ಮಲಪ್ಪುರಂ : ತಾನು ಪ್ರೀತಿಸಿದ ದಲಿತ ಯುವಕನನ್ನು ಮದುವೆಯಾಗಲಿದ್ದ ಮೇಲ್ಜಾತಿಯ 22ರ ಹರೆಯದ ತರುಣಿಯನ್ನು ಆಕೆಯ ತಂದೆ, ಮದುವೆಯ ಮುನ್ನಾ ದಿನ ಕೋಪಾವೇಶದಲ್ಲಿ ಇರಿದು ಕೊಂದಿರುವ ಘಟನೆ ವರದಿಯಾಗಿದೆ. ಈ ಆಘಾತಕಾರಿ “ಮರ್ಯಾದೆಗೇಡು ಹತ್ಯೆ’ಯು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಸರಕಾರಿ ಒಡೆತನದ ಮಂಜೇರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಟೆಕ್ನೀಶಿಯನ್ ಆಗಿ ಕೆಲಸ ಮಾಡುತ್ತಿದ್ದ ಅಥಿರಾ ಗೆ ಕಳೆದ ಕೆಲವು ವರ್ಷಗಳಿಂದ ಲಕ್ನೋದಲ್ಲಿ ನಿಯೋಜನೆಗೊಂಡಿದ್ದ ಸೈನಿಕ ಬೃಜೇಶ್ ಜತೆಗೆ ಪ್ರಣಯ ಸಂಬಂಧವಿತ್ತು.
ಹುಡುಗಿಯ ಕುಟುಂಬದವರು ಎಳವ ಜಾತಿಗೆ (ಒಬಿಸಿ) ಸೇರಿದವರಾದರೆ ಬೃಜೇಶ್ ಎಸ್‌ಸಿ ವರ್ಗಕ್ಕೆ ಸೇರಿದವನಾಗಿದ್ದಾನೆ. ಈ ಜೋಡಿ ಹಿಂದೊಮ್ಮೆ ಮನೆಯಿಂದ ಓಡಿ ಹೋಗಿತ್ತು. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ಮರಳಿ ಬಂದಿದ್ದರು.
ಅಥಿರಾ ಳ ತಂದೆ 42ರ ಹರೆಯದ ರಾಜನ್ ಒಬ್ಬ ಕೂಲಿ ಕಾರ್ಮಿಕ; ಒಲ್ಲದ ಮನಸ್ಸಿನಿಂದ ಮಗಳು ಬೃಜೇಶ್‌ನನ್ನು ಮದುವೆಯಾಗುವುದಕ್ಕೆ ಒಪ್ಪಿಗೆ ನೀಡಿದ್ದ.
ಮದುವೆಯ ಮುನ್ನಾ ದಿನ ಸಿದ್ಧತೆಗಳು ಜೋರಾಗಿ ನಡೆಯುತ್ತಿದ್ದಾಗ ತಂದೆ ಮತ್ತು ಮಗಳ ನಡುವೆ ಮಾತಿಗೆ ಮಾತು ಬೆಳೆದು ಪರಾಕಾಷ್ಠೆಗೆ ಹೋಯಿತು. ಮದ್ಯ ಸೇವಿಸಿದ್ದ ರಾಜನ್ ಸಿಟ್ಟಿನ ಭರದಲ್ಲಿ ಮಗಳನ್ನು ಅಡುಗೆ ಮನೆ ಚೂರಿಯಿಂದ ಹಲವು ಬಾರಿ ಮಾರಣಾಂತಿಕವಾಗಿ ಇರಿದ. ಅಥಿರಾಳನ್ನು ಕೂಡಲೇ ಆಸ್ಪತ್ರೆಗೆ ಒಯ್ಯಲಾಯಿತಾದರೂ ಅಲ್ಲಿ ಆಕೆ ಅಸು ನೀಗಿದಳು.
ಪೊಲೀಸರು ಕೊಲೆ ಆರೋಪಿ ರಾಜನ್‌ನನ್ನು ಬಂಧಿಸಿ, ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.