗ್ಗೆಯೇ ಪೊಲೀಸರು 150 ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು.
ಡಿ.25ರಂದು ರಾತ್ರಿ ನಡೆದ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದರಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಗುರುತಿಸಿ ಸಾಕ್ಷ್ಯ ಸಂಗ್ರಹಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಘಟನೆಯ ಹಿಂದೆ ಯಾವುದೇ ಕ್ರಿಮಿನಲ್ ಉದ್ದೇಶವಿಲ್ಲ. ಶಿಬಿರಕ್ಕೆ ಡ್ರಗ್ಸ್ ತರಲಾಗಿತ್ತು ಮತ್ತು ಕೆಲವು ಕೆಲಸಗಾರರು ಅದರ ಪ್ರಭಾವಕ್ಕೆ ಒಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.